More

  ಅಡಕೆ ಬೆಳೆಯತ್ತ ಅನ್ನದಾತನ ಚಿತ್ತ

  ಧನಂಜಯ ಎಸ್. ಹಕಾರಿ ದಾವಣಗೆರೆ: ಮಲೆನಾಡಿಗಷ್ಟೇ ಸೀಮಿತವಾಗಿದ್ದ ವಾಣಿಜ್ಯ ಬೆಳೆ ಅಡಕೆ ಇಂದು ಮಧ್ಯ ಕರ್ನಾಟಕದಲ್ಲೂ ವ್ಯಾಪಕವಾಗಿ ವಿಸ್ತರಣೆಯಾಗುತ್ತಿದ್ದು, ರೈತರು ತಮ್ಮ ಸಾಂಪ್ರದಾಯಕ ಬೆಳೆಗಳಾದ ಭತ್ತ, ಗೋವಿನಜೋಳದಿಂದ ವಿಮುಖರಾಗಿ ಅಡಕೆ ಬೆಳೆಯತ್ತ ಆಕರ್ಷಿತರಾಗುತ್ತಿದ್ದಾರೆ.

  ಹೌದು… ದಾವಣಗೆರೆ ಜಿಲ್ಲೆಯ 1.4 ಲಕ್ಷ ಹೆಕ್ಟೇರ್ ತೋಟಗಾರಿಕಾ ಪ್ರದೇಶದಲ್ಲಿ ಪ್ರಸ್ತುತ 88,085 ಹೆ. ಪ್ರದೇಶವನ್ನು ಅಡಕೆ ಆಕ್ರಮಿಸಿಕೊಂಡಿದೆ.

  ಭತ್ತ, ಗೋವಿನಜೋಳ ಮತ್ತಿತರ ಬೆಳೆಗಳಲ್ಲಿ ಇಳುವರಿ ಕುಸಿತ, ಕೊರತೆ, ಸೂಕ್ತ ಬೆಲೆ ಸಿಗದೇ ಇರುವುದು, ಕೂಲಿಯಾಳುಗಳ ಕೊರತೆಯಿಂದ ತಮ್ಮ ಸಾಂಪ್ರದಾಯಕ ಬೆಳೆಗಳ ಬಗ್ಗೆ ಆಸಕ್ತಿ ಕಡಿಮೆಯಾಗಿರುವುದು ಸಹಜ.

  ಇದರ ಜತೆಗೆ ಅಡಕೆ ಧಾರಣೆ ವರ್ಷದಿಂದ ವರ್ಷಕ್ಕೆ ಏರುಗತಿಯಲ್ಲಿರುವುದು ಹಾಗೂ ಬಹುವಾರ್ಷಿಕ ಬೆಳೆಯಾದ್ದರಿಂದ ರೈತರು ಅದರ ಕಡೆಗೆ ಆಕರ್ಷಿತರಾಗಿದ್ದಾರೆ.

  ಮಿಶ್ರ ಬೆಳೆಗೆ ಒತ್ತು: ಅಡಕೆ ಬಹುವಾರ್ಷಿಕ ಬೆಳೆಯಾಗಿದ್ದು, ಮಿಶ್ರ ಬೆಳೆಗೆ ಹೆಚ್ಚಿನ ಒತ್ತು ನೀಡಬೇಕು. ಬೆಳೆ ನಷ್ಟ ತಪ್ಪಿಸಲು ಅಡಕೆ ಸಸಿಗಳ ಮಧ್ಯ ಪಪ್ಪಾಯ, ಬಾಳೆ, ಮಾವು, ತರಕಾರಿ ಮತ್ತಿತರ ಬೆಳೆಗಳನ್ನಿಡಬಹುದು.

  ನಂತರದ ವರ್ಷಗಳಲ್ಲಿ ವಾತಾವರಣಕ್ಕೆ ತಕ್ಕಂತೆ ಕಾಳು ಮೆಣಸು ಮತ್ತಿತರ ಮಸಾಲೆ ಪದಾರ್ಥಗಳ ಬೆಳೆಗಳನ್ನು ಅಡಕೆಗೆ ಹಬ್ಬಿಸುವ ಮೂಲಕ ಒಳ್ಳೆಯ ಆದಾಯ ನಿರೀಕ್ಷಿಸಬಹುದು.

  ಅರೇಕಾ ಹಬ್: 2018ರಲ್ಲಿ 56,344 ಹೆಕ್ಟೇರ್‌ನಲ್ಲಿದ್ದ ಅಡಕೆ 2023ರ ವೇಳೆಗೆ 84,700 ಹೆಕ್ಟೇರ್ ಪ್ರದೇಶ ಆಕ್ರಮಿಸಿದೆ. ಕಳೆದ 5 ವರ್ಷಗಳಲ್ಲಿ ಅಡಕೆ ಬೆಳೆಗೆ ವಾಲುತ್ತಿರುವ ರೈತರ ಸಂಖ್ಯೆ ದುಪ್ಪಟ್ಟಾಗಿದೆ. ಬೆಳೆ ವಿಸ್ತರಣೆ ವೇಗ ಗಮನಿಸಿದರೆ ಮುಂದಿನ ಎರಡು ವರ್ಷಗಳಲ್ಲಿ ಮಧ್ಯ ಕರ್ನಾಟಕ ಅರೇಕಾ ಹಬ್ ಆದರೂ ಅಚ್ಚರಿಯಿಲ್ಲ.

  ಜಿಲ್ಲೆಯಲ್ಲಿ ಕೆಲ ವರ್ಷಗಳ ಹಿಂದೆ ಅಡಕೆ ಚನ್ನಗಿರಿ, ಹೊನ್ನಾಳಿ, ನ್ಯಾಮತಿ ತಾಲೂಕಿಗೆ ಮಾತ್ರ ಸೀಮಿತವಾಗಿತ್ತು. ನಂತರ ದಾವಣಗೆರೆ, ಜಗಳೂರು, ಹರಿಹರ ತಾಲೂಕಿನಲ್ಲೂ ವಿಸ್ತರಿಸಿಕೊಂಡಿದೆ. ಇದು ಮುಂದಿನ ದಿನಗಳಲ್ಲಿ ಆಹಾರ ಕೊರತೆಗೆ ಕಾರಣವಾಗಲಿದೆ ಎನ್ನುತ್ತಾರೆ ಕೃಷಿ ತಜ್ಞರು.

  ರಾಶಿ ಅಡಕೆಗೆ ಬೇಡಿಕೆ: ಮಲೆನಾಡು ಭಾಗದಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಚಾಲಿ ಅಡಕೆ ರುಚಿ ಹೆಚ್ಚು. ರಾಶಿ ಅಡಕೆ ರುಚಿ ಕಡಿಮೆಯಾದರೂ ತೂಕ ಜಾಸ್ತಿ. ಉತ್ಕೃಷ್ಟ ಗುಣಮಟ್ಟದ ಕಾರಣ ಮಾರುಕಟ್ಟೆಯಲ್ಲಿ ಅದಕ್ಕೆ ಉತ್ತಮ ಬೇಡಿಕೆ ಇದೆ. ಹೆಚ್ಚು ಉಷ್ಣಾಂಶ ಇರುವ ಪ್ರದೇಶದಲ್ಲಿ ರಾಶಿ ಅಡಕೆ ಎಕರೆಗೆ 12 ಕ್ವಿಂ. ಇಳುವರಿ ದೊರೆಯಲಿದೆ. ಪ್ರಸ್ತುತ ಕ್ವಿಂಟಾಲ್‌ಗೆ ಒಣ ಅಡಕೆ 54 ಸಾವಿರ ರೂ. ದರವಿದೆ.

  ಜಿಲ್ಲೆಯಲ್ಲಿದೆ ನಂ.1 ಮಾರುಕಟ್ಟೆ: ಅಡಕೆಗೆ ಜಿಲ್ಲೆಯಲ್ಲಿ ವ್ಯವಸ್ಥಿತ ಮಾರುಕಟ್ಟೆ ಇದೆ. ರೈತರು ತಮ್ಮ ಉತ್ಪನ್ನವನ್ನು ಸ್ಥಳೀಯವಾಗಿ ಮಾರಾಟ ಮಾಡಬಹುದು. ಹಸಿ ಅಡಕೆ ಮಾರುಕಟ್ಟೆಯಲ್ಲಿ ದಾವಣಗೆರೆ ಜಿಲ್ಲೆ ರಾಜ್ಯದಲ್ಲೇ ನಂ.1 ಎಂಬ ಹೆಗ್ಗಳಿಕೆ ಪಡೆದಿದೆ.
  ಗುಣಮಟ್ಟದ ಅಡಕೆ ದೊರೆಯುವ ಕಾರಣ ಖರೀದಿಗೆ ರಾಜ್ಯದ ವಿವಿಧೆಡೆಗಳಿಂದ ವರ್ತಕರು ಬರುತ್ತಿದ್ದಾರೆ.

  ವರ್ಷ ಹೆಕ್ಟೇರ್ ಪ್ರದೇಶ
  2018-19 56,344
  2019-20 65,280
  2020-21 69,700
  2021-22 76,800
  2022-23 84,700
  2023-24 88,085

  ತಾಲೂಕುವಾರು ಅಡಕೆ ಬೆಳೆದಿರುವ ಪ್ರದೇಶ (ಹೆಕ್ಟೇರ್‌ಗಳಲ್ಲಿ)
  ಚನ್ನಗಿರಿ 35,848
  ಹೊನ್ನಾಳಿ 12,821
  ನ್ಯಾಮತಿ 6610
  ದಾವಣಗೆರೆ 20,148
  ಹರಿಹರ 5751
  ಜಗಳೂರು 3606

  ಜಿಲ್ಲೆಯಲ್ಲಿ ಅಡಕೆ ಬೆಳೆಗಾರರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡಿದೆ. ಉತ್ತಮ ಬೆಲೆ ಇರುವ ಕಾರಣದಿಂದ ರೈತರು ಇತರ ಬೆಳೆಗಳನ್ನು ಬೆಳೆಯುವುದಕ್ಕಿಂತ ಅಡಕೆ ಬೆಳೆಯುವತ್ತ ಆಸಕ್ತಿ ವಹಿಸುತ್ತಿದ್ದಾರೆ.
  ಸಿ.ಎಚ್.ರಾಘವೇಂದ್ರ ಪ್ರಸಾದ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ

  ಭತ್ತ, ಗೋವಿನಜೋಳದಿಂದ ನಿರೀಕ್ಷಿತ ಆದಾಯ ದೊರೆಯುವುದಿಲ್ಲ. ಜತೆಗೆ, ಖರ್ಚು ಹೆಚ್ಚು. ಬದಲಿಗೆ, ಅಡಕೆ ಮೂರ‌್ನಾಲ್ಕು ವರ್ಷ ಜತನದಿಂದ ಕಾಪಾಡಿಕೊಂಡರೆ ಕನಿಷ್ಟ ಇಪ್ಪತ್ತು ಮೂವತ್ತು ವರ್ಷ ಉತ್ತಮ ಆದಾಯ ಪಡೆಯಬಹುದು.
  ಅಭಿಲಾಷ್, ರೈತ, ಬೇಲಿಮಲ್ಲೂರು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts