

ಬೆಂಗಳೂರು: ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್ ಎಂದೆಲ್ಲ ಅಭಿಮಾನಿಗಳಿಂದ ಪ್ರೀತಿಯಿಂದಲೇ ಕರೆಸಿಕೊಳ್ಳುವ ನಟ ಶಿವರಾಜಕುಮಾರ್ ಅವರು ಇದೀಗ ಅಭಿಮಾನಿಗಳಲ್ಲಿ ಒಂದು ವಿನಂತಿಯನ್ನು ಮಾಡಿಕೊಂಡಿದ್ದಾರೆ. ಮಾತ್ರವಲ್ಲ, ದಯವಿಟ್ಟು ಬೇಜಾರ್ ಮಾಡ್ಕೋಬೇಡಿ ಎಂದು ಅವರು ಮತ್ತೆ ಮತ್ತೆ ಕೇಳಿಕೊಂಡಿದ್ದಾರೆ.
ಅಷ್ಟಕ್ಕೂ ಅವರು ಅಭಿಮಾನಿಗಳಲ್ಲಿ ಹೀಗೊಂದು ವಿನಂತಿ ಮಾಡಿಕೊಳ್ಳಲು ಪ್ರಮುಖ ಕಾರಣ; ಒಂದು ಕರೊನಾ ಹಾಗೂ ಇನ್ನೊಂದು ಅವರ ಜನ್ಮದಿನ. ಕರೊನಾ ಹಾವಳಿ ಇನ್ನೂ ಪೂರ್ತಿಯಾಗಿ ಮುಗಿಯದಿರುವ ಹಿನ್ನೆಲೆಯಲ್ಲಿ ಅವರು ಹೀಗೊಂದು ಕಾಳಜಿಯುತ ಕೋರಿಕೆ ಮಾಡಿಕೊಂಡಿದ್ದಾರೆ.
ನನ್ನ ಹುಟ್ಟುಹಬ್ಬಕ್ಕಿಂತ ನಿಮ್ಮೆಲ್ಲರ ಆರೋಗ್ಯ ನನಗೆ ಮುಖ್ಯ. ದೇವರ ದಯೆಯಿಂದ ಕರೊನಾ ಕಡಿಮೆ ಆಗಿದೆ. ಹಾಗಂತ ನಾವು ಎಚ್ಚರಿಕೆಯಿಂದ ಇರಬೇಕಾದ ಸಮಯ ಇನ್ನೂ ಮುಗಿದಿಲ್ಲ. ಮುಂದೆ ಇನ್ನೂ ಎಚ್ಚರಿಕೆಯಿಂದ ಇರಬೇಕು ಎಂದು ಕಿವಿಮಾತು ಹೇಳಿರುವ ಶಿವಣ್ಣ, ಜುಲೈ 12ರಂದು ನನ್ನ ಜನ್ಮದಿನ, ಅಂದು ನಾನು ಕೆಲವು ಕಾರಣಗಳಿಂದ ಬೆಂಗಳೂರಿನಲ್ಲಿ ಇರುವುದಿಲ್ಲ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಈ ಮೂಲಕ ಜನ್ಮದಿನಾಚರಣೆ ಸಂದರ್ಭದಲ್ಲಿ ಉಂಟಾಗಬಹುದಾದ ನೂಕುನುಗ್ಗಲು, ಕರೊನಾ ನಿಯಮ ಉಲ್ಲಂಘನೆಗಳನ್ನು ತಪ್ಪಿಸಲು ಚಿಂತನೆ ನಡೆಸಿದ್ದಾರೆ.
ಇನ್ನು ಜನ್ಮದಿನದಂದು ಭೇಟಿ ತಪ್ಪಿಹೋಯಿತು ಎಂದು ಅಭಿಮಾನಿಗಳು ದಯವಿಟ್ಟು ಬೇಜಾರು ಮಾಡಿಕೊಳ್ಳಬೇಡಿ ಎಂದು ಕೋರಿರುವ ಅವರು, ಅಭಿಮಾನಿಗಳ ಹಾರೈಕೆ-ಶುಭಾಶಯ-ಆಶೀರ್ವಾದ ತಮಗೆ ಎಲ್ಲಕ್ಕಿಂತಲೂ ಮುಖ್ಯ ಎಂದೂ ಹೇಳಿದ್ದಾರೆ. ಹೀಗಾಗಿ ಎಲ್ಲರೂ ಸೋಷಿಯಲ್ ಮೀಡಿಯಾ ಮೂಲಕ ವಿಷಸ್ ತಿಳಿಸಿ, ಪ್ರೀತಿ-ಅಭಿಮಾನ ವ್ಯಕ್ತಪಡಿಸುವಂತೆ ಕೇಳಿಕೊಂಡಿದ್ದಾರೆ.
ಹಾಗೆಯೇ ಎಲ್ಲರೂ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿ, ಮಾಸ್ಕ್ ಧರಿಸಿ, ದೈಹಿಕ ಅಂತರ ಕಾಪಾಡಿ, ಲಸಿಕೆ ಹಾಕಿಸಿಕೊಳ್ಳಿ ಎಂದಿರುವ ಅವರು ಮನೆಯಲ್ಲೇ ಸೇಫಾಗಿರಿ, ಎಲ್ಲರನ್ನೂ ಸೇಫಾಗಿಡಿ ಎನ್ನುತ್ತ, ಜನ್ಮದಿನದಂದು ಭೇಟಿ ಸಾಧ್ಯವಾಗದಿರುವುದಕ್ಕೆ ದಯವಿಟ್ಟು ಯಾರೂ ಬೇಜಾರ್ ಮಾಡ್ಕೋಬೇಡಿ ಎಂದು ಮತ್ತೊಮ್ಮೆ ಮನವಿ ಮಾಡಿಕೊಂಡಿದ್ದಾರೆ.
ಶಿವರಾಜಕುಮಾರ್ ಜನ್ಮದಿನ ಪ್ರಯುಕ್ತ ನಾಳೆ (ಜು. 11) ದುನಿಯಾ ವಿಜಯ್ ಅಭಿನಯ-ನಿರ್ದೇಶನದ, ಕೆ.ಪಿ.ಶ್ರೀಕಾಂತ್ ನಿರ್ಮಾಣದ 'ಸಲಗ' ಚಿತ್ರತಂಡ ವಿಶೇಷವಾದ ಪೋಸ್ಟರ್ವೊಂದನ್ನು ಬಿಡುಗಡೆ ಮಾಡಲಿದೆ. ಅಲ್ಲದೆ ಜುಲೈ 12ರಂದು ಶಿವಣ್ಣ ಅವರ ನೂತನ ಸಿನಿಮಾದ ಟೈಟಲ್ ಲಾಂಚ್ ಸೇರಿ ಹಲವಾರು ಚಟುವಟಿಕೆಗಳು ನಡೆಯಲಿವೆ.
ಶಿವರಾಜಕುಮಾರ್ ವಿನಂತಿ ವಿಡಿಯೋ: https://fb.watch/6FkeYL0Sy4/