

ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯ ವೈದ್ಯೆಯೊಬ್ಬಳು ಅನ್ಯಧರ್ಮದ ಯುವಕನನ್ನು ಮದುವೆಯಾಗಲು ಮುಂದಾಗಿದ್ದು, ಅದರ ಆಹ್ವಾನ ಪತ್ರಿಕೆ ವೈರಲ್ ಆಗಿ ಕರಾವಳಿಯಲ್ಲಿ ಸಂಚಲನವನ್ನು ಸೃಷ್ಟಿಸಿದೆ. ಇನ್ನೇನು ಕೆಲವೇ ದಿನಗಳಲ್ಲಿ ಆಕೆಯ ಮದುವೆ ಆಗಲಿದೆ ಎಂಬಷ್ಟರಲ್ಲಿ ಸ್ವಾಮೀಜಿಯೊಬ್ಬರು ಮಧ್ಯಪ್ರವೇಶಿಸಿದ್ದಾರೆ.
ಮಂಗಳೂರಿನ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ ಕಾಲೇಜಿನಲ್ಲಿ ಕೇರಳ ಮೂಲದ ಮುಸ್ಲಿಮ್ ಯುವಕನನ್ನು ಪ್ರೀತಿಸುತ್ತಿದ್ದು, ಆತನನ್ನು ಮದುವೆಯಾಗುವ ಸಂಬಂಧ ಮನೆಯವರಿಂದ ಒಪ್ಪಿಗೆ ಪಡೆದು, ಎಲ್ಲವೂ ನಿಗದಿಯಾಗಿ ಆಹ್ವಾನ ಪತ್ರಿಕೆ ಕೂಡ ಮುದ್ರಣಗೊಂಡಿತ್ತು. ಈ ಕರೆಯೋಲೆ ವೈರಲ್ ಆಗಿದ್ದರಿಂದ ಮದುವೆ ವಿಚಾರ ವಿವಾದಾತ್ಮಕವಾಗಿ ಪರಿಣಮಿಸಿತ್ತು.
ಈಗಾಗಲೇ ನಿಶ್ಚಯವಾಗಿರುವ ಪ್ರಕಾರ ಈ ವೈದ್ಯಕೀಯ ವಿದ್ಯಾರ್ಥಿನಿ ನ.29ರಂದು ಕೇರಳದ ಕಣ್ಣೂರಿನಲ್ಲಿ ಡಾ.ಜಾಫರ್ ಎಂಬಾತನನ್ನು ಮದುವೆ ಆಗುವುದಿತ್ತು. ಆದರೆ ಆ ಯುವತಿ ಈ ಮದುವೆ ಮಾಡಿಕೊಳ್ಳದಂತೆ ಮನವೊಲಿಸಲು ಆಕೆಯ ಮನೆಗೆ ವಜ್ರದೇಹಿ ಸ್ವಾಮೀಜಿ ತೆರಳಿದ್ದರು.
ಗುರುಪುರದ ವಜ್ರದೇಹಿ ಮಠದ ಶ್ರೀರಾಜಶೇಖರಾನಂದ ಸ್ವಾಮೀಜಿ ಅವರು ಆ ಯುವತಿಯ ಮನೆಗೆ ಇಂದು ತೆರಳಿ, ಯುವತಿಯ ನಿರ್ಧಾರ ಬದಲಿಸಲು ಯತ್ನಿಸಿದ್ದಾರೆ. ಅನ್ಯಧರ್ಮದ ಯುವಕನನ್ನು ಮದುವೆಯಾದರೆ ಎದುರಿಸಬೇಕಾದ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿದ್ದಾರೆ. ಸುದೀರ್ಘ ಮಾತುಕತೆ ಬಳಿಕ ಸ್ವಾಮೀಜಿಯ ಮಾತಿಗೆ ಸಮ್ಮತಿ ಸೂಚಿಸಿದ ಯುವತಿ ಸದ್ಯ ಈ ಮದುವೆಯಿಂದ ಹಿಂದಕ್ಕೆ ಸರಿದಿದ್ದಾಳೆ.