More

  ಟೀಮ್​ ಇಂಡಿಯಾ ಕ್ಯಾಪ್ಟೆನ್ಸಿ ಮೇಲೆ ಕಣ್ಣಿಟ್ಟಿರೋ ಹಾರ್ದಿಕ್​ಗೆ ಶಾಕ್​! ಎಲ್ಲರ ಬಾಯಲ್ಲಿ ಕೇಳಿಬರ್ತಿರೋ ಹೆಸರು ಇದೊಂದೆ!

  ನವದೆಹಲಿ: ನಾಯಕ ರೋಹಿತ್ ಶರ್ಮ ಟೀಮ್​ ಇಂಡಿಯಾವನ್ನು ಅದ್ಭುತವಾಗಿ ಮುನ್ನಡೆಸುತ್ತಿದ್ದಾರೆ. ಕಳೆದ ವರ್ಷ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ತಂಡವನ್ನು ಫೈನಲ್‌ಗೆ ಕೊಂಡೊಯ್ದ ಹಿಟ್‌ಮ್ಯಾನ್, ಪ್ರಸ್ತುತ ಅಮೆರಿಕದಲ್ಲಿರುವ ನಡೆಯುತ್ತಿರುವ ಕಿರು ವಿಶ್ವಕಪ್​ನಲ್ಲಿಯೂ ತಂಡವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಟಿ20 ವಿಶ್ವಕಪ್​ನಲ್ಲಿ ಟೀಮ್​ ಇಂಡಿಯಾ ಸೂಪರ್-8ರ ಹಂತವನ್ನು ತಲುಪಿದೆ.

  ಸೂಪರ್​ 8ರಲ್ಲಿ ರೋಹಿತ್​ ಸೇನೆ ಅಫ್ಘಾನಿಸ್ತಾನ, ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶದಂತಹ ಬಲಿಷ್ಠ ತಂಡಗಳನ್ನು ಎದುರಿಸಲಿದ್ದು, ಇದಕ್ಕಾಗಿ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದೆ. ಈ ಮೂರು ತಂಡಗಳನ್ನು ಸೋಲಿಸಲು ರೋಹಿತ್ ಅಗತ್ಯ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಸೂಪರ್​ 8ರ ಪಂದ್ಯಗಳು ವೆಸ್ಟ್​ಇಂಡೀಸ್​ನಲ್ಲಿ ನಡೆಯಲಿದ್ದು, ಪಿಚ್​ ಗಮನದಲ್ಲಿಟ್ಟುಕೊಂಡು ಉತ್ತಮ ತಂಡದ ಸಂಯೋಜನೆಯೊಂದಿಗೆ ಮುಂದುವರಿಯುವ ನಿರೀಕ್ಷೆಯನ್ನು ರೋಹಿತ್​ ಇಟ್ಟುಕೊಂಡಿದ್ದಾರೆ. ಏಕದಿನ ವಿಶ್ವಕಪ್​ ಕಳೆದುಕೊಂಡ ಹಿಟ್‌ಮ್ಯಾನ್ ಹೇಗಾದರೂ ಮಾಡಿ ಕಿರು ವಿಶ್ವಕರ್​ ಅನ್ನು ತಮ್ಮದಾಗಿಸಿಕೊಳ್ಳಲು ನಿರ್ಧರಿಸಿದ್ದಾರೆ.

  ಟಿ20 ವಿಶ್ವಕಪ್ ಬಳಿಕ ರೋಹಿತ್, ಟಿ20 ಮಾದರಿ ಪಂದ್ಯಗಳಿಗೆ ವಿದಾಯ ಹೇಳಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅಲ್ಲದೆ, ಮುಂದಿನ ವರ್ಷ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಬಳಿಕ ಏಕದಿನ ಮಾದರಿಯಿಂದ ನಿವೃತ್ತಿ ಹೊಂದಿ ಕೇವಲ ಟೆಸ್ಟ್‌ಗೆ ಸೀಮಿತಗೊಳ್ಳುವ ಬಗ್ಗೆ ಹಿಟ್‌ಮ್ಯಾನ್ ಚಿಂತನೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಇದರ ನಡುವೆ ರೋಹಿತ್​ ಅವರ ಉತ್ತರಾಧಿಕಾರಿಯಾಗಿ ಯಾರು ಆಯ್ಕೆಯಾಗುತ್ತಾರೆ ಎಂಬುದು ಕುತೂಹಲ ಮೂಡಿದೆ.

  ನಾಯಕತ್ವ ಸ್ಥಾನಕ್ಕೆ ಸದ್ಯ ಉಪನಾಯಕನಾಗಿರುವ ಹಾರ್ದಿಕ್ ಪಾಂಡ್ಯ ಅವರನ್ನು ಕೂರಿಸಬೇಕೆಂಬ ಪ್ರಯತ್ನಗಳು ಈಗಾಗಲೇ ನಡೆಯುತ್ತಿವೆ. ನಾಯಕತ್ವದ ರೇಸ್‌ನಲ್ಲಿ ಯುವ ಆರಂಭಿಕ ಆಟಗಾರ ಶುಭಮನ್ ಗಿಲ್ ಮತ್ತು ವಿಕೆಟ್ ಕೀಪರ್ ರಿಷಬ್ ಪಂತ್ ಹೆಸರು ಸಹ ಕೇಳಿಬರುತ್ತಿದೆ. ಇದೇ ವೇಳೆ ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಕುತೂಹಲಕಾರಿ ಕಾಮೆಂಟ್ ಮಾಡಿದ್ದಾರೆ. ನಾಯಕತ್ವದಲ್ಲಿ ರೋಹಿತ್ ಉತ್ತರಾಧಿಕಾರಿಯಾಗಿ ಯಾರ್ಕರ್​ ಕಿಂಗ್​ ಜಸ್ಪ್ರೀತ್ ಬುಮ್ರಾ ಸರಿಯಾದ ಆಯ್ಕೆ ಎಂದಿದ್ದಾರೆ. ಆತನನ್ನು ಮೀರಿದ ಆಯ್ಕೆ ಮತ್ತೊಂದಿಲ್ಲ ಎಂದಿದ್ದಾರೆ.

  See also  ಹೀನಾಯ ಸೋಲಿನೊಂದಿಗೆ ವಿಶ್ವಕಪ್​ನಿಂದ ಹೊರಬಿದ್ದ ಪಾಕ್​: ಗೆಲುವಿನೊಂದಿಗೆ ಆಂಗ್ಲರ ಪ್ರವಾಸ ಅಂತ್ಯ

  ಬುಮ್ರಾ ಅವರು ಮೂರೂ ಮಾದರಿಯಲ್ಲಿ ತಂಡವನ್ನು ಸಮರ್ಥವಾಗಿ ಮುನ್ನಡೆಸುವ ಸಾಮರ್ಥ್ಯ ಹೊಂದಿದ್ದಾರೆ. ಬುಮ್ರಾ ಅತ್ಯುತ್ತಮ ನಾಯಕತ್ವ ಕೌಶಲ್ಯವನ್ನು ಹೊಂದಿದ್ದಾರೆ. ಯಾವುದೇ ಒತ್ತಡದಲ್ಲಿಯೂ ತನ್ನ ಸ್ಥೈರ್ಯವನ್ನು ಕಳೆದುಕೊಳ್ಳದೆ ಕೂಲ್​ ಆಗಿರಬಲ್ಲರು. ನಿಮಗೆ ಟಿ20, ಏಕದಿನ ಮತ್ತು ಟೆಸ್ಟ್‌ಗೆ ವಿಭಿನ್ನ ನಾಯಕರು ಬೇಕಾದರೆ, ನೀವು ಅದನ್ನು ಸಹ ಆಯ್ಕೆ ಮಾಡಬಹುದು. ಆದರೆ, ರೋಹಿತ್‌ರಂತೆ ಒಬ್ಬ ವ್ಯಕ್ತಿ ಎಲ್ಲ ಫಾರ್ಮ್ಯಾಟ್‌ಗಳ ನಾಯಕನಾಗಿರಲು ಬಯಸಿದರೆ ಬುಮ್ರಾಗೆ ಆ ಜವಾಬ್ದಾರಿಯನ್ನು ನೀಡಬೇಕು. ಏಕೆಂದರೆ ಅವರು ಎಲ್ಲಾ ಮಾದರಿಗಳಲ್ಲಿ ತಂಡದಲ್ಲಿ ಸಾಮಾನ್ಯ ಆಟಗಾರರಾಗಿದ್ದಾರೆ. ಅವರು ತಂಡದಲ್ಲಿ ಬಹಳ ಮುಖ್ಯ. ನಾಯಕನಾಗಿ ತಂಡವನ್ನು ಮುನ್ನಡೆಸುವ ಸಾಮರ್ಥ್ಯ ಹಾಗೂ ಅನುಭವ ಹೊಂದಿದ್ದಾರೆ ಎಂದು ಮಂಜ್ರೇಕರ್ ಹೇಳಿದ್ದಾರೆ.

  ಟೀಮ್​ ಇಂಡಿಯಾದ ಮಾಜಿ ಆಟಗಾರ ಲಕ್ಷ್ಮೀಪತಿ ಬಾಲಾಜಿ ಕೂಡ ಇದನ್ನೇ ಹೇಳಿದ್ದಾರೆ. ಜಸ್ಪ್ರೀತ್ ಬುಮ್ರಾ ಅದ್ಭುತವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಏಕಾಂಗಿಯಾಗಿ ತಂಡಕ್ಕೆ ವಿಶ್ವಕಪ್ ನೀಡುವ ಸಾಮರ್ಥ್ಯ ಬುಮ್ರಾಗೆ ಇದೆ. ಅವರನ್ನು ವಾಸಿಂ ಅಕ್ರಮ್ ನಂತರ ಏಷ್ಯಾದ ಅತ್ಯುತ್ತಮ ವೇಗದ ಬೌಲರ್ ಎಂದು ಹೇಳಬಹುದು. ಮುಂದಿನ ದಶಕದಲ್ಲಿ ಬುಮ್ರಾ ಅಬ್ಬರಿಸಲಿದ್ದಾರೆ. ಯಾವುದೇ ಫಾರ್ಮ್ಯಾಟ್ ಆಗಿರಲಿ, ಬುಮ್ರಾ ಅವರು ಚೆಂಡು ಪಡೆದಾಗಲೆಲ್ಲ ಸಿಡಿಯುತ್ತಾರೆ. ಹೊಸ ಚೆಂಡು, ಹಳೆ ಚೆಂಡು ಎನ್ನದೇ ಪ್ರತಿ ಹಂತದಲ್ಲೂ ವಿಕೆಟ್ ಪಡೆದು ತಮ್ಮ ಸಾಮರ್ಥ್ಯ ತೋರುತ್ತಿದ್ದಾರೆ. ಮಧ್ಯಮ ಓವರ್‌ಗಳಲ್ಲಿಯೂ ವಿಕೆಟ್‌ಗಳು ಬೀಳುತ್ತಿವೆ. ಬುಮ್ರಾಗಿಂತ ಬಹುಮುಖ ಮತ್ತು ಅಪಾಯಕಾರಿ ಬೌಲರ್ ಎಲ್ಲಿಯೂ ಕಾಣಸಿಗುವುದಿಲ್ಲ. ಬೌಲಿಂಗ್ ಘಟಕದ ಜೊತೆಗೆ ಇಡೀ ತಂಡವನ್ನು ನಾಯಕನಾಗಿ ಮುನ್ನಡೆಸುವ ಧೈರ್ಯವನ್ನು ಬುಮ್ರಾ ಹೊಂದಿದ್ದಾರೆ. ಅವರ ಶಾಂತತೆ, ಪ್ರಬುದ್ಧತೆಯ ಮಟ್ಟ ಮತ್ತು ಆಟದ ಅರಿವು ನೋಡಿದರೆ, ಶೀಘ್ರದಲ್ಲೇ ಬುಮ್ರಾ ಅವರನ್ನು ಭಾರತದ ನಾಯಕನಾಗಿ ನೋಡುವ ಸಾಧ್ಯತೆಗಳಿವೆ ಎಂದು ಬಾಲಾಜಿ ಹೇಳಿದ್ದಾರೆ.

  See also  7 ತಾಸು ನಿರಂತರ ಕರೆಂಟ್ ಕೊಡಿ

  ದೇವರ ಕೊಡುಗೆ ಎಂದ ರವಿಶಾಸ್ತ್ರಿ
  ಟೀಮ್ ಇಂಡಿಯಾದಲ್ಲಿ ಬುಮ್ರಾ ಉಪಸ್ಥಿತಿಯು ಆಶೀರ್ವಾದವಾಗಿದೆ. ಬೂಮ್ರಾ ದೇವರ ಕೊಡುಗೆಯಾಗಿದ್ದಾರೆ. ಈ ಹಿಂದೆ ಭಾರತ ತಂಡದಲ್ಲಿ ಇಂತಹ ಬೌಲರ್ ಇರಲೇ ಇಲ್ಲ. ಜಸ್ಪ್ರೀತ್ ಅವರಂತಹ ವೇಗದ ಬೌಲರ್ ಮೂರು ಮಾದರಿಗಳಲ್ಲಿ ಪ್ರಾಬಲ್ಯ ಸಾಧಿಸಿರುವುದು ತಂಡದ ದೊಡ್ಡ ಶಕ್ತಿಯಾಗಿದೆ. ಸೀಮರ್ ಒಬ್ಬ ವೈಟ್ ಬಾಲ್ ಕ್ರಿಕೆಟ್ ಅನ್ನು ಆಳುತ್ತಾನೆ ಎಂದು ನಾನು ಊಹಿಸಿರಲಿಲ್ಲ. ಆದರೆ ಬುಮ್ರಾ ಅದನ್ನು ಸಾಧ್ಯವಾಗಿಸಿದರು. ಟೆಸ್ಟ್ ಹಾಗೂ ಟಿ20 ಹಾಗೂ ಏಕದಿನ ಪಂದ್ಯಗಳಲ್ಲಿ ಅವರ ಹವಾ ನಡೆಯುತ್ತಿದೆ. ಬುಮ್ರಾ ಮೇಲೆ ಪ್ರಾಬಲ್ಯ ಸಾಧಿಸುವ ಯಾವುದೇ ಬ್ಯಾಟ್ಸ್‌ಮನ್ ಇಲ್ಲ. ತನ್ನ ವಿರೋಧಿಗಳನ್ನು ಹೇಗೆ ನಾಶಮಾಡಬೇಕೆಂದು ಅವನಿಗೆ ತಿಳಿದಿದೆ. ಪ್ರಸ್ತುತ ಕ್ರಿಕೆಟ್‌ನಲ್ಲಿ ಬುಮ್ರಾ ಅತ್ಯುತ್ತಮ ಆಟಗಾರ ಎಂದು ರವಿಶಾಸ್ತ್ರಿ ಹೊಗಳಿದ್ದಾರೆ.

  ಬುಮ್ರಾ ಶ್ರೇಷ್ಠ ಎಂದು ಭಜ್ಜಿ
  ಟೀಮ್​ ಇಂಡಿಯಾದ ಮಾಜಿ ಆಟಗಾರ ಹರ್ಭಜನ್ ಸಿಂಗ್ ಕೂಡ ಬುಮ್ರಾರನ್ನು ಹೊಗಳಿದ್ದಾರೆ. ಆಧುನಿಕ ಕ್ರಿಕೆಟ್‌ನಲ್ಲಿ ಬುಮ್ರಾ ಶ್ರೇಷ್ಠ ಎಂದು ಭಜ್ಜಿ ಹೇಳಿದ್ದಾರೆ. ಆಸ್ಟ್ರೇಲಿಯಾದ ದಂತಕಥೆ ಗ್ಲೆನ್ ಮೆಕ್‌ಗ್ರಾತ್ ಮತ್ತು ಶ್ರೀಲಂಕಾದ ದಂತಕಥೆ ಲಸಿತ್ ಮಾಲಿಂಗ ಅವರಂತೆ ಬುಮ್ರಾ ಪ್ರಾಬಲ್ಯವನ್ನು ತೋರಿಸುತ್ತಿದ್ದಾರೆ ಮತ್ತು ಅವರ ಪ್ರಭಾವ ಸಾಮಾನ್ಯವಲ್ಲ ಎಂದಿದ್ದಾರೆ.

  ಹೀಗೆ ಅನೇಕ ಮಾಜಿ ಆಟಗಾರರು ಬುಮ್ರಾ ಮೇಲೆ ಒಲವು ತೋರುತ್ತಿದ್ದು, ಟೀಮ್​ ಇಂಡಿಯಾ ನಾಯಕತ್ವಕ್ಕೆ ಬುಮ್ರಾಗಿಂತ ಉತ್ತಮ ಆಯ್ಕೆ ಮತ್ತೊಬ್ಬರಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಹೀಗಾಗಿ ಬುಮ್ರಾ ಟೀಮ್​ ಇಂಡಿಯಾ ನಾಯಕರಾದರೂ ಅಚ್ಚರಿಪಡಬೇಕಿಲ್ಲ. (ಏಜೆನ್ಸೀಸ್​)

  ಗಂಡು ಮಗುವಿಗೆ ಜನ್ಮ ನೀಡಿದ ನಟಿ ಅಮಲಾ ಪೌಲ್​: ಮಗು ಹೆಸರು ಕೇಳಿ ಅಚ್ಚರಿ ವ್ಯಕ್ತಪಡಿಸಿದ ಫ್ಯಾನ್ಸ್!​

  ದರ್ಶನ್​ಗೆ ಮತ್ತೊಂದು ಸಂಕಷ್ಟ: ವಿಜಯಲಕ್ಷ್ಮೀ ಎ1, ದಚ್ಚು ಎ3 ಆರೋಪಿ! ಗಂಡನ ಜತೆ ಪತ್ನಿಗೂ ತೊಂದರೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts