ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಪುರುಷರೇ ಹೆಚ್ಚು, ಏಕೆ?; ಗೃಹಿಣಿಯರಿಗೆ ಖುಷಿ ಕೊಟ್ಟೀತು ಈ ಅಧ್ಯಯನ ವರದಿ!

Untitled-1
Published on

ನವದೆಹಲಿ: ಇದು ಪುರುಷರಿಗೆ ಸಂತೋಷದ ಸಂಗತಿ. ಮತ್ತೊಂದು ರೀತಿಯಲ್ಲಿ ಇದು ಅವರಿಗೆ ಬೇಸರದ ವಿಷಯವಾದರೂ ಅಚ್ಚರಿ ಏನಲ್ಲ. ಆದರೆ ಗೃಹಿಣಿಯರಿಗೆ ಇದು ಸಂತೋಷದ ವಿಚಾರ ಆಗಿರುವ ಸಾಧ್ಯತೆಯೇ ಅಧಿಕ. ಅಸಲಿಗೆ ಇದು ಆತ್ಮಹತ್ಯೆಯ ವಿಷಯ, ಇದರಲ್ಲೇನು ಸಂತೋಷ ಎಂಬ ಕುತೂಹಲ ಸಹಜ. ಆದರೆ ಆತ್ಮಹತ್ಯೆಗಳಿಗೆ ಸಂಬಂಧಿಸಿದಂತೆ ನಡೆದ ಅಧ್ಯಯನವೊಂದು ಸ್ತ್ರೀ-ಪುರುಷರಿಬ್ಬರೂ ಸಂತೋಷ-ಸಮಾಧಾನ ಪಟ್ಟುಕೊಳ್ಳುವಂಥ ಅಂಶವೊಂದನ್ನು ಬಹಿರಂಗಪಡಿಸಿದೆ.

ಪ್ರಸ್ತುತ ಲಭ್ಯವಿರುವ ಮಾಹಿತಿ ಪ್ರಕಾರ ಜಗತ್ತಿನಲ್ಲಿ ಆತ್ಯಹತ್ಯೆ ಮಾಡಿಕೊಳ್ಳುವವರ ಪೈಕಿ ಸ್ತ್ರೀಯರಿಗಿಂತ ಪುರುಷರೇ ಅಧಿಕ ಎಂಬುದು ಕಂಡುಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಅಧ್ಯಯನವೊಂದು ನಡೆದಿದ್ದು, ಅದು ಪುರುಷರೇ ಏಕೆ ಹೆಚ್ಚು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂಬುದರ ಹಿಂದಿನ ಅಂಶವನ್ನು ಕಂಡುಹಿಡಿದಿದೆ. ಕೊಲೊರಡೊ ಸ್ಟೇಟ್​ ಯುನಿವರ್ಸಿಟಿ ಇಂಥದ್ದೊಂದು ಅಧ್ಯಯನ ನಡೆಸಿದೆ.

ಈ ಅಧ್ಯಯನದಿಂದ ಹೊರಹೊಮ್ಮಿರುವ ಪ್ರಮುಖ ಅಂಶ ಪುರುಷರಿಗೆ ಆತ್ಮಹತ್ಯೆಯ ಸಾಧ್ಯತೆಯಿಂದ ಪಾರಾಗುವ ಪರಿಹಾರವನ್ನು ಸೂಚಿಸಿ, ಸಮಾಧಾನವನ್ನು ನೀಡುವಂತಿದೆ. ಮತ್ತೊಂದೆಡೆ ಇದು ಗೃಹಿಣಿಯರ ಸಂತೋಷವನ್ನು ಹೆಚ್ಚಿಸುವಂತಿದೆ. ಮನೆ ಯಜಮಾನ ಆತ್ಮಹತ್ಯೆಗೆ ಒಳಗಾಗದಂತೆ ತಪ್ಪಿಸುವ ದಾರಿಯೊಂದು ಸಿಕ್ಕಿರುವುದು ಸಂತೋಷಕ್ಕೆ ಕಾರಣವಾಗುವುದು ಸಹಜವೇ ಆಗಿದ್ದರೂ, ಅವರ ಸಂತೋಷಕ್ಕಿರುವ ಮತ್ತೊಂದು ಕಾರಣ ಕೌಟುಂಬಿಕ ಆರೈಕೆ. ಆರ್ಥಿಕ ಸಂಪನ್ಮೂಲ ಪೂರೈಕೆಗಷ್ಟೇ ಪುರುಷ ಹೆಚ್ಚಿನ ಒತ್ತು ನೀಡುತ್ತಿದ್ದು, ಕೌಟುಂಬಿಕ ಆರೈಕೆಗೆ ಹೆಚ್ಚಿನ ಆದ್ಯತೆ ನೀಡದಿರುವುದೇ ಆತ್ಮಹತ್ಯೆ ಪ್ರಕರಣಗಳಲ್ಲಿ ಪುರುಷರ ಸಂಖ್ಯೆ ಹೆಚ್ಚಿರಲು ಪ್ರಮುಖ ಕಾರಣ ಎಂಬುದು ಈ ಅಧ್ಯಯನದ ತಿರುಳು.

ಪುರುಷರು ಕೌಟುಂಬಿಕ ಆರೈಕೆ ನಡೆಸುವುದಕ್ಕಿಂತ ಆರ್ಥಿಕ ಜವಾಬ್ದಾರಿ ನಿಭಾಯಿಸಲಿಕ್ಕೇ ಹೆಚ್ಚಿನ ಒತ್ತು ಕೊಡುತ್ತಿರುತ್ತಾರೆ. ಯಾವಾಗ ಅವರ ಆರ್ಥಿಕ ಸಂಪನ್ಮೂಲವಾದ ಉದ್ಯೋಗ ಅಥವಾ ಉದ್ಯಮ ಸಂಕಷ್ಟಕ್ಕೆ ಒಳಗಾಗುತ್ತದೋ ಅವರು ಕುಸಿದುಹೋಗಿ ಬಿಡುತ್ತಾರೆ. ಆದರೆ ಆರ್ಥಿಕ ಜವಾಬ್ದಾರಿ ನಿಭಾಯಿಸುವ ಜೊತೆಜೊತೆಗೆ ಕೌಟುಂಬಿಕ ಆರೈಕೆಯನ್ನೂ ನಿಭಾಯಿಸಿದಲ್ಲಿ ಸಂಕಷ್ಟದ ಸಂದರ್ಭದಲ್ಲಿ ಅವರಿಗೆ ಆತ್ಮಹತ್ಯೆಯ ಯೋಚನೆ ಬರುವುದು ವಿರಳ ಎನ್ನುತ್ತಾರೆ ಈ ಅಧ್ಯಯನ ನಡೆಸಿದ ಪ್ರಮುಖರಲ್ಲಿ ಒಬ್ಬರಾಗಿರುವ ಸೈಕಾಲಜಿ ಪ್ರೊಫೆಸರ್ ಸಿಲಿವಿಯಾ ಸಾರಾ ಕೆನೆಟ್ಟೊ.

ಮಕ್ಕಳಿಗೆ ಪಾಠ ಹೇಳಿಕೊಡುವುದು, ಮನೆಯಲ್ಲಿರುವ ಅವಲಂಬಿತ ಹಿರಿಯರ ಆರೈಕೆ ಮಾಡುವುದು ಸೇರಿ ಇನ್ನಿತರ ಕೌಟುಂಬಿಕ ನಿರ್ವಹಣೆಯಲ್ಲಿ ತೊಡಗಿಸಿಕೊಂಡರೆ ಪುರುಷರು ಹೆಚ್ಚಾಗಿ ಆತ್ಮಹತ್ಯೆಗೆ ಒಳಗಾಗುವುದನ್ನು ತಡೆಯಬಹುದು ಎಂಬುದು ಈ ಅಧ್ಯಯನದ ಪ್ರಮುಖ ಅಂಶ. ಅಮೆರಿಕ, ಆಸ್ಟ್ರಿಯಾ, ಬೆಲ್ಜಿಯಂ, ಕೆನಡ, ಜಪಾನ್​ ಸೇರಿ ಸುಮಾರು 20 ದೇಶಗಳಲ್ಲಿನ ಆತ್ಮಹತ್ಯೆ ಪ್ರಕರಣ, ಪುರುಷರಿಂದ ಕೌಟುಂಬಿಕ ಆರೈಕೆ, ನಿರುದ್ಯೋಗ ಇತ್ಯಾದಿ ವಿಚಾರಗಳನ್ನು ಅಭ್ಯಸಿಸಿ ಈ ಅಧ್ಯಯನ ನಡೆಸಲಾಗಿದೆ. ಎಲ್ಲಿ ಪುರುಷರು ಕೌಟುಂಬಿಕ ಆರೈಕೆಯಂಥ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದರೋ ಅಲ್ಲಿ ಪುರುಷರ ಆತ್ಮಹತ್ಯೆ ಪ್ರಕರಣ ಕಡಿಮೆ ಇರುವುದು ಕಂಡುಬಂದಿದೆ.

ಪುರುಷರ ಕೌಟುಂಬಿಕ ಆರೈಕೆ ಹೆಚ್ಚಿರುವ ದೇಶಗಳಲ್ಲಿ ಹೆಚ್ಚಿನ ನಿರುದ್ಯೋಗವಿದ್ದರೂ ಅದು ಆತ್ಮಹತ್ಯೆಯೊಂದಿಗೆ ತಳುಕು ಹಾಕಿಕೊಂಡಿಲ್ಲ. ಪುರುಷರ ಕೌಟುಂಬಿಕ ಆರೈಕೆ ಕಡಿಮೆ ಇದ್ದು, ನಿರುದ್ಯೋಗ ಹೆಚ್ಚಿರುವ ದೇಶಗಳಲ್ಲಿ ಅದು ಪುರುಷರ ಆತ್ಮಹತ್ಯೆಯೊಂದಿಗೆ ತಳುಕು ಹಾಕಿಕೊಂಡಿರುವುದು ಈ ಅಧ್ಯಯನದಲ್ಲಿ ತಿಳಿದು ಬಂದಿದೆ. ಒಟ್ಟಿನಲ್ಲಿ ಕೌಟುಂಬಿಕ ಆರೈಕೆಯಲ್ಲಿ ಹೆಚ್ಚು ತೊಡಗಿಸಿಕೊಂಡಿರುವ ಪುರುಷರು ಆರ್ಥಿಕ ಸಂಕಷ್ಟದಲ್ಲಿ ಗಟ್ಟಿಯಾಗಿರುತ್ತಾರೆ ಎನ್ನುತ್ತಿದೆ ಈ ಅಧ್ಯಯನ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net