

ಚೆನ್ನೈ: ಒಂದು ಕಾಲದಲ್ಲಿ ಸಿನಿ ಇಂಡಸ್ಟ್ರಿಯ ಬಹುಬೇಡಿಕೆ ನಟಿಯಾಗಿದ್ದ ಸದಾ ಇದೀಗ ಸಿನಿ ರಂಗದಿಂದ ದೂರ ಉಳಿದಿದ್ದಾರೆ. ತೆಲುಗಿನ ಜಯಂ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಸದಾ, ಮೊದಲ ಚಿತ್ರದಲ್ಲಿ ಬ್ಲಾಕ್ಬಸ್ಟರ್ ಹಿಟ್ ಕೊಟ್ಟರು. ಅಲ್ಲಿಂದಾಚೆಗೆ ತೆಲುಗು ಮತ್ತು ತಮಿಳಿನ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದರು. ಅಲ್ಲದೆ, ಕನ್ನಡದಲ್ಲೂ ಮೊನಾಲಿಸಾ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಸದಾ ನಟನೆ ಮಾಡಿದ್ದು, ಕನ್ನಡಿಗರಿಗೂ ಪರಿಚಿತರಾಗಿದ್ದಾರೆ.
ಸದಾ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದರೂ ಕ್ರಮೇಣವಾಗಿ ಸಾಲು ಸಾಲು ಸೋಲುಗಳಿಂದ ಸಿನಿಮಾ ಅವಕಾಶಗಳು ಕೈತಪ್ಪಿ ತೆರೆಮರೆಗೆ ಸರಿದರು. ಆದರೆ, ಇತ್ತೀಚೆಗೆ ಕಿರುತೆರೆಗೆ ಲೋಕಕ್ಕೆ ಎಂಟ್ರಿ ನೀಡಿದ್ದಾರೆ. ಬಿಬಿ ಜೋಡಿ ಮತ್ತು ಡ್ಯಾನ್ಸ್ ವಿಥ್ ಯು ಹೆಸರಿನ ಟಿವಿ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದಾರೆ. ಸದಾ ಜೊತೆಗೆ ಹೀರೋಯಿನ್ ಆಗಿ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟವರೆಲ್ಲಾ ಈಗ ತಮ್ಮ ಪರ್ಸನಲ್ ಲೈಫ್ನಲ್ಲಿ ಸೆಟಲ್ ಆಗಿದ್ದಾರೆ. ಆದರೆ, ಸದಾ ಅವರಿಗೆ 39 ವರ್ಷ ವಯಸ್ಸಾಗಿದ್ದರೂ ಇನ್ನು ಮದುವೆ ಮಾಡಿ ಮಾಡಿಕೊಳ್ಳದೇ ಒಂಟಿ ಜೀವನ ಮುಂದುವರಿಸಿದ್ದಾರೆ.
ಇತ್ತೀಚೆಗಷ್ಟೇ ಸದಾ ಅವರು ಮದುವೆಯ ಕುರಿತು ಮಾಡಿರುವ ಕಾಮೆಂಟ್ಗಳು ವೈರಲ್ ಆಗುತ್ತಿವೆ. ನಾನು ಮದುವೆ ವಿರೋಧಿಯಲ್ಲ ಎಂದಿದ್ದಾರೆ. ಆದರೆ ನನಗೆ, ಅರೆಂಜ್ ಮ್ಯಾರೇಜ್ ಇಷ್ಟವಿಲ್ಲ ಎಂದಿದ್ದಾರೆ. ಯಾರೆಂದು ತಿಳಿಯದವನನ್ನು ಮದುವೆಯಾಗಿ ಅವನ ಜೊತೆಯಲ್ಲಿರುವುದು ನನಗೆ ಇಷ್ಟವಿಲ್ಲ. ನನಗೆ ಪ್ರೇಮ ವಿವಾಹ ಇಷ್ಟ ಎಂದಿದ್ದಾರೆ.
ನನ್ನ ತಾಯಿ ಮತ್ತು ತಂದೆ ಕೂಡ ಪ್ರೀತಿಸಿ ಮದುವೆಯಾದವರು. ಅದಕ್ಕೆ ನನಗೂ ಲವ್ ಮ್ಯಾರೇಜ್ ಇಷ್ಟ. ಆದರೆ ನಾನು ಇಲ್ಲಿಯವರೆಗೆ ಒಬ್ಬಂಟಿಯಾಗಿರಲು ಕಾರಣ ನನಗೆ ಒಳ್ಳೆಯ ವ್ಯಕ್ತಿ ಸಿಗದಿರುವುದು. ಈಗ ನಾನು ನನ್ನ ವೈಯಕ್ತಿಕ ಜೀವನದಲ್ಲಿ ಮತ್ತು ನನ್ನ ವೃತ್ತಿಪರ ಜೀವನದಲ್ಲಿ ತುಂಬಾ ಸಂತೋಷವಾಗಿದ್ದೇನೆ. ಆದರೆ, ಮದುವೆಯಾದರೆ ಇಷ್ಟು ಸಂತೋಷ ಸಿಗುತ್ತದೆ ಎಂಬ ಭರವಸೆ ಇಲ್ಲ ಎಂದಿದ್ದಾರೆ. (ಏಜೆನ್ಸೀಸ್)