More

    ಮತ್ತೊಮ್ಮೆ ಅಬ್ಬರಿಸಲು ಸಜ್ಜಾದ ಸ್ಕ್ಯಾಮ್​ ಸರಣಿ; ಶೂಟಿಂಗ್​ಗೂ ಮುನ್ನವೇ ನೋಟಿಸ್​ ಜಾರಿ

    ಮುಂಬೈ: ಇತ್ತೀಚಿನ ವರ್ಷಗಳಲ್ಲಿ ಸಿನಿಮಾಗಳ ಜೊತೆಗೆ ವೆಬ್​ ಸೀರೀಸ್​ಗಳು ಸಹ ಅಪಾರ ಪ್ರಮಾಣದ ಮನ್ನಣೆ ಗಳಿಸುವಲ್ಲಿ ಯಶಸ್ವಿಯಾಗಿದೆ. ಈ ಪೈಕಿ ಮೊದಲಿಗೆ ಕೇಳಿ ಬರುವ ಹೆಸರೆಂದರೆ ಅದು ಸ್ಕ್ಯಾಮ್​ ಹೆಸರಿನ ವೆಬ್​ ಸರಣಿಗಳು ಎಂದು ಹೇಳಬಹುದಾಗಿದೆ. ಸ್ಕ್ತಾಮ್​ 1992, 2003 ಹೆಸರಿನ ಸರಣಿಗಳು ಈಗಾಗಲೇ ಬಿಡುಗಡೆಗೊಂಡು ಸಾಕಷ್ಟು ಜನಪ್ರಿಯತೆ ಗಳಿಸಿದ್ದು, ಇದೀಗ ಸ್ಕ್ಯಾಮ್​ 2010 ಹೆಸರಿನ ವೆಬ್​ ಸರಣಿಯೊಂದು ತೆರೆಗೆ ತರಲು ನಿರ್ಮಾಪಕರು ಸಜ್ಜಾಗಿದ್ದಾರೆ.

    ಸ್ಕ್ಯಾಮ್​ 1992 ವೆಬ್​ ಸರಣಿಯಲ್ಲಿ ಷೇರುಮಾರುಕಟ್ಟೆಯಲ್ಲಿ ಭಾರಿ ದೊಡ್ಡ ಹಗರಣ ಮಾಡಿದ್ದ ಹರ್ಷದ್ ಮೆಹ್ತಾ ಜೀವನವನ್ನು ಕಟ್ಟಿಕೊಡಲಾಗಿತ್ತು. ಈ ವೆಬ್​ ಸೀರೀಸ್​ ಪಡೆದ ಯಶಸ್ಸನ್ನು ಮುಂದಿಟ್ಟುಕೊಂಡು ನಿರ್ಮಾಪಕರು ಛಾಪಾ ಕಾಗದ ಹಗರಣವನ್ನು ವಿಷಯವಸ್ತುವನ್ನಾಗಿಟ್ಟುಕೊಂಡು ಬೆಂಗಳೂರಿನ ಗಾಢ ನಂಟಿರುವ ಅಬ್ದುಲ್​ ಕರೀಮ್​​ ತೆಲಗಿ ಜೀವನವನ್ನು ಆಧರಿಸಿ ಸ್ಕ್ಯಾಮ್​ 2003 ವೆಬ್​ ಸರಣಿಯನ್ನು ನಿರ್ಮಿಸಲಾಗಿತ್ತು. ಈ ಎರಡು ವೆಬ್​ ಸರಣಿಗಳನ್ನು ನಿರ್ಮಿಸಿದ್ದ ತಂಡವೇ ಇದೀಗ ಸ್ಕ್ಯಾಮ್​ 2010 ಹೊರತರಲು ಸಜ್ಜಾಗಿದೆ.

    ಸ್ಕ್ಯಾಮ್ 2010 ವೆಬ್​ ಸರಣಿಯು ಸಹರಾ ಸ್ಕ್ಯಾಮ್ ಮಾಡಿದ ಸುಬ್ರತಾ ರಾಯ್ ಕುರಿತಾದ ಕತೆಯನ್ನು ಆಧರಿಸಿ ಮಾಡಲಾಗುತ್ತಿದೆ. ವೆಬ್​ ಸರಣಿಯ ಘೋಷಣೆ ಮಾಡಿದ ಕೆಲವೇ ಗಂಟೆಗಳಲ್ಲಿ ಸಹರಾ ಸಂಸ್ಥೆಯಿಂದ ವೆಬ್ ಸರಣಿಯ ನಿರ್ಮಾಪಕರಿಗೆ ನೋಟಿಸ್​ ನೀಡಿದ್ದಾರೆ. ಚಿತ್ರೀಕರಣ ಪ್ರಾರಂಭವಾಗುವುದಕ್ಕೂ ಮುನ್ನವೇ ನೋಟಿಸ್​ ನೀಡಲಾಗಿದ್ದು, ಈ ವೆಬ್​ ಸರಣಿಯು ಪ್ರೇಕ್ಷಕರ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿದೆ.

    ಇದನ್ನೂ ಓದಿ: ಆತ ಕೃತಜ್ಞತೆ ಇಲ್ಲದಿರುವ ವ್ಯಕ್ತಿ, ಮಾಡಿದ್ದನ್ನು ನೆನೆಸಿಕೊಂಡರೆ ಈಗಲೂ…; ಮೋಹನ್​ ಲಾಲ್​ ವಿರುದ್ಧ ಹಿರಿಯ ನಟಿ ಆರೋಪ

    ನೋಟಿಸ್​ನಲ್ಲಿ ಏನಿದೆ?

    ಸ್ಕಾಮ್ 2010: ದಿ ಸುಬ್ರತಾ ರಾಯ್ ಸಾಗಾ ಘೋಷಿಸುವ ಮೂಲಕ ಅಗ್ಗದ ಪ್ರಚಾರವನ್ನು ಪಡೆಯಲು ಸ್ಕ್ಯಾಮ್ ವೆಬ್ ಸರಣಿಯ ನಿರ್ಮಾಪಕರು ಯತ್ನಿಸುತ್ತಿರುವುದು ನಿಂದನೀಯ ಮತ್ತು ತೀವ್ರವಾಗಿ ಖಂಡನೀಯ. ಸಹರಾ ಪರಿವಾರದ ಮಾನಹಾನಿ ಮಾಡುವ ಪ್ರಯತ್ನದಲ್ಲಿ ನಿರತರಾಗಿರವ ಎಲ್ಲಾ ವ್ಯಕ್ತಿಗಳು ಮತ್ತು ಪಕ್ಷಗಳ ಇಂಥಹ ಕೃತ್ಯಗಳನ್ನು ಸಹರಾ ಇಂಡಿಯಾ ಪರಿವಾರ್ ಖಂಡಿಸುತ್ತದೆ ಮತ್ತು ಅವರ ಆಕ್ಷೇಪಾರ್ಹ ನಡವಳಿಕೆಯನ್ನು ವಿರೋಧಿಸುತ್ತದೆ. ಈ ನಿಟ್ಟಿನಲ್ಲಿ ನಿರ್ಮಾಪಕರು, ನಿರ್ದೇಶಕರು ಹಾಗೂ ಅಕ್ರಮ ಎಸಗಿರುವ ಎಲ್ಲರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

    ಸೆಬಿ ಮತ್ತು ಸಹಾರಾ ನಡುವಿನ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಇನ್ನೂ ಬಾಕಿ ಉಳಿದಿವೆ ಮತ್ತು ಈಗ ನಡೆಯುತ್ತಿರುವ ನ್ಯಾಯ ಪ್ರಕ್ರಿಯೆಗಳ ಮೇಲೆ ಪ್ರಭಾವ ಬೀರುವ ಯಾವುದೇ ಪ್ರಯತ್ನವು ‘ನ್ಯಾಯಾಂಗ ನಿಂದನೆ’ ಎಂದೆನಿಸಿಕೊಳ್ಳುತ್ತದೆ. ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿಯ ಹಕ್ಕಿನ ಅಡಿಯಲ್ಲಿ ತನ್ನನ್ನು ತಾನು ರಕ್ಷಿಸಿಕೊಳ್ಳಲು, ವ್ಯಕ್ತಿಯ ಅಭಿಮಾನ ಮತ್ತು ಖ್ಯಾತಿಯನ್ನು ಹಾಳುಮಾಡಲು ಯಾರಿಗೂ ಅವಕಾಶ ನೀಡಲಾಗುವುದಿಲ್ಲ’ ಎಂದು ಜಾರಿ ಮಾಡಲಾಗಿರುವ ನೋಟಿಸ್​ನಲ್ಲಿ ಸೂಚಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts