LIVE: ನ್ಯೂ ಇಂಡಿಯಾ ಹ್ಯಾಷ್​ಟ್ಯಾಗ್​ನೊಂದಿಗೆ ಏನು ಹೇಳ್ತಿದ್ದಾರೆ ಪ್ರಧಾನಿ ಮೋದಿ...

MODI
Published on

ನವದೆಹಲಿ: ಕರೊನಾ ಸಂಕಷ್ಟದ ನಡುವೆಯೇ ಆಗಮಿಸಿರುವ ನವರಾತ್ರಿ ಮತ್ತು ದೀಪಾವಳಿ ಹಬ್ಬಗಳ ಸಂದರ್ಭದಲ್ಲಿಯೇ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರನ್ನು ಉದ್ದೇಶಿಸಿ ಮಾತನಾಡುವುದಾಗಿ ಹೇಳಿ ಕುತೂಹಲ ಮತ್ತು ನಿರೀಕ್ಷೆ ಗರಿಗೆದರುವಂತೆ ಮಾಡಿದ್ದಾರೆ. ಅವರ ಭಾಷಣದ ನೇರ ಪ್ರಸಾರ ಇಲ್ಲಿದೆ. ವೀಕ್ಷಣೆಗೆ ಮೇಲಿನ ವಿಡಿಯೋ ಕ್ಲಿಕ್ಕಿಸಿ..

ಪ್ರಧಾನಿ ಮೋದಿಯವರ ಭಾಷಣದ ಪ್ರಮುಖಾಂಶಗಳು

ಈ ಹಬ್ಬದ ಸಂದರ್ಭದಲ್ಲಿ, ಮಾರುಕಟ್ಟೆಗಳು ಮತ್ತೆ ಚೇತರಿಸಿಕೊಂಡಿವೆ. ಲಾಕ್​ಡೌನ್ ಈಗಷ್ಟೇ ಮುಕ್ತಾಯವಾಗಿದೆ ಎಂಬುದನ್ನು ನಾವು ನೆನಪಿಸಿಕೊಳ್ಳಬೇಕಾಗುತ್ತದೆ. ಆದಾಗ್ಯೂ, ಕೋವಿಡ್ 19 ಇನ್ನೂ ಕೊನೆಗೊಂಡಿಲ್ಲ. ಕಳೆದ 7ರಿಂದ 8 ತಿಂಗಳ ಅವಧಿಯಲ್ಲಿ ಪ್ರತಿಯೊಬ್ಬ ಭಾರತೀಯನ ಪ್ರಯತ್ನದ ಫಲವಾಗಿ ಭಾರತದಲ್ಲಿ ಸ್ಥಿರತೆ ಕಾಯ್ದುಕೊಳ್ಳಲಾಗಿದೆ. ಅದನ್ನು ಹಾಳುಗೆಡಹುವ ಕೆಲಸ ನಮ್ಮಿಂದ ಆಗದಂತೆ ಎಚ್ಚರಿಕೆ ವಹಿಸಬೇಕು.

ಜನತಾ ಕರ್ಫ್ಯೂನಿಂದ ಹಿಡಿದು ಇಂದಿನ ತನಕ ಭಾರತೀಯರಾದ ನಾವು ದೀರ್ಘ ಅವಧಿಯನ್ನು ಕಳೆದಿದ್ದೇವೆ. ಈ ಅವಧಿಯಲ್ಲಿ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದ್ದೇವೆ. ಈಗಷ್ಟೇ ಆರ್ಥಿಕ ಚಟುವಟಿಕೆಗಳು ನಿಧಾನವಾಗಿ ಚೇತರಿಸಿಕೊಳ್ಳುತ್ತಿವೆ. ಎಲ್ಲಿಯ ತನಕ ಕರೊನಾಕ್ಕೆ ಲಸಿಕೆ ಅಭಿವೃದ್ಧಿ ಆಗುವುದಿಲ್ಲವೋ ಅಲ್ಲಿಯ ತನಕ ನಾವು ಅದರ ವಿರುದ್ಧದ ಹೋರಾಟವನ್ನು ಮುಂದುವರಿಸಬೇಕಾಗುತ್ತದೆ.

ಇಂದು ದೇಶದಲ್ಲಿ ರಿಕವರಿ ರೇಟ್​ ಚೆನ್ನಾಗಿದೆ. ಮರಣ ಪ್ರಮಾಣ ಕಡಿಮೆ ಇದೆ. ಭಾರತದಲ್ಲಿ 10 ಲಕ್ಷ ಜನಸಂಖ್ಯೆಗೆ 5,500 ಜನರಷ್ಟೇ ಸೋಂಕಿತರಾಗಿದ್ದಾರೆ. ಅಮೆರಿಕ, ಬ್ರೆಜಿಲ್​ ಮುಂತಾದ ರಾಷ್ಟ್ರಗಳಲ್ಲಿ ಇದು 25,000 ಇದೆ. ಮರಣ ಪ್ರಮಾಣ ಪ್ರತಿ 10 ಲಕ್ಷಕ್ಕೆ ಭಾರತದಲ್ಲಿ 83 ಇದ್ದರೆ, ಅಮೆರಿಕ, ಬ್ರೆಜಿಲ್, ಸ್ಪೇನ್​, ಬ್ರಿಟನ್​ಗಳಲ್ಲಿ 600ಕ್ಕೂ ಹೆಚ್ಚಿದೆ.

ಇತ್ತೀಚೆಗೆ, ನಾವು ಹಲವು ಫೋಟೋ ಮತ್ತು ವಿಡಿಯೋಗಳನ್ನು ಗಮನಿಸಿದ್ದೇವೆ. ಅದರಲ್ಲಿ ಜನರ ಬಹಳ ನಿರ್ಲಕ್ಷ್ಯವಹಿಸಿರುವುದನ್ನು ಕಂಡಿದ್ದೇವೆ. ಇದು ಸರಿಯಲ್ಲ. ಒಂದೊಮ್ಮೆ ನೀವು ಮಾಸ್ಕ್ ಧರಿಸದೇ ಹೊರಗೆ ಕಾಲಿಟ್ಟರೆ, ನಿಮ್ಮ ಕುಟುಂಬವನ್ನು ಅಪಾಯಕ್ಕೆ ಒಡ್ಡುತ್ತಿದ್ದೀರಿ ಎಂದೇ ಅರ್ಥ. ಅಮೆರಿಕ ಅಥವಾ ಯುರೋಪ್​ ಇರಲಿ, ಕೇಸ್​ಗಳು ಇಳಿಮುಖವಾಗಿವೆ ಮತ್ತು ಅಲ್ಲಿ ದಿಢೀರ್ ಕೇಸ್​ಗಳ ಹೆಚ್ಚಳವೂ ಆಗಿದೆ. ಯಾಕೆ ಎಂಬ ಪ್ರಶ್ನೆಗೆ ಇದೇ ಉತ್ತರವಾಗಿದ್ದು, ಅದನ್ನು ಯಾವತ್ತೂ ನೆನಪಿನಲ್ಲಿಡಬೇಕು.

ಕೋವಿಡ್ 19 ರೋಗಿಗಳಿಗಾಗಿ ಭಾರತದಲ್ಲಿ 90 ಲಕ್ಷಕ್ಕೂ ಹೆಚ್ಚು ಬೆಡ್​ಗಳ ವ್ಯವಸ್ಥೆ ಮಾಡಲಾಗಿದೆ. 12,000ದಷ್ಟು ಕ್ವಾರಂಟೈನ್ ಕೇಂದ್ರಗಳಿವೆ, 2000ದಷ್ಟು ಕರೊನಾ ಟೆಸ್ಟಿಂಗ್ ಲ್ಯಾಬ್​ಗಳಿವೆ. ದೇಶಾದ್ಯಂತ ಕರೊನಾ ಟೆಸ್ಟ್​ಗಳ ಸಂಖ್ಯೆ ಶೀಘ್ರವೇ 10 ಕೋಟಿಯ ಗಡಿ ದಾಟಲಿದೆ. ಕೋವಿಡ್​ ವಿರುದ್ಧದ ನಮ್ಮ ಹೋರಾಟದಲ್ಲಿ ಟೆಸ್ಟ್​ಗಳ ಸಂಖ್ಯೆ ಹೆಚ್ಚಳ ನಮ್ಮ ಬಲವಾಗಿರಲಿದೆ.

ಎಲ್ಲ ದೇಶಗಳೂ ಸಮರೋಪಾದಿಯಲ್ಲಿ ಕೋವಿಡ್ 19 ಲಸಿಕೆ ಅಭಿವೃದ್ಧಿ ಪಡಿಸುವುದಕ್ಕೋಸ್ಕರ ಕೆಲಸ ಮಾಡುತ್ತಿವೆ. ಸರ್ಕಾರವೂ ಪ್ರತಿಯೊಬ್ಬ ಭಾರತೀಯನಿಗೂ ಶೀಘ್ರವೇ ಕರೊನಾ ಲಸಿಕೆ ಲಭ್ಯತೆಯನ್ನು ಖಾತರಿಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಈ ಎಲ್ಲ ವಿಚಾರಗಳನ್ನು ಗಮನದಲ್ಲಿರಿಸಿಕೊಂಡು ಕರೊನಾ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಬೇಕಾದ ಅನಿವಾರ್ಯತೆ ಇದೆ. ಇವೆಲ್ಲದರ ನಡುವೆ, ಹಬ್ಬದ ಸಂಭ್ರಮವನ್ನೂ ಮಸುಕುಗೊಳಿಸಬೇಕಾಗಿಲ್ಲ. ಮುನ್ನೆಚ್ಚರಿಕೆ ತೆಗೆದುಕೊಂಡರೆ ಸಾಕು. ಎಲ್ಲರಿಗೂ, ನವರಾತ್ರಿ, ದಸರಾ, ಈದ್​, ದೀಪಾವಳಿ, ಛಟ್​ ಪೂಜಾ, ಗುರುನಾನಕ್ ಜಯಂತಿ ಸೇರಿ ಎಲ್ಲ ಉತ್ಸವ, ಹಬ್ಬಗಳ ಶುಭಾಶಯಗಳನ್ನು ಕೋರುತ್ತೇನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net