ಉತ್ತರದಲ್ಲಿ ಜೆಡಿಎಸ್​ಗೆ ಹಿನ್ನಡೆ ಮೇಲೆ ಹಿನ್ನಡೆ; ವಿಜನ್ 2023 ಪ್ಲ್ಯಾನ್​ಗೆ ಪೆಟ್ಟು, ಪಕ್ಷ ಸಂಘಟನೆಗೆ ಏಟು..

JDS
Published on

| ವಿಲಾಸ ಮೇಲಗಿರಿ ಬೆಂಗಳೂರು

ರಾಜ್ಯದಲ್ಲಿ ಪಕ್ಷವನ್ನು ಮತ್ತೆ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ತರಬೇಕು ಎಂಬ ಜೆಡಿಎಸ್ ಕನಸಿಗೆ ಒಂದೊಂದಾಗಿ ಕೊಡಲಿ ಪೆಟ್ಟು ಬೀಳುತ್ತಿವೆ. ಒಂದೆಡೆ ದಳಪತಿಗಳು ಮತ್ತು ಮಂಡ್ಯ ಸಂಸದೆ ಸುಮಲತಾ ನಡುವಿನ ವಾಗ್ಯುದ್ಧ ತಾರಕಕ್ಕೇರಿದ್ದು, ದ್ವೇಷ ರಾಜಕಾರಣಕ್ಕೆ ತಿರುಗಿದೆ. ಸುಮಲತಾ ಬಗ್ಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆಡಿದ ಮಾತು ಜೆಡಿಎಸ್​ಗೆ ಮುಳುವಾಗಿ ಪರಿಣಮಿಸುತ್ತಿದೆ. ಇನ್ನೊಂದೆಡೆ, ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ನಾಯಕರು ಒಬ್ಬೊಬ್ಬರಾಗಿ ಪಕ್ಷದಿಂದ ಹಿಂದೆ ಸರಿಯುತ್ತಿದ್ದಾರೆ. ಇದು ಜೆಡಿಎಸ್​ನ ವಿಸನ್ -2023 ಕನಸಿಗೆ ಕಲ್ಲು ಬೀಳುವ ಮುನ್ಸೂಚನೆಗಳು ಕಾಣಿಸುತ್ತಿವೆ.

ಕಳಚುತ್ತಿರುವ ಕೊಂಡಿಗಳು: ಹಠಾತ್ ಬೆಳವಣಿಗೆಯಲ್ಲಿ ರಾಜ್ಯ ಉಪಾಧ್ಯಕ್ಷ ಪ್ರದೀಪ್ ಗೌಡ ಮಾಲಿ ಪಾಟೀಲ್, ‘ಬಕೆಟ್ ಹಿಡಿಯುವವರಿಗೆ ಮಣೆ ಹಾಕಲಾಗುತ್ತದೆ’ ಎಂದು ಆರೋಪಿಸಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಜೆಡಿಎಸ್​ಗೆ ಬಲ ತುಂಬಿದ್ದ ಎಂ.ಸಿ.ಮನಗೂಳಿ ಮರಣಹೊಂದಿದ್ದು, ತಂದೆ ನಿಧನ ಬಳಿಕ ಪುತ್ರ ಅಶೋಕ್ ಮನಗೂಳಿ ಪಕ್ಷಕ್ಕೆ ಗುಡ್ ಬೈ ಹೇಳಿ, ಕಾಂಗ್ರೆಸ್ ಕೈ ಹಿಡಿದಿದ್ದಾರೆ. ಕುಮಾರಸ್ವಾಮಿ ಸರ್ಕಾರ ಪತನ ಸಂದರ್ಭ ಬಿ.ಎಸ್.ಯಡಿಯೂರಪ್ಪ ಅಪರೇಷನ್ ಆಡಿಯೋ ಬಾಂಬ್ ಸಿಡಿಸಿ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದ ಗುರುಮಿಠಕಲ್ ಶಾಸಕ ನಾಗನಗೌಡ ಪುತ್ರ ಶರಣಗೌಡ ಕಂದಕೂರು ಕೂಡ ತಟಸ್ಥರಾಗಿದ್ದಾರೆ. ಜೆಡಿಎಸ್ ಯುವ ಘಟಕಕ್ಕೆ ಅಧ್ಯಕ್ಷರನ್ನಾಗಿ ಶರಣಗೌಡರನ್ನು ನೇಮಕ ಮಾಡಲಾಗುತ್ತದೆ ಎಂಬ ಸುದ್ದಿ ಹರಿದಾಡಿತ್ತು. ಆದರೆ, ಯುವ ಘಟಕದ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಲಾಯಿತು. ಇದರಿಂದ ಬೇಸತ್ತು ಶರಣಗೌಡ ಅಂತರ ಕಾಯ್ದುಕೊಂಡಿದ್ದಾರೆಂಬ ಮಾತು ಕೇಳಿಬರುತ್ತಿವೆ.

ಕ್ರಿಯಾಶೀಲರ ಸಂಖ್ಯೆ ವಿರಳ: ರಾಯಚೂರು ಜಿಲ್ಲೆಯಲ್ಲಿ ಇಬ್ಬರು ಶಾಸಕರು, ಬೀದರ್​ನಲ್ಲಿ ಬಂಡೆಪ್ಪ ಕಾಶೆಂಪುರ ಮತ್ತು ಧಾರವಾಡದಲ್ಲಿ ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ಕ್ರಿಯಾಶೀಲರಾಗಿದ್ದಾರೆ. ಬಸವರಾಜ ಹೊರಟ್ಟಿ ವಿಧಾನಪರಿಷತ್ ಸಭಾಪತಿಗಳಾಗಿ ಆಯ್ಕೆಯಾಗಿದ್ದು, ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಹಾಗಾಗಿ ಉತ್ತರ ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಪಕ್ಷ ಮುನ್ನಡೆಸುವ, ಸಂಘಟಿಸುವ ಪ್ರಭಾವಿ ನಾಯಕರ ಕೊರತೆ ಕಾಡುತ್ತಿದೆ.

ಹುಬ್ಬಳ್ಳಿ ವಾಸ: ಚುನಾವಣೆ ಹತ್ತಿರ ಬಂದಾಗ ಮಾತ್ರ ಕುಮಾರಸ್ವಾಮಿ ಉತ್ತರ ಕರ್ನಾಟಕದ ಕಡೆಗೆ ತಿರುಗಿ ನೋಡುತ್ತಾರೆಂಬ ದೂರು ಹೊಸದೇನಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹುಬ್ಬಳ್ಳಿಯಲ್ಲಿ ಮನೆ ಮಾಡಿದರೂ ಮತಗಳಿಕೆ ಪ್ರಯತ್ನ ಫಲ ನೀಡಲಿಲ್ಲ.

ಪಂಚಾಕ್ಷರಿ ಜಪ: ಬಿಎಸ್​ವೈಗೆ ಅಧಿಕಾರ ಬಿಟ್ಟುಕೊಡಲಿಲ್ಲ ಎಂಬ ಕುಮಾರಸ್ವಾಮಿ ಮೇಲಿನ ಆರೋಪ ಇನ್ನೂ ಜನಮನದಲ್ಲಿ ಜೀವಂತವಾಗಿದೆ. ಹಾಗಾಗಿ ಎಷ್ಟೇ ಪ್ರಯತ್ನ ಪಟ್ಟರೂ ಉತ್ತರ ಮತ್ತು ಕಲ್ಯಾಣ ಕರ್ನಾಟಕ ಭಾಗದ ವೀರಶೈವ-ಲಿಂಗಾಯತ ಮತದಾರರ ವಿಶ್ವಾಸ ಗಳಿಸುವಲ್ಲಿ ಜೆಡಿಎಸ್ ವಿಫಲವಾಗಿದೆ. ಇದೀಗ ಲಿಂಗಾಯತ ಮತಗಳ ಮೇಲೆ ಕಣ್ಣಿಟ್ಟು ಪಂಚರತ್ನ ಕಾರ್ಯಕ್ರಮದ ಹೆಸರನ್ನು ಪಂಚಾಕ್ಷರಿ ಎಂದು ಕುಮಾರಸ್ವಾಮಿ ಬದಲಿಸಿದ್ದಾರೆ. ಈ ಬಾರಿ ಹೆಚ್ಚು ಮಂದಿ ಲಿಂಗಾಯತರಿಗೆ ಟಿಕೆಟ್ ನೀಡಲು ವರಿಷ್ಠರು ನಿರ್ಧರಿಸಿದ್ದಾರೆ. ಜತೆಗೆ ಮುಸ್ಲಿಂ ಮತಗಳನ್ನು ವಶ ಮಾಡಿಕೊಳ್ಳಲು ಪ್ರಯತ್ನ ನಡೆದಿವೆ. ಅದರ ಭಾಗವಾಗಿ ಬಸವಕಲ್ಯಾಣ ಬಳಿಕ ಹಾನಗಲ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೂ ಮುಸ್ಲಿಂ ಅಭ್ಯರ್ಥಿಯನ್ನೇ ಘೋಷಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net