

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಹಲವರು ಹಲವಾರು ರೀತಿಯಲ್ಲಿ ಮತ್ತೆ ಮತ್ತೆ ಸ್ಮರಿಸಿಕೊಳ್ಳುತ್ತಿರುವುದಷ್ಟೇ ಅಲ್ಲದೆ, ಅಪ್ಪು ಸ್ಮರಣಾರ್ಥ ವಿವಿಧ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳುತ್ತಿದ್ದಾರೆ. ಪುನೀತ್ ರಾಜಕುಮಾರ್ ಅವರು ಬಾನ ದಾರಿಯಲ್ಲಿ ಜಾರಿ ಹೋದರೂ ಜನರ ಮನಸಲ್ಲಿ ಧ್ರುವತಾರೆಯಾಗಿ ಕಂಗೊಳಿಸುತ್ತಿದ್ದಾರೆ. ಚಂದನವನದ ಈ ತಾರೆಗೆ ಇದೀಗ ಮತ್ತೊಂದಷ್ಟು ನಕ್ಷತ್ರಗಳು ತಮ್ಮ ನಮನ ಸಲ್ಲಿಸಲು ಮುಂದಾಗಿವೆ.
ಅಂದರೆ ಪವರ್ ಸ್ಟಾರ್ಗೆ ಸಿಂಗಲ್, ಡಬಲ್, ಟ್ರಿಪಲ್ ಸ್ಟಾರ್ಗಳೂ ನಮನ ಸಲ್ಲಿಸಲಿದ್ದಾರೆ. ಅರ್ಥಾತ್, ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಪುನೀತ್ ಸ್ಮರಣಾರ್ಥ ಸೈಕಲ್ ಜಾಥಾ ಹಮ್ಮಿಕೊಂಡಿದ್ದಾರೆ. ಕರ್ನಾಟಕ ರಾಜ್ಯ ಮೀಸಲು ಪೊಲೀಸ್, ಬೆಂಗಳೂರು ಸಂಚಾರ ಪೊಲೀಸ್ ಜಂಟಿಯಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ನ. 21ರ ಭಾನುವಾರ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಪೊಲೀಸರು ಹಮ್ಮಿಕೊಂಡಿರುವ ಕನ್ನಡ ರಾಜ್ಯೋತ್ಸವದ ಜತೆಗೇ ಈ ಸೈಕಲ್ ಜಾಥಾ ನಡೆಯಲಿದ್ದು, ಚಿತ್ರನಟ ಡಾ.ಶಿವರಾಜಕುಮಾರ್ ಅವರು ಸೈಕಲ್ ಜಾಥಾಗೆ ಚಾಲನೆ ನೀಡಲಿದ್ದಾರೆ ಎಂದು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ನ ಅಪರ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ತಿಳಿಸಿದ್ದಾರೆ.