

ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸದಿದ್ದರೂ ನನ್ನ ವಾಹನದ ವಿರುದ್ಧ ದೂರು ದಾಖಲಾಗಿದೆ ಎಂಬ ಆರೋಪವನ್ನು ಸೋಷಿಯಲ್ ಮೀಡಿಯಾದಲ್ಲಿ ಹಲವರು ಮಾಡುತ್ತಿರುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಅದೇ ಕಾರಣಕ್ಕೆ ಹಲವರು ಆ ಸಂಬಂಧವಾಗಿ ಸೋಷಿಯಲ್ ಮೀಡಿಯಾದಲ್ಲೇ ಪೊಲೀಸರನ್ನು ಪ್ರಶ್ನಿಸುತ್ತಿರುವುದೂ ನಡೆಯುತ್ತಿದೆ.
ಸಂಚಾರ ನಿಯಮ ಉಲ್ಲಂಘಿಸಿದ್ದೇ ಆಗಿದ್ದರೆ ಫೋಟೋಪ್ರೂಫ್ ಕೊಡಿ ಎಂದು ಕೆಲವರು ಪೊಲೀಸರನ್ನು ಕೇಳುವುದೂ ಇದೆ. ಹಾಗೆ ಕೇಳಿದ ವ್ಯಕ್ತಿಯೊಬ್ಬರಿಗೆ ಪೊಲೀಸರು ನೀಡಿರುವ ಉತ್ತರ ಇದೀಗ ಹಲವರಿಗೆ ಎಚ್ಚರಿಕೆ ಗಂಟೆಯಂತಾಗಿದೆ ಎಂದರೂ ತಪ್ಪೇನಲ್ಲ. ಸಂಚಾರ ನಿಯಮ ಉಲ್ಲಂಘನೆ ಸಂಬಂಧ ದೂರು ದಾಖಲಾಗಿದ್ದರೆ, ಆ ಕುರಿತ ಸ್ಪಷ್ಟನೆಗೆ ಫೋಟೋಪ್ರೂಫ್ ಬೇಕಾಗಿದ್ದಲ್ಲಿ ವಾಹನ ಸವಾರರು ತೀರಾ ವಿಳಂಬ ಮಾಡುವಂತಿಲ್ಲ.
ಒಂದು ವೇಳೆ ಯಾರದ್ದಾದರೂ ವಿರುದ್ಧ ಸಂಚಾರ ನಿಯಮ ಉಲ್ಲಂಘನೆ ಮಾಡದಿದ್ದರೂ ದಂಡ ಕಟ್ಟುವಂತೆ ನೋಟಿಸ್ ಬಂದಿದ್ದರೆ ಅವರು ಆ ಬಗ್ಗೆ ಸ್ಪಷ್ಟನೆ ಆದಷ್ಟೂ ಬೇಗ ಕೇಳುವುದು ಒಳಿತು. ಏಕೆಂದರೆ ಸಂಚಾರ ನಿಯಮ ಉಲ್ಲಂಘನೆಯಾದ ಆರು ತಿಂಗಳ ಬಳಿಕ ಫೋಟೋಪ್ರೂಫ್ ಕೇಳಿದರೆ ಸಿಗುವುದಿಲ್ಲ ಎಂದು ಸಂಚಾರ ಪೊಲೀಸರೇ ಸ್ಪಷ್ಟಪಡಿಸಿದ್ದಾರೆ. ಆರು ತಿಂಗಳ ಒಳಗೆ ದಾಖಲೆ ಪಡೆದು ಸ್ಪಷ್ಟಪಡಿಸಿಕೊಳ್ಳದಿದ್ದರೆ, ಸಂಚಾರ ನಿಯಮ ಉಲ್ಲಂಘಿಸದಿದ್ದರೂ ದಂಡ ಕಟ್ಟುವುದು ಅನಿವಾರ್ಯವಾಗುತ್ತದೆ.
ಹೀಗೇಕಾಗುತ್ತದೆ?: ಕೆಲವು ಕದ್ದ ವಾಹನಗಳಿಗೆ ಕಿಡಿಗೇಡಿಗಳು ಚಾಲ್ತಿಯಲ್ಲಿರುವ ಇತರ ವಾಹನಗಳ ನಂಬರ್ ನಮೂದಿಸಿ ನಕಲಿ ನಂಬರ್ ಪ್ಲೇಟ್ ಹಾಕಿಕೊಳ್ಳುತ್ತಿರುವುದರಿಂದ ಅಂಥವರು ಸಂಚಾರ ನಿಯಮ ಉಲ್ಲಂಘಿಸಿದಾಗ, ಆ ನಂಬರ್ ಪ್ಲೇಟ್ ಹೊಂದಿರುವ ಅಸಲಿ ವಾಹನದ ಮಾಲೀಕರ ವಿಳಾಸಕ್ಕೆ ದಂಡದ ನೋಟಿಸ್ ಹೋಗುತ್ತದೆ. ಇದರಿಂದಾಗಿ ಕೆಲವು ವಾಹನ ಸವಾರರು ತಪ್ಪು ಮಾಡದಿದ್ದರೂ ಪೊಲೀಸರ ನೋಟಿಸ್ಗೆ ಉತ್ತರಿಸುವ ಅಥವಾ ದಂಡ ತೆರುವ ಪ್ರಸಂಗಗಳು ಸೃಷ್ಟಿಯಾಗಿರುವುದೂ ವರದಿಯಾಗಿವೆ. ಹೀಗಾಗಿ ಇಂಥ ಸಂದರ್ಭಗಳಲ್ಲಿ ವಾಹನಸವಾರರು ಆರು ತಿಂಗಳ ಒಳಗೆ ಈ ಥರದ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳುವುದು ಒಳ್ಳೆಯದು.