

ಕಳೆದುಹೋದ ಅಥವಾ ಕದ್ದ ಮೊಬೈಲ್ ಫೋನ್ಗಳನ್ನು ನಿರ್ಬಂಧಿಸುವ ಮತ್ತು ಪತ್ತೆಮಾಡುವ ಉದ್ದೇಶದ ಸಂಚಾರ ಸಾಥಿ ಪೋರ್ಟಲ್ ಅನ್ನು ಕೇಂದ್ರ ದೂರಸಂಪರ್ಕ ಇಲಾಖೆಯು ಲೋಕಾರ್ಪಣೆ ಮಾಡಿರುವುದು ಜನಸ್ನೇಹಿ ಕ್ರಮವಾಗಿದೆ ಎನ್ನಬಹುದು. ಸೆಕೆಂಡ್ ಹ್ಯಾಂಡ್ ಮೊಬೈಲ್ಫೋನ್ ಖರೀದಿಸುವವರಿಗೂ ಅದರ ಅಸಲಿತನ ಖಚಿತಪಡಿಸಿಕೊಳ್ಳಲು ಇದರಿಂದ ನೆರವಾಗಲಿದೆ. ಸ್ವಾಯತ್ತ ದೂರಸಂಪರ್ಕ ಸಂಶೋಧನಾ ಕೇಂದ್ರವಾದ ಸೆಂಟರ್ ಫಾರ್ ಡೆವಲಪ್ವೆುಂಟ್ ಆಫ್ ಟೆಲಿಮ್ಯಾಟಿಕ್ಸ್ (ಸಿ-ಡಾಟ್) ಈ ಸಂಚಾರಿ ಸಾಥಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿರುವುದು ವಿಶೇಷವಾಗಿದೆ.
ಕರ್ನಾಟಕ, ದೆಹಲಿ, ಮಹಾರಾಷ್ಟ್ರ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಈಗಾಗಲೇ ಈ ತಂತ್ರಜ್ಞಾನವನ್ನು ಪ್ರಾಯೋಗಿಕವಾಗಿ ಬಳಕೆ ಮಾಡಲಾಗಿದ್ದು, ಈಗ ಭಾರತದಾದ್ಯಂತ ವಿಸ್ತರಣೆ ಮಾಡಲಾಗಿದೆ. ಸಂಚಾರ ಸಾಥಿ ಪೋರ್ಟಲ್ನ ಮೊದಲ ಹಂತವು ಸಿಇಐಆರ್ (ಕೇಂದ್ರ ಸಲಕರಣೆ ಗುರುತಿನ ನೋಂದಣಿ) ಆಗಿದೆ. ಮೊಬೈಲ್ ಫೋನ್ ಕಳೆದುಕೊಂಡವರು ಈ ಪೋರ್ಟಲ್ಗೆ ಭೇಟಿ ನೀಡಬೇಕು. ಕೆಲವು ಗುರುತಿನ ಪರಿಶೀಲನೆ ಕೈಗೊಂಡ ನಂತರ ತಕ್ಷಣ ಪೊಲೀಸರಿಗೆ ಮಾಹಿತಿಯನ್ನು ಪೋರ್ಟಲ್ ರವಾನಿಸುತ್ತದೆ. ಜಾರಿ ಏಜೆನ್ಸಿಗಳು ಮತ್ತು ಟೆಲಿಕಾಂ ಸೇವಾ ಪೂರೈಕೆದಾರರು ಕಳೆದುಹೋದ ಆ ಮೊಬೈಲ್ಫೋನ್ ಅನ್ನು ನಿರ್ಬಂಧಿಸುತ್ತಾರೆ.
ಪ್ರತಿಯೊಂದು ಮೊಬೈಲ್ಫೋನ್ಗೆ ಒಂದು ಪ್ರತ್ಯೇಕವಾದ ಐಎಂಇಐ (ಇಂಟರ್ನ್ಯಾಷನಲ್ ಮೊಬೈಲ್ ಇಕ್ವಿಪ್ವೆುಂಟ್ ಐಡೆಂಟಿಟಿ. ಅಂದರೆ ಅಂತಾರಾಷ್ಟ್ರೀಯ ಮೊಬೈಲ್ ಸಾಧನ ಗುರುತು) ಸಂಖ್ಯೆ ಇರುತ್ತದೆ. ಮೊಬೈಲ್ಫೋನ್ ಕಳೆದುಹೋದಾಗ ಅಥವಾ ಕಳವುದಾಗ ಪೊಲೀಸ್ ಠಾಣೆಗೆ ದೂರು ನೀಡಿದ ಸಂದರ್ಭದಲ್ಲಿ ಈ ಸಂಖ್ಯೆ ಆಧರಿಸಿಯೇ ಪೊಲೀಸರು ಶೋಧ ನಡೆಸುತ್ತಾರೆ. ಆದರೆ, ಮೊಬೈಲ್ಫೋನ್ ಖದೀಮರು ಈ ಸಂಖ್ಯೆಯನ್ನೇ ಬದಲಿಸುವ ಚಾಲಾಕಿತನ ಬೆಳೆಸಿಕೊಂಡಿದ್ದಾರೆ. ಮೊಬೈಲ್ ಫೋನ್ ಕದ್ದ ನಂತರ ಕಳ್ಳರು ಬೇರೆ ಯಾವುದಾದರೊಂದು ಮೊಬೈಲ್ಫೋನ್ನ ಐಎಂಇಐ ಸಂಖ್ಯೆಯನ್ನು ಕದ್ದ ಉಪಕರಣಕ್ಕೆ ಹಾಕಿ ಬಳಸಲು ಮುಂದಾಗುತ್ತಾರೆ. ಆದರೆ, ಸಂಚಾರ ಸಾಥಿ ಪೋರ್ಟಲ್ನಲ್ಲಿ ವಿವಿಧ ಡೇಟಾಬೇಸ್ಗಳ ಸಹಾಯದಿಂದ ನೆಟ್ವರ್ಕ್ನಲ್ಲಿ ಯಾವುದೇ ಕ್ಲೋನ್ ಮಾಡಿದ ಮೊಬೈಲ್ ಫೋನ್ಗಳನ್ನು ಅಂದರೆ ಬೇರಾವುದೇ ಐಎಂಇಐ ಹಾಕಿದ ಪೋನ್ಗಳನ್ನು ನಿರ್ಬಂಧಿಸುವ ಹಾಗೂ ಪತ್ತೆ ಮಾಡುವ ವ್ಯವಸ್ಥೆ ರೂಪಿಸಲಾಗಿದೆ.
ಮೊಬೈಲ್ಫೋನ್ ಈಗ ಜೀವನದ ಅವಿಭಾಜ್ಯ ಅಂಗವೇ ಆಗಿದೆ. ದಿನದ 24 ಗಂಟೆಗಳ ಕಾಲ ನಮ್ಮೊಂದಿಗೆ ಇರುವ ಅತ್ಯಗತ್ಯದ ಸಾಧನವಾಗಿದೆ. ಸಂವಹನ ಮಾತ್ರವಲ್ಲದೆ, ಮನರಂಜನೆ, ಮಾಹಿತಿ ಒದಗಿಸುವುದು ಸೇರಿದಂತೆ ಬಹೂಪಯೋಗಿ ಉಪಕರಣವಾಗಿ ಹೊರಹೊಮ್ಮಿದೆ. ಮೊಬೈಲ್ಫೋನ್ ಬಳಕೆದಾರರ ಸಂಖ್ಯೆಯಲ್ಲಿ ಭಾರತ ಜಾಗತಿಕವಾಗಿ ಮೊದಲ ಸ್ಥಾನದಲ್ಲಿದ್ದು, ಅಂದಾಜು 50 ಕೋಟಿ ಜನರು ಸೆಲ್ಫೋನ್ ಬಳಸುತ್ತಾರೆ. ದುಬಾರಿ ವೆಚ್ಚದ ಸ್ಮಾರ್ಟ್ ಫೋನ್ಗಳನ್ನು ಕದಿಯುವುದು ಕಳ್ಳರಿಗೆ ಲಾಭದಾಯಕ ದಂಧೆಯಾಗಿ ಪರಿಣಮಿಸಿದ್ದು, ಇನ್ನು ಇದಕ್ಕೆ ಸ್ವಲ್ಪ ಕಡಿವಾಣ ಬೀಳಬಹುದಾಗಿದೆ. ಇಂಟರ್ನೆಟ್ ಬಳಕೆ ಮೂಲಕ ವ್ಯಾಪಾರ ವಹಿವಾಟು ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಸೈಬರ್ ಕಳ್ಳತನ, ವಂಚನೆಯೂ ಜಾಸ್ತಿಯಾಗುತ್ತಿದೆ. ಇಂತಹ ಸೈಬರ್ ವಂಚನೆಗಳನ್ನು ಪತ್ತೆ ಮಾಡಲು ಕೂಡ ವಿವಿಧ ತಂತ್ರಜ್ಞಾನಗಳನ್ನು ಅಭಿವೃದ್ಧಿಸುವ ಅಗತ್ಯ ಇದೆ. ಸರ್ಕಾರಗಳು ತಂತ್ರಜ್ಞಾನದ ಸೂಕ್ತ ಬಳಕೆಯ ಮೂಲಕ ಜನಜೀವನವನ್ನು ಸುಗಮಗೊಳಿಸಲು ನಿರಂತರವಾಗಿ ಯತ್ನಿಸುತ್ತಿರಬೇಕಾಗುತ್ತದೆ.