ನನಗೆ ಮಗು ಬೇಕು… ಗಂಡನನ್ನು ಮನೆಗೆ ಕಳುಹಿಸಿಕೊಡಿ! ಜೈಲು ಅಧಿಕಾರಿಗೆ ಪತ್ರ ಬರೆದ ಕೈದಿಯ ಪತ್ನಿ

Jail
Published on

ಮಧ್ಯಪ್ರದೇಶ: ಮಹಿಳೆಯೊಬ್ಬಳು ತನ್ನ ಗಂಡನ ಪರವಾಗಿ ಜೈಲು ಅಧಿಕಾರಿಗಳಿಗೆ ಪತ್ರವೊಂದನ್ನು ಬರೆದಿದ್ದಾಳೆ. ಮದುವೆಯಾದ ಸಂದರ್ಭದಲ್ಲಿ ಗಂಡ ಜೈಲು ಸೇರಿದ್ದರಿಂದ ನನಗೆ ಗರ್ಭ ಧರಿಸಲು ಸಾಧ್ಯವಾಗಿಲ್ಲ. ಹೀಗಾಗಿ ನನ್ನ ಗಂಡನನ್ನು ಪೆರೋಲ್ ಮೇಲೆ ಕಳುಹಿಸಿಕೊಡಬೇಕು ಎಂದು ಕೇಳಿಕೊಂಡಿದ್ದಾಳೆ.

ಶಿವಪುರಿ ಮೂಲದ ದಾರಾ ಸಿಂಗ್ ಜಾತವ್ ಎಂಬಾತ ಕಳೆದ ಏಳು ವರ್ಷಗಳಿಂದ ಗ್ವಾಲಿಯರ್ ಸೆಂಟ್ರಲ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕೈದಿ. ಮದುವೆಯಾದ ಸಂದರ್ಭದಲ್ಲಿ ಈತ ಕೊಲೆ ಪ್ರಕರಣದ ಮೂಲಕ ಜೈಲು ಸೇರಿದ್ದ. ಇದರಿಂದ ಹೆಂಡತಿ ಒಬ್ಬಂಟಿಯಾಗಿ ಜೀವನ ದೂಡಬೇಕಾದ ಸ್ಥಿತಿ ಬಂದೊದಗಿತ್ತು. ಇದೀಗ ಈತನ ಪತ್ನಿ, ಮದುವೆಯಾಗಿ ಏಳು ವರ್ಷಗಳು ಕಳೆದರೂ ನನಗೆ ಮಕ್ಕಳಿಲ್ಲ. ನಾನೀಗ ಗರ್ಭ ಧರಿಸಬೇಕು. ಇದಕ್ಕಾಗಿ ನನ್ನ ಗಂಡನನ್ನು ಪೆರೋಲ್ ಮೂಲಕ ಜೈಲಿನಿಂದ ಕಳುಹಿಸಿಕೊಡಿ ಎಂದು ಅರ್ಜಿ ಸಲ್ಲಿಸಿದ್ದಾಳೆ.

ಮೊಮ್ಮಗ ಬೇಕು!

ಮಗನ ಬಂಧನದಿಂದ ನಮಗೆ ಮದುವೆಯ ಸಂತಸವನ್ನು ಸಂಭ್ರಮಿಸಲು ಸಾಧ್ಯವಾಗಿಲ್ಲ. ಇದೀಗ ನಮಗೆ ವಯಸ್ಸಾಗಿದೆ. ಪತ್ನಿ ಅನಾರೋಗ್ಯ ಪೀಡಿತಳಾಗಿದ್ದು, ಮೊಮ್ಮಗ ಬೇಕೆಂದು ಬಯಸಿದ್ದಾಳೆ. ಹೀಗಾಗಿ ಮಗನನ್ನು ಕೆಲ ದಿನಗಳ ಕಾಲ ಜೈಲಿನಿಂದು ಕಳುಹಿಸಿಕೊಡುವಂತೆ ಕೈದಿ ದಾರಾ ಸಿಂಗ್ ತಂದೆ ಕರೀಂ ಸಿಂಗ್ ಜಾತವ್ ಹೇಳಿಕೊಂಡಿದ್ದಾರೆ.

ಪೆರೋಲ್ ನೀಡುವುದು ಜಿಲ್ಲಾಧಿಕಾರಿ ನಿರ್ಧಾರ

ಕೈದಿಯ ಬಿಡುಗಡೆಗೆ ಸಂಬಂಧಿಸಿದ ಮನವಿ ಪತ್ರವನ್ನು ಸದ್ಯ ಶಿವಪುರಿ ಎಸ್​ಪಿ ಅವರ ಪರಿಶೀಲನೆಗೆ ಕಳುಹಿಸಿಕೊಡಲಾಗಿದೆ ಎಂದು ವರದಿಯಾಗಿದೆ. ಈ ನಡುವೆ ಗ್ವಾಲಿಯರ್ ಸೆಂಟ್ರಲ್ ಜೈಲ್ ಸೂಪರಿಂಟೆಂಡೆಂಟ್ ವಿದಿತ್ ಸಿರ್ವಯ್ಯ ಪ್ರತಿಕ್ರಿಯಿಸಿ, ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ಶಿಕ್ಷೆ ಎರಡು ವರ್ಷ ಪೂರ್ಣಗೊಂಡ ಬಳಿಕ ನಡವಳಿಕೆಯು ಆಧಾರದ ಮೇಲೆ ಪೆರೋಲ್‌ ಪಡೆಯಲು ಅರ್ಹರಾಗಿರುತ್ತಾರೆ. ಪೆರೋಲ್ ನೀಡುವುದು ಅಥವಾ ನೀಡದಿರುವ ಬಗ್ಗೆ ಜಿಲ್ಲಾಧಿಕಾರಿ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net