More

    ಬಿಜೆಪಿ ನಾಯಕರ ಫೋಟೋಗೆ ಚಪ್ಪಲಿ ಹಾರ ಹಾಕಿದ್ದ ಪ್ರಕರಣ | ಪಕ್ಷದ ಕಾರ್ಯಕರ್ತರ ಮೇಲೆ ಪೊಲೀಸರಿಂದ ದೌರ್ಜನ್ಯ; ವ್ಯಾಪಕ ಖಂಡನೆ

    ವಿಜಯವಾಣಿ ಸುದ್ದಿಜಾಲ ಪುತ್ತೂರು(ದ.ಕ.): ಸರ್ಕಾರಿ ಬಸ್ ನಿಲ್ದಾಣದ ಮುಂಭಾಗ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಡಿ.ವಿ.ಸದಾನಂದ ಗೌಡರ ಭಾವಚಿತ್ರ ಇರುವ ಫ್ಲೆಕ್ಸ್ ಅಳವಡಿಸಿ ಅದಕ್ಕೆ ಚಪ್ಪಲಿ ಹಾರ ಹಾಕಿದ ಪ್ರಕರಣದ ಪೊಲೀಸ್ ವಿಚಾರಣೆ ಗಂಭೀರ ತಿರುವನ್ನು ಪಡೆದುಕೊಂಡಿದೆ.

    ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡ ಒಂಬತ್ತು ಮಂದಿ ಮೇಲೆ ಪುತ್ತೂರು ಪೊಲೀಸರು ಹಿಗ್ಗಾಮುಗ್ಗ ಹಲ್ಲೆ ನಡೆಸಿ ದೌರ್ಜನ್ಯ ಎಸಗಿರುವ ಮಾಹಿತಿ ಬುಧವಾರ ಬೆಳಕಿಗೆ ಬಂದಿದೆ. ದೌರ್ಜನ್ಯಕ್ಕೆ ಒಳಗಾದವರ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಬಿಜೆಪಿ ನಾಯಕರ ಫೋಟೋಗೆ ಚಪ್ಪಲಿ ಹಾರ ಹಾಕಿದ್ದ ಪ್ರಕರಣ | ಪಕ್ಷದ ಕಾರ್ಯಕರ್ತರ ಮೇಲೆ ಪೊಲೀಸರಿಂದ ದೌರ್ಜನ್ಯ; ವ್ಯಾಪಕ ಖಂಡನೆ

    ಪೊಲೀಸರು ಮೊದಲ ಹಂತದಲ್ಲಿ ನರಿಮೊಗರು ನಿವಾಸಿಗಳಾದ ವಿಶ್ವನಾಥ್, ಮಾಧವ ಎಂಬುವರನ್ನು ವಶಕ್ಕೆ ಪಡೆದಿದ್ದರು. ಬಳಿಕ ಅಭಿ ಯಾನೆ ಅವಿನಾಶ್, ಶಿವರಾಮ್, ಚೈತ್ರೇಶ್, ಈಶ್ವರ್, ನಿಶಾಂತ್, ದೀಕ್ಷಿತ್, ಗುರುಪ್ರಸಾದ್ ಎಂಬುವರನ್ನೂ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದರು. ಈ ವೇಳೆ ಪೊಲೀಸರು ತಮ್ಮ ವಶದಲ್ಲಿದ್ದವರನ್ನು ಹಿಗ್ಗಾಮುಗ್ಗಾ ಥಳಿಸಿ ಗಾಯಗೊಳಿಸಿದರು ಎಂಬ ಆರೋಪ ಕೇಳಿಬಂದಿದೆ. ಥಳಿತದಿಂದ ಗಾಯಗೊಂಡ ಯುವಕರ ಫೋಟೋಗಳು ಹಾಗೂ ತಡರಾತ್ರಿ ನಡೆಯಲು ಕಷ್ಟಪಡುವ ಯುವಕರು ಪುತ್ತೂರು ಡಿವೈಎಸ್‌ಪಿ ಕಚೇರಿಯಿಂದ ಹೊರಬರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಎಲ್ಲರೂ ಕಾರ್ಯಕರ್ತರು!

    ಪೊಲೀಸ್ ದೌರ್ಜನ್ಯಕ್ಕೆ ಒಳಗಾದವರು ಬಿಜೆಪಿ ಕಾರ್ಯಕರ್ತರು. ಈ ಪೈಕಿ ಕೆಲವರು ಈ ಬಾರಿ ಪಕ್ಷೇತರ ಅಭ್ಯರ್ಥಿ ಪುತ್ತಿರ ಅವರ ಚುನಾವಣಾ ಪರ ಪ್ರಚಾರ ಮಾಡಿದ್ದರೆ, ಉಳಿದವರು ಬಿಜೆಪಿ ಪರ ಫೀಲ್ಡ್ ವರ್ಕ್ ಮಾಡಿದ್ದರು. ಪೊಲೀಸರು ದೌರ್ಜನ್ಯದ ಹಿಂದೆ ಸ್ಥಳೀಯ ಹಾಗೂ ಜಿಲ್ಲಾಮಟ್ಟದ ಮುಖಂಡರ ಚಿತಾವಣೆಯಿದೆ ಎಂಬ ಆರೋಪ ಕೇಳಿಬರುತ್ತಿದೆ. ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಯೇ ದೌರ್ಜನ್ಯದ ಉಸ್ತುವಾರಿ ವಹಿಸಿದ್ದಾರೆಂಬ ಟೀಕೆಯೂ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಫೋಟೋ ಮತ್ತು ವಿಡಿಯೋ ಬಗ್ಗೆ ನೆಟ್ಟಿಗರು ಭಾರೀ ಆಕ್ರೋಶ ಹೊರಹಾಕಿ, ಪುತ್ತೂರಿನಲ್ಲಿ ಪೊಲೀಸರೇ ಗೂಂಡಾಗಿರಿಗೆ ಇಳಿದರೇ? ಎಂದು ಪ್ರಶ್ನಿಸಿದ್ದಾರೆ.

    ಏನಿದು ಬ್ಯಾನರ್ ವಿವಾದ?

    ಪುತ್ತೂರು ಅರಣ್ಯ ಇಲಾಖೆ ಕಚೇರಿ ಆವರಣ ಗೋಡೆ ಬಳಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಡಿ.ವಿ.ಸದಾನಂದ ಗೌಡರ ಭಾವಚಿತ್ರ ಹಾಕಿ ಬಿಜೆಪಿ ಸೋಲಿಗೆ ಕಾರಣರಾದ ನಾಯಕರಿಗೆ ಶ್ರದ್ಧಾಂಜಲಿ ಎಂದು ಬರೆದು, ಚಪ್ಪಲಿ ಹಾರ ಹಾಕಿದ್ದ ಬ್ಯಾನರ್ ಭಾನುವಾರ ರಾತ್ರಿ ಕಂಡುಬಂದಿತ್ತು. ಸರ್ಕಾರಿ ಆಸ್ತಿಪಾಸ್ತಿ ಮತ್ತು ಸಾರ್ವಜನಿಕ ಸ್ಥಳ ವಿರೂಪ ಬಗ್ಗೆ ನಗರಸಭೆ ಪೌರಾಯುಕ್ತ ಮಧು ಎಸ್.ಮನೋಹರ್ ನಗರ ಠಾಣೆಗೆ ದೂರು ನೀಡಿದ್ದರು. ಬ್ಯಾನರ್ ಅಳವಡಿಕೆ ವಿರುದ್ಧ ಮೇ 15ರಂದು ಬಿಜೆಪಿಯೂ ಪುತ್ತೂರಿನಲ್ಲಿ ಪ್ರತಿಭಟನೆ ನಡೆಸಿತ್ತು. ಘಟನೆಯಲ್ಲಿ ತಮ್ಮ ಕೈವಾಡ ಇಲ್ಲ ಎಂದು ಕಾಂಗ್ರೆಸ್ ಹೇಳಿಕೊಂಡಿತ್ತು.

    ದಸ್ತಗಿರಿ ಮಾಡಿದ್ದ ಆರೋಪಿಗಳ ಮೇಲೆ ಹಲ್ಲೆ ಪೊಲೀಸರು ಹಲ್ಲೆ ಮಾಡಿದ್ದಾರೆಂಬ ಆರೋಪ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ಗಮನಕ್ಕೆ ಬಂದಿದೆ. ಘಟನೆಯ ಸತ್ಯಾಸತ್ಯೆ ಪರಿಶೀಲಿಸಲಾಗುವುದು.

    ವಿಕ್ರಂ ಅಮಟೆ, ಎಸ್​ಪಿ, ದ.ಕ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts