ಮಂಗಳಾದೇವಿ ಮಡಿಲಲ್ಲಿ ರಕ್ತಚರಿತೆ: ಗರುಡ ಗಮನ, ವೃಷಭ ವಾಹನ ಸಿನಿಮಾ ವಿಮರ್ಶೆ

GGVV
Published on
  • ಚಿತ್ರ: ಗರುಡ ಗಮನ ವೃಷಭ ವಾಹನ
  • ನಿರ್ದೇಶನ: ರಾಜ್.ಬಿ. ಶೆಟ್ಟಿ
  • ನಿರ್ಮಾಣ: ಲೈಟರ್ ಬುದ್ಧ ಪ್ರೊಡಕ್ಷನ್ಸ್
  • ತಾರಾಗಣ: ರಾಜ್.ಬಿ. ಶೆಟ್ಟಿ, ರಿಷಬ್ ಶೆಟ್ಟಿ, ಗೋಪಾಲ ದೇಶಪಾಂಡೆ ಇತರರು.

| ಮಂಜು ಕೊಟಗುಣಸಿ ಬೆಂಗಳೂರು

ಹರಿಗೆ (ರಿಷಬ್ ಶೆಟ್ಟಿ) ಚೂರು ಯಾರಾದರೂ ಏನಾದರೂ ಅಂದರೆ ಶಿವ (ರಾಜ್ ಬಿ ಶೆಟ್ಟಿ) ಕೆರಳುತ್ತಾನೆ. ಕ್ಷಣಾರ್ಧದಲ್ಲಿ ಅಲ್ಲಿ ರಕ್ತ ಹೊಳೆಯಾಗಿ ಹರಿಯುತ್ತದೆ. ಆ ಸಾವಿನ ನೆನಪಿಗೆ ಸತ್ತವನ ಚಪ್ಪಲಿ ಧರಿಸುತ್ತಾನೆ ಶಿವ. ಇತ್ತ ಹರಿ ಮೊಗದಲ್ಲಿ ಶಿವನ ಕಂಡು ಗೆಲುವಿನ ಭಾವ. ಪ್ರತಿ ಸಾವಿನ ಬಳಿಕ ಹರಿ, ಕದ್ರಿಯಲ್ಲಿ ಶುದ್ಧನಾದರೆ, ಶಿವ ಮಕ್ಕಳ ಜತೆ ಕ್ರಿಕೆಟ್ ಆಡ್ತಾನೆ...

ಹೀಗೆ ಒಂದಷ್ಟು ವಿಚಿತ್ರ ಮತ್ತು ವಿಶೇಷವಾದುದನ್ನೇ ಕಾಣಬಹುದು ‘ಗರುಡ ಗಮನ ವೃಷಭ ವಾಹನ’ದಲ್ಲಿ. ಇದೊಂದು ಟಿಪಿಕಲ್ ರೌಡಿಸಂ ಸಿನಿಮಾ ಎಂದು ಹೇಳುವುದಕ್ಕಿಂತ, ಮಂಗಳೂರು ಶೈಲಿಯ, ಆ ಘಮದ, ಆ ಮಣ್ಣಿನ ಸಿನಿಮಾ ಎನ್ನಬಹುದು. ಭಾಷೆ, ವೇಷ, ಮಾತಿನ ಧಾಟಿ ಎಲ್ಲವೂ ಇಲ್ಲಿ ಆ ಸೊಗಡನ್ನೇ ನೆನಪಿಸುತ್ತದೆ.

‘ಒಂದು ಮೊಟ್ಟೆಯ ಕಥೆ’ ಸಿನಿಮಾದಲ್ಲಿ ನವಿರಾದ ಹಾಸ್ಯವನ್ನು ಪ್ರೇಕ್ಷಕನ ತಟ್ಟೆಗೆ ಬಡಿಸಿದ್ದ ನಿರ್ದೇಶಕ ಮತ್ತು ನಟ ರಾಜ್.ಬಿ. ಶೆಟ್ಟಿ, ಇಲ್ಲಿ ಬೇರೆಯದೇ ಭಕ್ಷ್ಯವನ್ನು ಸಿದ್ಧಪಡಿಸಿದ್ದಾರೆ. ಮಂಗಳೂರಿನ ಮಂಗಳಾದೇವಿಯ ಮಡಿಲಲ್ಲಿ ರಕ್ತಚರಿತೆಯನ್ನು ಅಷ್ಟೇ ಕಡುಗೆಂಪಾಗಿ ತೋರಿಸಿದ್ದಾರೆ. ಚೋಟುದ್ದುದ ಶಿವನ ಆಯುಧವನ್ನೂ ಅಷ್ಟೇ ಹರಿತವಾಗಿಯೂ ಸಾಣೆ ಹಿಡಿಸಿದ್ದಾರೆ. ಬೇರೆ ವಿಚಾರ ಮಾಡುವ ಪ್ರಮೇಯವೇ ಇಲ್ಲ ಕೊಲೆಯೊಂದೇ ಇಲ್ಲಿ ಅಂತಿಮ! ಇಷ್ಟಕ್ಕೂ ಚಿತ್ರದ ಕಥೆ ಏನು? ಆ ಕೌತುಕವನ್ನು ಸಿನಿಮಾ ನೋಡಿಯೇ ಸವಿಯಬೇಕು.

ಇಡೀ ಚಿತ್ರದಲ್ಲಿ ಒಂದಷ್ಟು ತಿರುವುಗಳು ಕಾಣಿಸುತ್ತವೆ. ಅಲ್ಲಲ್ಲಿ ಕುಟುಂಬ ಪ್ರೀತಿಯೂ ಕಿವಿಗೆ ಕೇಳಿಸುತ್ತದೆ. ಪೊಲೀಸಪ್ಪನ ಸೇಡು ಇಡೀ ಚಿತ್ರವನ್ನು ಬೇರೆಯದೇ ಮಗ್ಗುಲಿಗೆ ಹೊರಳಿಸಿ ಅಚ್ಚರಿ ಮೂಡಿಸುತ್ತದೆ. ಕೊನೆಗೆ ಆತನೂ ಇಲ್ಲಿ ಶಾಂತನಾಗುತ್ತಾನೆ! ಇಲ್ಲಿ ನಟ ರಾಜ್ ಶೆಟ್ಟಿ ಹೊಸ ವ್ಯಕ್ತಿಯಾಗಿ ಕಾಣಿಸುತ್ತಾರೆ. ಸೌಮ್ಯ ಸ್ವಭಾವ ಬದಿಗಿಟ್ಟು, ಶಿವನ ಹೆಸರಿಗೆ ತಕ್ಕಂತೆ ರೌದ್ರಾವತಾರವನ್ನೇ ತಾಳಿದ್ದಾರೆ. ಆ ಸಿಟ್ಟು, ಸೆಡವು, ಕೋಪ, ತಣ್ಣನೆಯ ಕ್ರೌರ್ಯವನ್ನು ಕಣ್ಣಿನಲ್ಲಿಯೇ ಲೀಲಾಜಾಲವಾಗಿ ತೋರಿಸಿದ್ದಾರೆ. ಮಳೆ ನಡುವೆಯೂ ಅವರ ಹುಲಿಕುಣಿತ ವ್ಹಾ ಅನಿಸುತ್ತದೆ! ಒಟ್ಟಾರೆ ರಾಜ್ ಅವರ ಆ ಬದಲಾವಣೆ ಪೂರ್ಣಾಂಕ ಗಿಟ್ಟಿಸಿಕೊಳ್ಳುತ್ತದೆ.

ಇತ್ತ ಅವರೆದುರಿಗೆ ಜಿದ್ದಿಗೆ ಬಿದ್ದಂತೆ ನಟಿಸಿದ್ದಾರೆ ರಿಷಬ್ ಶೆಟ್ಟಿ. ಎಸ್​ಐ ಪಾತ್ರಧಾರಿ ಗೋಪಾಲ್ ದೇಶಪಾಂಡೆ ಚಿತ್ರಕ್ಕೆ ಮತ್ತೊಂದು ಬೋನಸ್! ತೆರೆಮೇಲೆ ಕಾಣುವ ಸಣ್ಣ ಸಣ್ಣ ಪಾತ್ರಗಳಿಗೂ ಜೀವವಿದೆ. ಇದೆಲ್ಲವನ್ನು ಬದಿಗಿಟ್ಟರೆ, ಚಿತ್ರದ ಅವಧಿ ಕೊಂಚ ಹೆಚ್ಚೇ ಇರುವುದರಿಂದ ಪ್ರೇಕ್ಷಕನ ಕಣ್ಣೂ ಆಚೀಚೆ ನೋಡುತ್ತದೆ. ಸಿಂಕ್ ಸೌಂಡ್​ನಲ್ಲಿ ಚಿತ್ರಿತವಾಗಿರುವುದರಿಂದ ಅಲ್ಲಲ್ಲಿ ಸಂಭಾಷಣೆ ಸ್ಪಷ್ಟವಾಗುವುದಿಲ್ಲ. ಪ್ರವೀಣ್ ಶ್ರೀಯಾನ್ ಕ್ಯಾಮರಾ ಕೋನಗಳಲ್ಲಿ ಅಚ್ಚುಕಟ್ಟಾಗಿಯೇ ದೃಶ್ಯಗಳು ಸೆರೆಯಾಗಿವೆ. ಒಂದೇ ಹಾಡಿದ್ದರೂ, ಗುನುಗುವಂತಿದೆ. ಹಿನ್ನೆಲೆ ಸಂಗೀತ ಇಡೀ ಚಿತ್ರವನ್ನು ಹದವಾಗಿ ತೂಗಿಸಿಕೊಂಡು ಹೋಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net