

ನವದೆಹಲಿ: ಕೋವಿಡ್-19 ಪಾಸಿಟಿವ್ ಆಗಿ ಅದೆಷ್ಟೋ ಮಂದಿ ಪ್ರಾಣ ಕಳೆದುಕೊಂಡಿರುವಾಗ, ಕರೊನಾಪೀಡಿತರಾಗಿಯೂ ಗುಣಮುಖರಾಗಿ ಮನೆಗೆ ಮರಳಿದವರಲ್ಲಿ ಖುಷಿಯೇನೋ ಇರುತ್ತದೆ. ಆದರೆ ಅಂಥವರೂ ಈಗ ನೆಮ್ಮದಿಯಾಗಿ ಮನೆಯಲ್ಲಿ ಇರಲಾರದಂಥ ಪರಿಸ್ಥಿತಿ ಸೃಷ್ಟಿಯಾಗಿದೆ. ಏಕೆಂದರೆ ಕೋವಿಡ್ನಿಂದ ಗುಣಮುಖರಾದವರನ್ನೇ ಹೆಚ್ಚಾಗಿ ಕಾಡುವ ಇತರ ಕಾಯಿಲೆಗಳೂ ಭಯಂಕರ ಬಾಧಕ ಹಾಗೂ ಮಾರಕವಾಗಿಯೂ ಪರಿಣಮಿಸುತ್ತಿರುವ ಪ್ರಕರಣಗಳು ವರದಿಯಾಗಿವೆ.
ಕೋವಿಡ್ನಿಂದ ಗುಣಮುಖರಾದ ಕೆಲವರನ್ನು ಬ್ಲ್ಯಾಕ್ ಫಂಗಸ್ (ಮ್ಯುಕರ್ ಮೈಕೋಸಿಸ್) ಎಂಬ ಕಾಯಿಲೆ ಅಡ್ಡಪರಿಣಾಮವಾಗಿ ಬಾಧಿಸುತ್ತಿರುವುದನ್ನು ಕೇಳಿರುತ್ತೇವೆ. ಆ ಬಳಿಕ ಕೋವಿಡ್ನಿಂದ ಗುಣಮುಖರಾದ ಮಕ್ಕಳನ್ನು ಮೆಸ್-ಸಿ ಎಂಬ ಮತ್ತೊಂದು ಕಾಯಿಲೆ ಸೈಡ್ ಇಫೆಕ್ಟ್ನಂತೆ ಕಾಡುತ್ತಿರುವುದೂ ವರದಿಯಾಗಿದೆ. ಇದೀಗ ಕೋವಿಡ್ನಿಂದ ಗುಣಮುಖರಾದವರನ್ನು ಕಾಡುವ ಮತ್ತೊಂದು ರೋಗ ವರದಿಯಾಗಿದ್ದು, ಕರೊನಾದಿಂದ ಗುಣವಾದರೂ ನೆಮ್ಮದಿಯಾಗಿ ಇರದಂಥ ಪರಿಸ್ಥಿತಿಯನ್ನು ಸೃಷ್ಟಿಸಿದೆ.
ಕೋವಿಡ್ನಿಂದ ಗುಣಮುಖರಾದವರಲ್ಲಿ ಕಂಡುಬಂದಿರುವ ಮತ್ತೊಂದು ರೋಗದ ಹೆಸರು ಅವ್ಯಾಸ್ಕುಲಾರ್ ನೆಕ್ರೊಸಿಸ್. ಕೋವಿಡ್ನಿಂದ ಗುಣಮುಖರಾದ ಕೆಲವರ ಸರಿಯಾದ ಮೂಳೆ ಸರಿಯಾಗಿ ರಕ್ತ ಸರಬರಾಜು ಆಗದೆ ಒಳಗಿನಿಂದ ಕರಗಲಾರಂಭಿಸುತ್ತದೆ. ಹೀಗಾಗಿ ಈ ರೋಗವನ್ನು ಸರಳವಾಗಿ ಬೋನ್ ಡೆತ್ ಎಂದೂ ಕರೆಯಲಾಗುತ್ತದೆ.
ಮುಂಬೈನ ಹಿಂದುಜಾ ಆಸ್ಪತ್ರೆಯಲ್ಲಿ ಇಂಥ ಮೂರು ಪ್ರಕರಣಗಳು ವರದಿಯಾಗಿವೆ. ಕೋವಿಡ್ನಿಂದ ಗುಣವಾಗಿರುವ 40 ವರ್ಷದ ಮೂವರಲ್ಲಿ ಈ ರೋಗ ಕಾಣಿಸಿಕೊಂಡಿದ್ದು, ಅವರು ವೈದ್ಯರಾಗಿದ್ದಿದ್ದರಿಂದ ಕೂಡಲೇ ರೋಗಲಕ್ಷಣಗಳನ್ನು ಗಮನಿಸಿ ಚಿಕಿತ್ಸೆಗೆ ದಾಖಲಾದರು. ಅವರ ತೊಡೆಯ ಮೂಳೆಯಲ್ಲಿ ನೋವು ಕಾಣಿಸಿಕೊಂಡಿದೆ ಎಂಬುದಾಗಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಸಂಜಯ್ ಅಗರ್ವಾಲ್ ಹೇಳಿದ್ದಾರೆ.
ಇದನ್ನೂ ಓದಿ: ಕೋವಿಡ್ ಲಸಿಕೆ ತೆಗೆದುಕೊಂಡರೆ ನಪುಂಸಕತ್ವ ಬರೋದು ನಿಜವೇ?
ಬ್ಲ್ಯಾಕ್ ಫಂಗಸ್ ಹಾಗೂ ಬೋನ್ ಡೆತ್ ಎರಡಕ್ಕೂ ಇರುವ ಸಾಮಾನ್ಯ ಕಾರಣವೆಂದರೆ ಸ್ಟೆರಾಯ್ಡ್ಸ್. ಕರೊನಾ ಎರಡನೇ ಅಲೆಯಲ್ಲಿ ಕೆಲವೊಂದು ನಿಗದಿತ ಪರಿಸ್ಥಿತಿಯಲ್ಲಿ ಚಿಕಿತ್ಸೆಗೆ ಸ್ಟೆರಾಯ್ಡ್ಸ್ ಬಳಸುವುದು ಅನಿವಾರ್ಯ. ಆದರೆ ಹೀಗೆ ಚಿಕಿತ್ಸೆ ಪಡೆದು ಗುಣವಾದವರಲ್ಲಿ ಬೋನ್ ಡೆತ್ ಕಂಡುಬಂದಿದೆ ಎಂದು ಅವರು ತಿಳಿಸಿದ್ದಾರೆ. 'ಅವ್ಯಾಸ್ಕುಲಾರ್ ನೆಕ್ರೊಸಿಸ್ ಆ್ಯಸ್ ಎ ಪಾರ್ಟ್ ಆಫ್ ಲಾಂಗ್ ಕೋವಿಡ್-19' ಎಂಬ ವಿಷಯಾಧಾರಿತವಾಗಿ ಡಾ.ಅಗರ್ವಾಲ್ ಅವರು ಅಧ್ಯಯನ ನಡೆಸಿದ್ದು, ಅದರ ವರದಿ 'ಬಿಎಂಜೆ ಕೇಸ್ ಸ್ಟಡೀಸ್' ಜರ್ನಲ್ನಲ್ಲಿ ಪ್ರಕಟವಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಕಾರ್ಟಿಕೊಸ್ಟೆರಾಯ್ಡ್ಸ್ ಬಳಸುವುದರಿಂದ ಬೋನ್ ಡೆತ್ ಬರುವ ಸಾಧ್ಯತೆ ಅಧಿಕವಾಗಿರುತ್ತದೆ. ಕೋವಿಡ್ನಿಂದ ಗುಣವಾದ ಕೆಲವರಲ್ಲಿ ಇದು ಒಂದೆರಡು ತಿಂಗಳ ಬಳಿಕ ಕಾಣಿಸಿಕೊಳ್ಳುತ್ತದೆ. ಅಂದಹಾಗೆ ಈ ಸ್ಟೆರಾಯ್ಡ್ಸ್ ಪರಿಣಾಮ ದೇಹದಲ್ಲಿ ಐದಾರು ತಿಂಗಳವರೆಗೂ ಇರುತ್ತದೆ. ಇನ್ನು 30ರಿಂದ 50 ವರ್ಷದವರಲ್ಲಿ ಈ ಕಾಯಿಲೆ ಕಾಣಿಸಿಕೊಳ್ಳುತ್ತದೆ ಎಂದು ಡಾ.ಅಗರ್ವಾಲ್ ಅಭಿಪ್ರಾಯಪಟ್ಟಿದ್ದಾರೆ.
ಸೊಂಟ, ತೊಡೆ, ನಿತಂಬ ಭಾಗದ ಮೂಳೆಗಳಲ್ಲಿ ನೋವು ಕಾಣಿಸಿಕೊಳ್ಳುವುದು ಈ ರೋಗದ ಪ್ರಮುಖ ಲಕ್ಷಣ. ಕೆಲವೊಮ್ಮೆ ಭುಜ, ಮೊಣಕಾಲು, ಕೈ-ಕಾಲುಗಳ ಭಾಗದ ಮೂಳೆಗಳಲ್ಲೂ ನೋವು ಕಾಣಿಸಿಕೊಳ್ಳುತ್ತದೆ. ಇದು ವ್ಯಕ್ತಿಗಳಿಗೆ ಅನುಸಾರ ನೋವು ಸಣ್ಣ ಪ್ರಮಾಣದಿಂದ ತೀವ್ರ ಪ್ರಮಾಣದವರೆಗೂ ಇರುತ್ತದೆ ಎಂದಿದ್ದಾರೆ ಡಾ.ಅಗರ್ವಾಲ್. (ಏಜೆನ್ಸೀಸ್)