

ನವದೆಹಲಿ: ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಕೊಲ್ಲಿಸಲು ಮೂವರನ್ನು ನೇಮಿಸಿ ಕೊನೆಗೆ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡು ಆ ಮತ್ತೊಬ್ಬಳ ವಿಷಯವನ್ನು ಬಾಯ್ಬಿಟ್ಟ ಪ್ರಕರಣವೊಂದು ವರದಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಹಾಗೂ ಆ ಮೂವರನ್ನೂ ಪೊಲೀಸರು ಬಂಧಿಸಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯ ಮಾಳವೀಯ ನಗರದಲ್ಲಿ ಇಂಥದ್ದೊಂದು ಪ್ರಕರಣ ಗುರುವಾರ ನಡೆದಿದ್ದು, 33 ವರ್ಷದ ಮಹಿಳೆಯೊಬ್ಬಳು ಪತಿಯಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಆರೋಪಿ ಪತಿ ಕೇಬಲ್ ಆಪರೇಟರ್ ಆಗಿದ್ದು, ಆತನಿಗೆ ಗೋವಿಂದಪುರಿ ಎಂಬಲ್ಲಿನ ಮೂವರು ಸಹಕರಿಸಿದ್ದಾರೆ. ಪತ್ನಿಯ ಕೊಲೆಗಾಗಿ ಪತಿ ಈ ಮೂವರಿಗೆ 5 ಲಕ್ಷ ರೂ. ಕೊಡುವುದಾಗಿ ಮಾತುಕೊಟ್ಟಿದ್ದ. ಆರೋಪಿಗಳು ಆಕೆ ಮನೆಯಲ್ಲಿ ಒಂಟಿಯಾಗಿದ್ದಾಗ ಹೋಗಿ 20 ಸಲ ಇರಿದು ಸಾಯಿಸಿದ್ದರು. ಬಳಿಕ ಪ್ರಕರಣದ ದಾರಿ ತಪ್ಪಿಸಲು ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ದೋಚಿಕೊಂಡು ಹೋಗಿದ್ದರು.
ಗುರುವಾರ ರಾತ್ರಿ 7ರ ಹಾಗೆ ಚೂರಿ ಇರಿತಕ್ಕೊಳಗಾಗಿ ಮೃತಪಟ್ಟಿದ್ದ ಪತ್ನಿಯನ್ನು ಪತಿಯ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾಗ ಅನುಮಾನ ಬಂದ ಆಸ್ಪತ್ರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಮೇರೆಗೆ ಆಸ್ಪತ್ರೆಗೆ ತೆರಳಿ ಪರಿಶೀಲಿಸಿ ತನಿಖೆ ನಡೆಸಿದಾಗ ಪತಿಯೇ ಕೊಲೆ ಮಾಡಿಸಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂಬುದಾಗಿ ದಕ್ಷಿಣ ಜಿಲ್ಲಾ ಡಿಸಿಪಿ ಬೆನಿಟಾ ಮೇರಿ ಜೈಕರ್ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿಯ ಫೋನ್ ಕರೆ ಮಾಹಿತಿಗಳನ್ನು ಪರಿಶೀಲಿಸಿದಾಗ ಆತ ಮಹಿಳೆಯೊಬ್ಬಳ ಜತೆ ನಿರಂತರ ಸಂಪರ್ಕದಲ್ಲಿ ಇರುವುದು ಬಹಿರಂಗಗೊಂಡಿತ್ತು. ಈ ಬಗ್ಗೆ ಪ್ರಶ್ನಿಸಿದಾಗ ಆತ ಕುಸಿದು ಬಿದ್ದು ತಪ್ಪೊಪ್ಪಿಕೊಂಡಿದ್ದಾನೆ. ವಿವಾಹೇತರ ಸಂಬಂಧದ ಬಗ್ಗೆ ಪತ್ನಿಗೆ ಗೊತ್ತಾಗಿದೆ. ಆಕೆ ಕಳಿಸಿದ್ದ ವಾಯ್ಸ್ ಕ್ಲಿಪ್ವೊಂದನ್ನು ಪತ್ನಿ ಕೇಳಿದ್ದು, ಆ ಬಳಿಕದಿಂದ ಇಬ್ಬರ ಮಧ್ಯೆ ಸಂಘರ್ಷ ಉಂಟಾಗಿದೆ ಎಂಬುದನ್ನು ತಿಳಿಸಿದ್ದಾನೆ.