

ಚೆನ್ನೈ: ಬಹುಭಾಷಾ ನಟಿ ಅಮಲಾ ಪೌಲ್ ಬಗ್ಗೆ ಕನ್ನಡಿಗರಿಗೆ ಹೆಚ್ಚೇನು ಹೇಳಬೇಕಿಲ್ಲ. ಏಕೆಂದರೆ, ನಟ ಕಿಚ್ಚ ಸುದೀಪ್ ಅಭಿನಯದ ಸೂಪರ್ ಹಿಟ್ ಹೆಬ್ಬುಲಿ ಸಿನಿಮಾ ನೋಡಿದವರಿಗೆ ಅಮಲಾ ಪೌಲ್ ಪರಿಚಯ ಇದ್ದೇ ಇರುತ್ತದೆ. ಕೇರಳ ಮೂಲದ ಅಮಲಾ, ನೀಲತಾಮರನ್ ಹೆಸರಿನ ಮಲಯಾಳಂ ಸಿನಿಮಾ ಮೂಲಕ ಚಿತ್ರರಂಗ ಪದಾರ್ಪಣೆ ಮಾಡಿದರು. ಆದರೆ, ಕಾಲಿವುಡ್ನ “ಮೈನಾ” ಚಿತ್ರದ ಬಳಿಕ ಅಮಲಾ ಅದೃಷ್ಟವೇ ಬದಲಾಯಿತು. ವಿಜಯ್, ವಿಕ್ರಮ್, ಸೂರ್ಯ, ಆರ್ಯ, ಜಯಂ ರವಿ, ಧನುಷ್ ಸೇರಿದಂತೆ ಕಾಲಿವುಡ್ ಸೂಪರ್ಸ್ಟಾರ್ಗಳ ಜೊತೆ ನಟಿಸಿದ್ದಾರೆ.
ಸದ್ಯ ಸಿನಿಮಾಗಳಿಂದ ಅಂತರ ಕಾಯ್ದುಕೊಂಡಿರುವ ಅಮಲಾ, ಗೆಳೆಯ ಜಗತ್ ದೇಸಾಯಿ ಅವರನ್ನು ಮದುವೆಯಾಗಿ ಸಾಂಸಾರಿಕ ಜೀವನ ಸಾಗಿಸುತ್ತಿದ್ದಾರೆ. ಇದೀಗ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಒಂದನ್ನು ನೀಡಿದ್ದಾರೆ. ಅದೇನೆಂದರೆ, ಅಮಲಾ ತಾಯಿಯಾಗಿ ಬಡ್ತಿ ಪಡೆದಿದ್ದಾರೆ. ಹೌದು, ಸೌತ್ ಬ್ಯೂಟಿ ಅಮಲಾ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮಾಹಿತಿಯನ್ನು ತಮ್ಮ ಇನ್ಸ್ಟಾಗ್ರಾಂ ಪೇಜ್ ಮೂಲಕ ಅಮಲಾ ಖಚಿತಪಡಿಸಿದ್ದಾರೆ.
ಅಮಲಾ ಅವರಿಗೆ ಜೂನ್ 11 ರಂದೇ ಹೆರಿಗೆಯಾಗಿದೆ. ಆದರೆ, ತಡವಾಗಿ ವಿಶೇಷ ವಿಡಿಯೋ ಮೂಲಕ ಗಂಡು ಮಗು ಆಗಿರುವುದನ್ನು ಬಹಿರಂಗಪಡಿಸಿದ್ದಾರೆ. ಪತಿ ಜಗತ್ ದೇಸಾಯಿ ತಾಯಿ ಮತ್ತು ಮಗುವಿಗೆ ಅದ್ಧೂರಿ ಸ್ವಾಗತ ಕೋರಿರುವ ದೃಶ್ಯ ವಿಡಿಯೋದಲ್ಲಿದೆ. ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿ, ಇದು ಹುಡುಗ! ನಮ್ಮ ಪುಟ್ಟ ಪವಾಡವನ್ನು ಭೇಟಿ ಮಾಡಿ ಎಂದು ಬರೆದುಕೊಂಡಿದ್ದಾರೆ. ಇದೀಗ ವಿಡಿಯೋ ವೈರಲ್ ಆಗಿದೆ.
ಇದಿಷ್ಟೇ ಅಲ್ಲದೆ, ಅಮಲಾ ಪೌಲ್ ದಂಪತಿ ತಮ್ಮ ಮಗುವಿಗೆ ಹೆಸರನ್ನು ಸಹ ಇಟ್ಟಿದ್ದಾರೆ. ಆ ಹೆಸರನ್ನು ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಶೀರ್ಷಿಕೆಯಾಗಿ ಹಾಕಿದ್ದಾರೆ. ILAI (ಇಳೈ) ಎಂದು ಹೆಸರಿಟ್ಟಿದ್ದಾರೆ. ಈ ಹೆಸರು ಕೇಳಲು ಕೊಂಚ ಹೊಸತಾದರೂ ತುಂಬಾ ಚೆನ್ನಾಗಿದೆ ಎಂದು ಅಭಿಮಾನಿಗಳು ಕಾಮೆಂಟ್ ಮೂಲಕ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ತಾಯಿ ಮತ್ತು ಮಗುವಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. (ಏಜೆನ್ಸೀಸ್)