

ನವದೆಹಲಿ: ಈಗಿನ ಪೀಳಿಗೆಯ ಹಲವರು ನೆಟ್ಟು ನೆಟ್ಟು ಎಂದು ಸದಾ ಇಂಟರ್ನೆಟ್ನಲ್ಲಿ ಕಾಲ ಕಳೆಯುವುದೇ ಹೆಚ್ಚು. ಆದರೆ ಇಲ್ಲೊಬ್ಬ ವ್ಯಕ್ತಿ ಅಕ್ಷರಶಃ 'ನೆಟ್ಟು' ತೋರಿಸಿದ್ದಾರೆ, ಅರ್ಥಾತ್ ಒಬ್ಬನೇ ಒಬ್ಬ ವ್ಯಕ್ತಿ ಇದುವರೆಗೆ 30 ಸಾವಿರ ಸಸಿಗಳನ್ನು ನೆಟ್ಟಿದ್ದಾರೆ. ಈ ಮಹಾನ್ ಪ್ರಕೃತಿಪ್ರೇಮಿಯ ಹೆಸರು ಅಂತರ್ಯಾಮಿ ಸಾಹೂ. ಒಡಿಶಾದ ಕಂಟಿಲೊ ಗ್ರಾಮದ ಇವರು ವೃತ್ತಿಯಿಂದ ಶಿಕ್ಷಕ, ಪ್ರವೃತ್ತಿಯಿಂದ ವೃಕ್ಷಪ್ರೇಮಿ, ಪ್ರಕೃತಿಪ್ರೇಮಿ.
ತನ್ನ 11ನೇ ವಯಸ್ಸಿನಲ್ಲಿ ಶಾಲಾ ಆವರಣದಲ್ಲಿ ಮೊದಲ ಸಲ ಸಸಿ ನೆಟ್ಟ ಖುಷಿ ಹಂಚಿಕೊಳ್ಳುವ ಇವರಿಗೆ ಈ 75 ವರ್ಷ. ಇದುವರೆಗೆ 30 ಸಾವಿರ ಸಸ್ಯಗಳನ್ನು ನೆಟ್ಟಿದ್ದಷ್ಟೇ ಅಲ್ಲ, ಅವುಗಳನ್ನು ಪ್ರದೇಶವಾರು ದಾಖಲೆ ಕೂಡ ಮಾಡಿಟ್ಟುಕೊಂಡಿದ್ದಾರೆ. ಬಾಲ್ಯದಿಂದಲೇ ಇದ್ದ ಇವರ ಸಸಿ ನೆಡುವ ಆಸಕ್ತಿ ಶಿಕ್ಷಕರಾಗಿ ವೃತ್ತಿ ಆರಂಭಿಸಿದ ಮೇಲೆ ತೀವ್ರವಾಯಿತು.
ಶಿಕ್ಷಕರಾದ ಬಳಿಕ ಇವರು ತಮ್ಮ ಶಾಲಾ ಆವರಣ, ಸುತ್ತಮುತ್ತಲ ಪ್ರದೇಶ, ಹಳ್ಳಿಗಳಲ್ಲಿ ಸಸಿ ನೆಡುವುದನ್ನೇ ಅಭಿಯಾನದ ರೀತಿ ನಡೆಸಿದ್ದಾರೆ. ನಾನು ಪ್ರಾಥಮಿಕ ಶಿಕ್ಷಕನಾಗಿ 1973ರಲ್ಲಿ ವೃತ್ತಿ ಆರಂಭಿಸಿದ್ದು, ಅದಾದ ಬಳಿಕ ಆರು ಶಾಲೆಗಳನ್ನು ಬದಲಾದರೂ ಎಲ್ಲ ಕಡೆ ನನ್ನ ಈ ಹವ್ಯಾಸ ಮುಂದುವರಿದಿತ್ತು ಎಂದು ಹೇಳಿಕೊಳ್ಳುತ್ತಾರೆ.
2004ರ ವರೆಗೆ ಇವರು 10 ಸಾವಿರ ಸಸಿಗಳನ್ನು ನೆಟ್ಟಿದ್ದು, ಇವರ ವಿದ್ಯಾರ್ಥಿಗಳು 20 ಸಾವಿರ ಸಸಿಗಳನ್ನು ನೆಟ್ಟಿದ್ದಾರೆ. ಇನ್ನು ಅಂದಿನಿಂದಲೂ ಈ ಸಸಿ ನೆಡುವಿಕೆಯನ್ನು ಮುಂದುವರಿಸಿಕೊಂಡೇ ಬಂದಿರುವ ಅಂತರ್ಯಾಮಿ ಇಲ್ಲಿಯವರೆಗೆ 30 ಸಾವಿರಕ್ಕೂ ಅಧಿಕ ಗಿಡಗಳನ್ನು ನೆಟ್ಟಿದ್ದಾರೆ. ಮಾತ್ರವಲ್ಲ, ಅದನ್ನು ಪ್ರದೇಶವಾರು ಡಾಕ್ಯುಮೆಂಟೇಷನ್ ಮಾಡಿ ಇಟ್ಟುಕೊಂಡಿರುವುದಾಗಿಯೂ ಹೇಳುತ್ತಾರೆ.
ಇದನ್ನೂ ಓದಿ: ಕೋವಿಡ್ ಲಸಿಕೆ ತೆಗೆದುಕೊಂಡರೆ ನಪುಂಸಕತ್ವ ಬರೋದು ನಿಜವೇ?
ಸಸಿ ನೆಡುವ ಜತೆಗೆ ಸಸಿ-ಬೀಜ ವಿತರಣೆಯನ್ನೂ ಮಾಡುವ ಇವರು, ಪ್ರಕೃತಿ ಸಂರಕ್ಷಣೆ ಕುರಿತ ಮಾಹಿತಿಯನ್ನೂ ಹಂಚಿಕೊಂಡು ಪರಿಸರ ಉಳಿಸಿ ಬೆಳೆಸುವ ನಿಟ್ಟಿನಲ್ಲಿಯೂ ಶ್ರಮಿಸುತ್ತಿದ್ದಾರೆ. ಅದಕ್ಕಾಗಿ ತಾವೇ ಪೋಸ್ಟರ್ಗಳನ್ನು ಬರೆದು ಜಾಗೃತಿ ಮೂಡಿಸುತ್ತಿದ್ದಾರೆ. (ಏಜೆನ್ಸೀಸ್)