

ನವದೆಹಲಿ: ಕೋವಿಡ್-19 ಹಾವಳಿಯನ್ನು ತಡೆಯಲು/ನಿಯಂತ್ರಿಸಲು ಹಾಗೂ ಜನರು ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವಂತೆ ಮಾಡಲು ಕೆಲವು ರಾಜ್ಯ/ದೇಶಗಳು ತಮ್ಮದೇ ಆದ ರೀತಿಯಲ್ಲಿ ನಾನಾ ಕ್ರಮಗಳನ್ನು ಜರುಗಿಸುತ್ತಿವೆ. ಅಂತೆಯೇ ಇಲ್ಲೊಂದು ಕಡೆ ಮಾಸ್ಕ್ ಧರಿಸದಿದ್ದರೆ ಭಾರಿ ದಂಡವನ್ನೇ ತೆರಬೇಕಾಗುತ್ತದೆ ಇಲ್ಲವೇ ದಿನಗಟ್ಟಲೆ ಜೈಲುಶಿಕ್ಷೆ ಅನುಭವಿಸಬೇಕಾಗುತ್ತದೆ.
ಅಷ್ಟಕ್ಕೂ ಇಲ್ಲಿ ಪ್ರವಾಸಿಗರನ್ನು ನಿಯಂತ್ರಣದಲ್ಲಿ ಇರಿಸುವ ಸಲುವಾಗಿ ಇಂಥದ್ದೊಂದು ಕಠಿಣಕ್ರಮ ಜಾರಿಗೊಳಿಸಲಾಗಿದೆ. ಇತ್ತೀಚೆಗೆ ಇಲ್ಲಿ ಪ್ರವಾಸಿಗರು ಕೋವಿಡ್ ನಿಯಮ ಉಲ್ಲಂಘಿಸಿ ಬೇಕಾಬಿಟ್ಟಿ ವರ್ತಿಸಿರುವ ವಿಡಿಯೋ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಈ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುತ್ತಿದೆ. ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಇತರ ಕಡೆಯಿಂದ ಇಲ್ಲಿಗೆ ಪ್ರವಾಸ ಬರುವವರು ಸಂಯಮದಿಂದ ಇರಲಿ ಎಂದು ಇಲ್ಲಿ ಈ ಭಾರಿ ದಂಡ ವಿಧಿಸಲಾಗುತ್ತಿದೆ.
ಅಂದಹಾಗೆ ಇದು ಹಿಮಾಚಲ ಪ್ರದೇಶ ಸರ್ಕಾರ ಕೈಗೊಂಡಿರುವ ಕಠಿಣಕ್ರಮ. ಇಲ್ಲಿನ ಮನಾಲಿಯಲ್ಲಿ ಪ್ರವಾಸಿಗರು ಮಾಸ್ಕ್ ಧರಿಸದೆ ಇರುವುದು ಕಂಡುಬಂದಲ್ಲಿ ಅವರಿಗೆ 5 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಅದಕ್ಕೆ ತಪ್ಪಿದಲ್ಲಿ 8 ದಿನಗಳ ಕಾಲ ಜೈಲಿಗೆ ತಳ್ಳಲಾಗುತ್ತದೆ. ಹೀಗೆ ಇಲ್ಲಿ ಇದುವರೆಗೂ ಅಂದರೆ ಕಳೆದ ಏಳೆಂಟು ದಿನಗಳಲ್ಲಿ 3 ಲಕ್ಷ ರೂಪಾಯಿಗೂ ಅಧಿಕ ದಂಡ ಸಂಗ್ರಹಿಸಲಾಗಿದೆ ಎಂದು ಇಲ್ಲಿನ ಕುಲು ಎಸ್ಪಿ ಗುರುದೇವ್ ಶರ್ಮಾ ತಿಳಿಸಿದ್ದಾರೆ. ಕುಲು, ಮನಾಲಿ, ಶಿಮ್ಲಾದಲ್ಲಿ ಕೋವಿಡ್ ನಿಯಮ ಉಲ್ಲಂಘಿಸುವ ಪ್ರವಾಸಿಗರನ್ನು ಹೀಗೆ ನಿಯಂತ್ರಿಸುವ ಜತೆಗೆ ನಿಯಮ ಉಲ್ಲಂಘಿಸದಂತೆ ತಡೆಯಲಾಗುತ್ತಿದೆ. (ಏಜೆನ್ಸೀಸ್)