ನಮ್​ ಕಾರು ತೇಲ್ತಿತ್ತು, ಇಂಜಿನ್ನೇ ಆಫ್​ ಆಯ್ತು..; ತಿರುಪತಿಯಲ್ಲಿ ಭಯಂಕರ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದನ್ನು ವಿವರಿಸಿದ ನಟಿ ತಾರಾ

ನಮ್​ ಕಾರು ತೇಲ್ತಿತ್ತು, ಇಂಜಿನ್ ಆಫ್​ ಆಯ್ತು;ತಿರುಪತಿಯ ಭಯಾನಕ ಪರಿಸ್ಥಿತಿ ವಿವರಿಸಿದ ನಟಿ ತಾರಾ#TirupatiRain#Tara - youtube
Published on

ಬೆಂಗಳೂರು: ಭಾರಿ ಮಳೆಗೆ ತಿರುಪತಿ ಸಂಪೂರ್ಣವಾಗಿ ಜಲಾವೃತಗೊಂಡು ಪ್ರವಾಹ ಪರಿಸ್ಥಿತಿಯಲ್ಲಿ ಇರುವುದು ಬಹುತೇಕ ಎಲ್ಲರಿಗೂ ಈಗ ಗೊತ್ತಿರುವಂಥದ್ದೇ. ಆದರೆ ಅಂಥದ್ದೊಂದು ಪರಿಸ್ಥಿತಿಯಲ್ಲಿ ಅಕ್ಷರಶಃ ಸಿಕ್ಕಿಹಾಕಿಕೊಂಡು ಹೇಗೋ ಪಾರಾಗಿ ಬಂದಿರುವುದನ್ನು ನಟಿ ತಾರಾ ಹೇಳಿಕೊಂಡಿದ್ದಾರೆ.

ಪೂರ್ವನಿಗದಿಯಂತೆ ಇಂದು ದೇವರ ದರ್ಶನ ಮಾಡಲು ದಿನ ನಿಗದಿ ಮಾಡಿಕೊಂಡಿದ್ದ ನಟಿ ತಾರಾ, ನಿನ್ನೆ ಬೆಳಗ್ಗೆಯೇ ಬೆಂಗಳೂರಿನಿಂದ ತಿರುಮಲ ತಿರುಪತಿಗೆ ಕಾರಿನಲ್ಲಿ ಮನೆ ಮಂದಿ ಜತೆ ಹೊರಟಿದ್ದರು. ದಾರಿಯಲ್ಲಿ ಹೋಗುವಾಗ ಸ್ವಲ್ಪ ಮಳೆ ಬಂದಿದ್ದರಿಂದ ಅವರು ಅಲ್ಲಿನ ಪರಿಸ್ಥಿತಿ ಕುರಿತು ವಿಚಾರಿಸಿಕೊಂಡಿದ್ದಾರೆ. ಇಲ್ಲಿಯೂ ಮಳೆ ಬರುತ್ತಿದೆ, ಆದರೆ ದರ್ಶನಕ್ಕೆ ಏನೂ ತೊಂದರೆ ಇಲ್ಲ ಎಂದು ಅವರು ಖಚಿತ ಪಡಿಸಿದ್ದರಿಂದ ಪ್ರಯಾಣ ಮುಂದುವರಿಸಿದ್ದರು.

ಸ್ವಲ್ಪಹೊತ್ತಿನಲ್ಲಿ ಮುಂದಕ್ಕೆ ಹೋಗುತ್ತಿದ್ದಂತೆ ಇಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ, ತಿರುಮಲಕ್ಕೆ ಬರುವುದು ಬೇಡ, ತಿರುಪತಿಯಲ್ಲಿಯೇ ಉಳಿದುಕೊಳ್ಳಿ, ಬೆಳಗ್ಗೆ ದೇವರ ದರ್ಶನ ಮಾಡಬಹುದು ಎಂದು ಮಾಹಿತಿ ನೀಡಿದ ದೇವಸ್ಥಾನದವರೇ ತಿರುಪತಿಯಲ್ಲಿ ರೂಮ್​ ವ್ಯವಸ್ಥೆ ಮಾಡಿಸಿದ್ದನ್ನು ತಾರಾ ಹೇಳಿಕೊಂಡಿದ್ದಾರೆ.

ತಿರುಪತಿಯಲ್ಲಿನ ರೂಮ್​ಗೆ ತೆರಳುವಾಗಲೇ ನಮ್ಮ ಕಾರ್​ ಕಿಟಕಿಯವರೆಗೆ ನೀರು ಬಂದಿತ್ತು. ಸ್ವಲ್ಪ ಮುಂದೆ ಹೋಗುವಷ್ಟರಲ್ಲಿ ಕಾರು ತೇಲಲಾರಂಭಿಸಿ, ಇಂಜಿನ್ ಆಫ್ ಆಯ್ತು. ಡ್ರೈವರ್ ದಿಗ್ಭ್ರಾಂತರಾದರು. ಹೇಗೋ ಮತ್ತೆ ಮತ್ತೆ ಪ್ರಯತ್ನಿಸಿದಾಗ ಕಾರು ಸ್ಟಾರ್ಟ್​ ಆಯಿತು. ತಕ್ಷಣ ಅಲ್ಲಿಂದ ಹೊರಟು ಬೆಂಗಳೂರು ಹೆದ್ದಾರಿ ತಲುಪಿದೆವು. ಹಾಗೆ ಹತ್ತು ಕಿ.ಮೀ. ದೂರ ಬರುವಷ್ಟರಲ್ಲಿ ದೇವಸ್ಥಾನದಿಂದಲೂ ಕರೆ ಬಂತು. ಇನ್ನೂ ಎರಡು ದಿನ ಪರಿಸ್ಥಿತಿ ಹೀಗೇ ಇರುತ್ತದೆ, ವಾಪಸ್ ಹೊರಡಿ ಎಂದರು ಎಂಬುದಾಗಿ ತಾರಾ ವಿವರಿಸಿದ್ದಾರೆ.

ಮುಂದೆ ಚಿತ್ರದುರ್ಗ ತಲುಪಿದಾಗ ಕತ್ತಲಾಗುತ್ತಿತ್ತು. ರಸ್ತೆ ಕಾಣುತ್ತಿರಲಿಲ್ಲ, ಎದುರುಗಡೆ ಹೋಗುತ್ತಿದ್ದ ಕಾರು ತೇಲುತ್ತ ಹೋದಂತಿತ್ತು. ಆಗ ಯಾವುದಾದರೂ ಹಳ್ಳಿ ಸೇರಿಕೊಂಡು ಉಳಿದು ಬೆಳಗ್ಗೆ ಹೋಗೋಣ ಅಂತ ಅಡ್ಡರಸ್ತೆಗೆ ಕಾರು ತಿರುಗಿಸಿದೆವು. ಹಿಂದೆ ನೋಡಿದರೆ ನಮ್ಮ ಹಿಂದೆಯೇ ಬಹಳಷ್ಟು ವಾಹನಗಳು ಬರುತ್ತಿದ್ದವು. ಹಾಗೆ ಕಡಿದಾದ ರಸ್ತೆಯಲ್ಲಿ ಕತ್ತಲೆಯಲ್ಲಿ ಸುಮಾರು ಮೂರು ಗಂಟೆ ಅಡ್ಡಾಡಿದ ಬಳಿಕ ಮತ್ತೆ ಬೆಂಗಳೂರು ಹೆದ್ದಾರಿಗೆ ಹೇಗೋ ಸೇರಿಕೊಂಡೆವು.

ಅಲ್ಲಿಂದ ಅಬ್ಬಾ ಬಚಾವಾದೆವು ಎಂದುಕೊಂಡು ದೇವರ ಧ್ಯಾನ ಮಾಡುತ್ತ ಬೆಂಗಳೂರು ತಲುಪಿಕೊಂಡೆವು. ನಾವು ಅಷ್ಟೆಲ್ಲ ವಿಚಾರಿಸಿಕೊಂಡು ಹೋದರೂ ಸಮಸ್ಯೆ ಎದುರಿಸಬೇಕಾಯಿತು. ಮಳೆಗಾಲದಲ್ಲಿ ಪ್ರಯಾಣವೇ ಒಳ್ಳೆಯದಲ್ಲ. ಇತರರಿಗೆ ಮಾಹಿತಿಗೆ ಇರಲಿ ಎಂದು ನನ್ನ ಅನುಭವ ಹೇಳಿಕೊಳ್ಳುತ್ತಿದ್ದೇನೆ ಎಂಬುದಾಗಿ ತಾರಾ ತಾವು ಪಟ್ಟ ಕಷ್ಟವನ್ನು ವಿಡಿಯೋ ಮಾಡಿ ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net