More

    ಬೇಸಿಗೆಯ ಬಿಸಿಗೆ ತಂಪು ನೀಡುವ ಸೌತೆಕಾಯಿ

    ಬೇಸಿಗೆಯ ಬಿಸಿಗೆ ತಂಪು ನೀಡುವ ಸೌತೆಕಾಯಿದಿನದಿಂದ ದಿನಕ್ಕೆ ವಾತಾವರಣದಲ್ಲಿ ಉಷ್ಣತೆ ಹೆಚ್ಚಾಗುತ್ತಾ ಹೋಗುತ್ತಿದೆ. ಇಂತಹ ಸಂದರ್ಭದಲ್ಲಿ ನಾವು ಹೆಚ್ಚು ಹೆಚ್ಚಾಗಿ ತಂಪು ಗುಣವನ್ನು ಹೊಂದಿರುವ ಮತ್ತು ದ್ರವ ಪ್ರಧಾನ ಆಹಾರಗಳನ್ನು ಸೇವಿಸಬೇಕು. ಇಂತಹ ಆಹಾರಗಳಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವುದು ಸೌತೆಕಾಯಿ. ಉರಿ ಬೇಸಿಗೆಯಲ್ಲಿ ನಾವು ನಿತ್ಯವೂ ಸೌತೆಕಾಯಿಯನ್ನು ಸೇವಿಸಬಹುದು.

    ವಿಶೇಷಗಳೇನು?: ಸೌತೆಕಾಯಿ ತಂಪು ಗುಣವನ್ನು ಹೊಂದಿದೆ. ಜೀರ್ಣಕ್ರಿಯೆಗೆ ಹಗುರವಾದ ಈ ಸೌತೆಕಾಯಿಯು ಪಿತ್ತ ದೋಷವನ್ನು ನಿಯಂತ್ರಿಸುತ್ತದೆ ಮತ್ತು ಅತಿಯಾಗಿ ಸೇವಿಸಿದರೆ ವಾತ ದೋಷವನ್ನು ಹೆಚ್ಚಿಸುತ್ತದೆ. ಸೌತೆಕಾಯಿ ಸೇವನೆಯಿಂದ ಬಾಯಿ ರುಚಿ ಹೆಚ್ಚಾಗುತ್ತದೆ. ತಲೆಸುತ್ತು ಬರುವುದು, ದೇಹದಲ್ಲಿ ಎಲ್ಲಾದರೂ ಉರಿ ಇರುವುದು, ಪದೇ ಪದೇ ವಾಂತಿ ಆಗುವುದು, ಊರಿಮೂತ್ರ ಮತ್ತು ಮೂತ್ರ ಮಾಡಲು ಕಷ್ಟವಾಗುವ ಸಮಸ್ಯೆಗಳಲ್ಲಿ ಇದು ತುಂಬಾ ಲಾಭದಾಯಕ. ಸವತೆಕಾಯಿಯ ಬೀಜಗಳನ್ನು ನೀರಿಗೆ ಹಾಕಿ ರುಬ್ಬಿಕೊಂಡು ಉಷ್ಣವಾದಾಗ ಹಳ್ಳಿಗಳಲ್ಲಿ ಸೇವಿಸುತ್ತಾರೆ. ಒಣಗಿದ ಬೀಜಗಳನ್ನು ಸುಮಾರು ಐದು ಗ್ರಾಂನಷ್ಟು ತೆಗೆದುಕೊಂಡು ಪುಡಿ ಮಾಡಿ ನೀರಿಗೆ ಹಾಕಿ ಕುಡಿಯುವುದರಿಂದ ಮಾಂಸ ಖಂಡಗಳಲ್ಲಿನ ಸುಸ್ತು ಕಡಿಮೆ ಆಗುತ್ತದೆ. ಆಯುರ್ವೆದದ ಬಹುತೇಕ ಎಲ್ಲಾ ಗ್ರಂಥಗಳಲ್ಲಿ ಇದನ್ನು ಮೂತ್ರಲ ಎಂದು ಕರೆದಿದ್ದಾರೆ. ಅಂದರೆ ಮೂತ್ರ ಸರಾಗವಾಗಿ ಹೋಗಲು ಇದು ಅನುಕೂಲ ಮಾಡಿಕೊಡುತ್ತದೆ ಎಂದರ್ಥ. ಆದ್ದರಿಂದ ಉರಿಮೂತ್ರ, ಮೂತ್ರ ತಡೆಗಳಂತಹ ಸಮಸ್ಯೆಗಳಲ್ಲಿ ಸೌತೆಕಾಯಿ ಬಳಕೆ ತುಂಬ ಅನುಕೂಲಕರ.

    ಚರ್ಮದ ಕಿರಿಕಿರಿ ತಪ್ಪಿಸಲು ಸಹಕಾರಿ: ಸೌತೆಕಾಯಿಯನ್ನು ರುಬ್ಬಿ ಪೇಸ್ಟ್ ಮಾಡಿ ಹಚ್ಚಿಕೊಂಡರೆ ಚರ್ಮದಲ್ಲಿನ ಉರಿ ಕಡಿಮೆಯಾಗುವುದರ ಜೊತೆಗೆ ಚರ್ಮದ ತೇವಾಂಶವನ್ನು ಹೆಚ್ಚಿಸಿ ಚರ್ಮದಲ್ಲಿ ವಿವಿಧ ಕಾರಣದಿಂದ ಆಗುವ ಕಿರಿಕಿರಿಯನ್ನು ತಪ್ಪಿಸುತ್ತದೆ. ಮಾತ್ರವಲ್ಲದೆ ಸನ್ ಬರ್ನ್ ಅಂದರೆ ಸೂರ್ಯನ ಕಿರಣಗಳ ಕಾರಣದಿಂದ ಅಥವಾ ಅತಿಯಾದ ಬಿಸಿಲಿನಿಂದ ಚರ್ಮ ಕಪ್ಪಾಗಿ ಉರಿಯುತ್ತಿದ್ದರೆ ಅದರ ನಿಯಂತ್ರಣಕ್ಕೆ ಬಳಸುತ್ತಾರೆ. ಚರ್ಮದ ಸೌಂದರ್ಯದ ಕಾಳಜಿ ಇರುವವರು ಸೌತೆಕಾಯಿಯನ್ನು ತುಂಬಾ ಇಷ್ಟಪಡುತ್ತಾರೆ. ಏಕೆಂದರೆ ಫೇಸ್ ಪ್ಯಾಕ್ ಮಾಡಿಕೊಳ್ಳಲು ಸೌತೆಕಾಯಿ ಅತ್ಯಂತ ಶ್ರೇಷ್ಠವಾದ ದ್ರವ್ಯಗಳಲ್ಲಿ ಒಂದು. ಸೌತೆಕಾಯಿಯ ಸಿಪ್ಪೆ ತೆಗೆದು ಪೇಸ್ಟ್ ಮಾಡಿ ಅದಕ್ಕೆ ಸ್ವಲ್ಪ ನಿಂಬೆಹಣ್ಣಿನ ರಸ ಸೇರಿಸಿ ಫೇಸ್​ಪ್ಯಾಕ್ ಮಾಡಿಕೊಂಡರೆ ಮೊಡವೆ, ಚರ್ಮದ ಉರಿ, ಸುಕ್ಕುಗಟ್ಟುವುದು ಮತ್ತು ಚರ್ಮ ಕಪ್ಪಾಗುವುದನ್ನು ತಪ್ಪಿಸಬಹುದು. ಪಿತ್ತ ಪ್ರಕೃತಿಯವರು, ಯಾವಾಗಲೂ ಉಷ್ಣ ಆಗುತ್ತಿರುವವರು, ಬೊಜ್ಜು, ಚರ್ಮದ ಸಮಸ್ಯೆಗಳಿಂದ ಬಳಲುತ್ತಿರುವವರು ಸೌತೆಕಾಯಿಯನ್ನು ಆಗಾಗ ಸೇವಿಸುವುದರಿಂದ ಸಮಸ್ಯೆಗಳು ನಿಧಾನವಾಗಿ ಕಡಿಮೆಯಾಗುತ್ತಾ ಹೋಗುತ್ತವೆ. ಆದರೆ ವಾತ ಪ್ರಕೃತಿಯವರು, ಮೈಕೈ ನೋವು, ಸುಸ್ತಿನಿಂದ ಬಳಲುತ್ತಿರುವವರು ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬಾರದು. ಆದರೂ ಅಪರೂಪಕ್ಕೊಮ್ಮೆ ಸೇವಿಸಿದರೆ ಯಾವುದೇ ತೊಂದರೆಗಳು ಆಗುವುದಿಲ್ಲ.

    ಕ್ಯಾನ್ಸರ್ ನಿರೋಧಕ ಗುಣ: ಇತ್ತೀಚಿನ ಹಲವು ಸಂಶೋಧನೆಗಳಲ್ಲಿ ಸೌತೆಕಾಯಿಗೆ ಕ್ಯಾನ್ಸರ್ ನಿರೋಧಕ ಮತ್ತು ಐಬಿಎಸ್ ಸಮಸ್ಯೆಯನ್ನು ಕಡಿಮೆ ಮಾಡುವ ಗುಣವಿದೆ ಎಂದು ಕಂಡುಕೊಂಡಿದ್ದಾರೆ. ಸೌತೆಕಾಯಿಯಲ್ಲಿ ವಿಟಮಿನ್ ಕೆ ಹೇರಳವಾಗಿದೆ. ಹಾಗಾಗಿ ರಕ್ತಸ್ರಾವ ಇದ್ದಾಗ ರಕ್ತ ಹೆಪ್ಪುಗಟ್ಟಲು ಮತ್ತು ಮೂಳೆಯ ಬೆಳವಣಿಗೆಯಲ್ಲಿ ಇದು ಸಹಾಯ ಮಾಡು ತ್ತದೆ. ಜೊತೆಗೆ ಉತ್ತಮ ಪ್ರಮಾಣದಲ್ಲಿ ವಿಟಮಿನ್ ಡಿ, ವಿಟಮಿನ್ ಸಿ, ತಾಮ್ರ, ಫಾಸ್ಪರಸ್, ಪೋಟಾಸಿಯಂ ಮತ್ತು ಮ್ಯಾಗ್ನಿಷಿಯಂ ನಂತಹ ಪೋಷಕಾಂಶಗಳು ಲಭ್ಯವಿವೆ.

    ಸಿಪ್ಪೆಯೂ ಉಪಕಾರಿ: ಸೌತೆಕಾಯಿಯ ಸಿಪ್ಪೆಯಲ್ಲಿ ಪೋಲಿಕ್ ಆಸಿಡ್, ವಿಟಮಿನ್ ಎ ಮತ್ತು ವಿಟಮಿನ್ ಸಿ ಹೇರಳವಾಗಿ ಇರುತ್ತವೆ. ಹಾಗಾಗಿ ಇದು ಒಳ್ಳೆಯ ಆಂಟಿಆಕ್ಸಿಡೆಂಟ್ ಆಗಿ ಕೂಡ ಕೆಲಸ ಮಾಡಬಲ್ಲದು. ಬೇಸಿಗೆಯಲ್ಲಿ ದೇಹವನ್ನು ತಂಪು ಮಾಡಿಕೊಳ್ಳಲು ಹೆಚ್ಚಿದ ಸೌತೆಕಾಯಿಗೆ ಸ್ವಲ್ಪ ಬಸಳೆ ಸೊಪ್ಪು, ಸೇಬು ಹಣ್ಣಿನ ತುಂಡುಗಳು ಮತ್ತು ಕರಬೂಜದ ಹಣ್ಣಿನ ಹೋಳುಗಳನ್ನು ಹಾಕಿ ಮಿಕ್ಸಿಯಲ್ಲಿ ರುಬ್ಬಿ ರುಚಿಗೆ ಬೇಕಿದ್ದರೆ ಸ್ವಲ್ಪ ಜೋನಿಬೆಲ್ಲವನ್ನು ಹಾಕಿ ಕುಡಿದರೆ ಶಕ್ತಿ ಹೆಚ್ಚಾಗುವುದರ ಜೊತೆಗೆ ಉಷ್ಣತೆ ಕಡಿಮೆಯಾಗುತ್ತದೆ.

    5 ರೂ. ಪಾರ್ಲೆ-ಜಿ ಬಿಸ್ಕತ್​ ಬೆಲೆ ದುಬೈ, ಪಾಕಿಸ್ತಾನ ರಾಷ್ಟ್ರಗಳಲ್ಲಿ ಎಷ್ಟಿದೆ ಗೊತ್ತಾ? ಕೇಳಿದ್ರೆ ದಂಗಾಗ್ತೀರಾ!

    ಈತ ಕ್ರೀಸ್​ಗೆ ಬಂದ್ರೆ ಬೌಲರ್​ಗಳೇ ಬೆವರುತ್ತಾರೆ! ಅಜಯ್​ ಜಡೇಜಾ ಹೆಸರಿಸಿದ ಸ್ಟಾರ್​ ಬ್ಯಾಟ್ಸ್​ಮನ್ ಇವರೇ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts