More

  ಹಾಸ್ಟೆಲ್ ಪ್ರವೇಶ ನನೆಗುದಿ ವಿದ್ಯಾರ್ಥಿಗಳಲ್ಲಿ ಬೇಗುದಿ

  | ಮೃತ್ಯುಂಜಯ ಕಪಗಲ್ ಬೆಂಗಳೂರು

  ರಾಜ್ಯದಲ್ಲಿ ಪ್ರಾಥಮಿಕ, ಪ್ರೌಢಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜು ಶುರುವಾಗಿ 15 ದಿನ ಕಳೆದರೂ ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ ಹಾಸ್ಟೆಲ್​ಗಳ ಪ್ರವೇಶ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ. ಪರಿಶಿಷ್ಟ ಜಾತಿ, ಪಂಗಡಗಳು, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ಮೆಟ್ರಿಕ್ ಪೂರ್ವ, ನಂತರದ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಗ್ರಹಣ ಹಿಡಿದು ಈ ಸಮುದಾಯಗಳ ಸಾವಿರಾರು ವಿದ್ಯಾರ್ಥಿಗಳನ್ನು ಅತಂತ್ರ ಸ್ಥಿತಿಗೆ ದೂಡಿದೆ. ಪ್ರವೇಶ ಪೂರ್ವ ಪ್ರಕ್ರಿಯೆಯಲ್ಲಿ ಶಾಸಕರ ವಿವೇಚನಾಧಿಕಾರ ಬಳಕೆ ಗೊಂದಲ ಬಗೆಹರಿಯದಿರುವುದು ವಿಳಂಬದ ಮೂಲವೆಂಬುದನ್ನು ನಾಲ್ಕು ಇಲಾಖೆಗಳ ಮೂಲಗಳು ದೃಢಪಡಿಸಿವೆ.

  ಹಾಸ್ಟೆಲ್​ಗಳ ಪ್ರವೇಶ ಆಯ್ಕೆಗೆ ಶಾಸಕರ ಅಧ್ಯಕ್ಷತೆಯಲ್ಲಿ ಸಮಿತಿಗಳಿದ್ದವು. ಆದರೆ ಪ್ರವೇಶದ ಬಗ್ಗೆ ದೂರುಗಳ ಹಿನ್ನೆಲೆಯಲ್ಲಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗಿತ್ತು. ಬಿಜೆಪಿ ಆಡಳಿತಾವಧಿಯಲ್ಲಿ ಪಾರದರ್ಶಕ, ನಿಷ್ಪಕ್ಷಪಾತ ಆಯ್ಕೆ ಹಾಗೂ ಪ್ರತಿಭಾವಂತ ಬಡವರಿಗೆ ಅವಕಾಶ ಒದಗಿಸುವ ನಿರ್ಧಾರ ತಳೆದು, ಪೂರ್ಣ ಮೆರಿಟ್ ಆಧಾರದಲ್ಲಿ ಆಯ್ಕೆಗೆ ಆದೇಶಿಸಲಾಗಿತ್ತು. ಬಿಜೆಪಿ ಸರ್ಕಾರ ತೆಗೆದುಕೊಂಡ ಈ ತೀರ್ವನಕ್ಕೆ ಪಕ್ಷಾತೀತವಾಗಿ ಎಲ್ಲ ಶಾಸಕರ ವಿರೋಧವಿತ್ತು ಎನ್ನುವುದು ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಹೊರಬಿತ್ತು. ವಿದ್ಯಾರ್ಥಿಗಳ ನಿಲಯಗಳ ಪ್ರವೇಶ ಸಾಮರ್ಥ್ಯದಲ್ಲಿ ತಲಾ ಶೇ.50 ಮೆರಿಟ್ ಸ್ಥಳೀಯರಿಗೆ ಮೀಸಲಿಡಲು ತೀರ್ವನಿಸಲಾಗಿದೆ. ವಿಧಾನ ಮಂಡಲದ ಕಳೆದ ಅಧಿವೇಶನದಲ್ಲಿ ಬದಲಾದ ಈ ನಿರ್ಧಾರಕ್ಕೆ ಒಪ್ಪಿಗೆ ಸಿಕ್ಕಿದೆ. ಆದರೂ ಅಧಿಕೃತ ಆದೇಶ ಹೊರಬಿದ್ದಿಲ್ಲ.

  ‘ಅಹಿಂದ’ ಬಿಂಬಿಸುವವರ ಕಾರ್ಯವೈಖರಿ: ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತರ ಬಗ್ಗೆ ಹೆಚ್ಚು ಕಾಳಜಿ ಬಿಂಬಿಸುವ ಕಾಂಗ್ರೆಸ್ ಸರ್ಕಾರದ ಕಾರ್ಯವೈಖರಿ ಎಂದು ಶಿಕ್ಷಣ ವಲಯ ನಿಡುಸು ಯ್ಯುತ್ತಿದೆ. ವಿದ್ಯಾರ್ಜನೆಗೆ ಹಾಸ್ಟೆಲ್​ಗಳನ್ನೇ ನಂಬಿಕೊಂಡ ವಿದ್ಯಾರ್ಥಿಗಳು ಶಾಲೆಯತ್ತ ನೋಡುತ್ತಿದ್ದಾರೆ.

  See also  ಮಾನ್ಸೂನ್​ ರೂಪುಗೊಳ್ಳಲು ಆಶಾದಾಯಕ ವಾತಾವರಣ: ಶೂನ್ಯದತ್ತ ಎಲ್​-ನಿನೋ

  ಗ್ರಾಮೀಣ ಪ್ರದೇಶದಲ್ಲಿ ಪ್ರಾಥಮಿಕ, ಪ್ರೌಢ, ಪಿಯು ಹಂತದಲ್ಲಿ ಡ್ರಾಪ್​ಔಟ್ ಸಾಮಾನ್ಯ. ಈ ನಡುವೆ ಹಾಸ್ಟೆಲ್​ಗಳ ಪ್ರವೇಶ ಕಡೆಗಣಿಸಿದರೆ ಮತ್ತಷ್ಟು ಮಕ್ಕಳು ಶಿಕ್ಷಣದಿಂದ ವಂಚಿತವಾಗಿ ಸರ್ಕಾರದ ಉದ್ದೇಶ ವಿಫಲವಾಗುತ್ತದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸುತ್ತಾರೆ. ಶೈಕ್ಷಣಿಕ ವರ್ಷಾರಂಭದಲ್ಲಿ ಶಿಕ್ಷಣ, ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳು ಜಂಟಿ ಸಭೆ ನಡೆಸಿ, ತರಗತಿ ಆರಂಭಕ್ಕೆ ಮುನ್ನ ಹಾಸ್ಟೆಲ್ ಪ್ರವೇಶ ಪ್ರಕ್ರಿಯೆ ಮುಗಿಸಿದರೆ ಈ ಸಮಸ್ಯೆ ಇರುವುದಿಲ್ಲ ಎಂದು ಸಲಹೆ ನೀಡಿದ್ದಾರೆ.

  ತಂತ್ರಾಂಶದ ಸಮಸ್ಯೆ: ಆನ್​ಲೈನ್ ಪ್ರವೇಶ ಪ್ರಕ್ರಿಯೆಗೆ ತಂತ್ರಾಂಶದ ಸಮಸ್ಯೆಯಿದೆ. ಸರ್ವೀಸ್ ಪ್ರೊವೈಡರ್​ಗಳಿಂದ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಚಾಲ್ತಿಯಲ್ಲಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೂಲಗಳು ಹೇಳುತ್ತವೆ. ವಿದ್ಯಾರ್ಥಿಗಳಿಂದ ನೇರವಾಗಿ ಅರ್ಜಿ ಸ್ವೀಕರಿಸಲು (ಆಫ್​ಲೈನ್) ಜಿಲ್ಲಾಮಟ್ಟದ ಅಧಿಕಾರಿಗಳಿಗೆ ನಿರ್ದೇಶನ ರವಾನೆಯಾಗಿದೆ ಎನ್ನಲಾಗುತ್ತಿದೆ. ಜಿಲ್ಲಾಮಟ್ಟದಲ್ಲಿ ಆ ಸುಳಿವು ಸಿಗುತ್ತಿಲ್ಲವೆಂದು ನೊಂದ ಪಾಲಕರು ದೂರುತ್ತಾರೆ.

  ಮೆಟ್ರಿಕ್ ಪೂರ್ವ ಹಾಸ್ಟೆಲ್​ಗಳು ಎಷ್ಟಿವೆ ?: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಬಾಲಕರು 1010, ಬಾಲಕಿಯರು 291, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣ ಇಲಾಖೆ ಒಟ್ಟು 1,898, ಅಲ್ಪಸಂಖ್ಯಾತರ ಇಲಾಖೆ ಬಾಲಕರು 160 ಹಾಗೂ ಬಾಲಕಿಯರು 106. ಪರಿಶಿಷ್ಟ ಜಾತಿ, ಪಂಗಡಗಳ ಕಲ್ಯಾಣ ಇಲಾಖೆ ಹಾಸ್ಟೆಲ್​ಗಳಿಗೆ ಅರ್ಜಿ ಸಲ್ಲಿಸಿದ ಎಲ್ಲರಿಗೂ ಅವಕಾಶವಿದೆ. ಮೆಟ್ರಿಕ್ ಪೂರ್ವ ಹಾಸ್ಟೆಲ್​ಗಳಿಗೆ ಬೇಡಿಕೆಗೆ ಬಿಜೆಪಿ ಸರ್ಕಾರ ಸ್ಪಂದಿಸಿ, ಹೊಸ ಹಾಸ್ಟೆಲ್​ಗಳನ್ನು ಪ್ರಾರಂಭಿಸುವ ತನಕ ಹಾಲಿ ಹಾಸ್ಟೆಲ್​ಗಳ ಪ್ರವೇಶ ಸಾಮರ್ಥ್ಯವನ್ನೇ ಹೆಚ್ಚಿಸಿತ್ತು. ಇದರಿಂದಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಸ್ಟೆಲ್​ಗಳಲ್ಲಿ 100 ರಿಂದ 150, ಕೆಲವೆಡೆ 200ರವರೆಗೆ ಅವಕಾಶ ಕಲ್ಪಿಸಿದ್ದು, ಪ್ರತಿ ಹಾಸ್ಟೆಲ್​ಗೆ ಸರಾಸರಿ 125 ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಾರೆ.

  See also  ಮಲೆನಾಡಿನಲ್ಲಿ ಹೆಚ್ಚಾಯ್ತು ಕಾಡಾನೆಗಳ ಹಾವಳಿ: ಮನೆಗೇ ಬಂದು ಕಿಟಿಕಿ ಗಾಜು ಒಡೆದು ದಾಂಧಲೆ

  ಹೇಗಿರುತ್ತಿತ್ತು ಪ್ರಕ್ರಿಯೆ: ಮೆಟ್ರಿಕ್ ಪೂರ್ವ ಬಾಲಕ/ ಬಾಲಕಿ ಯರ ಹಾಸ್ಟೆಲ್​ಗಳ ಪ್ರವೇಶಕ್ಕೆ ಮೇ 25 ರಿಂದ ಅರ್ಜಿ ಆಹ್ವಾನಿಸಿ, ಜೂನ್ 10ಕ್ಕೆ ಕೊನೆಗೊಳಿಸಿದ ದಿನವೇ ಆಯ್ಕೆ ಪಟ್ಟಿ ಪ್ರಕಟಿಸಲಾಗುತ್ತಿತ್ತು. ಆಯಾ ಶಾಸಕರು ಆಯ್ಕೆ ಪಟ್ಟಿಗೆ ರುಜು ಹಾಕಿದ ಬಳಿಕ 6 ರಿಂದ 10ನೇ ತರಗತಿಗೆ ಜೂ.15ರಿಂದ ಜಿಲ್ಲಾವಾರು ಪ್ರವೇಶ ಪ್ರಕ್ರಿಯೆ ಶುರುವಾಗಿ ತಿಂಗಳಾಂತ್ಯದೊಳಗೆ ಮುಕ್ತಾಯವಾಗುತ್ತಿತ್ತು.


  ಶೈಕ್ಷಣಿಕ ವರ್ಷ ಬಂದಾಗ ನಾಲ್ಕು ಇಲಾಖೆಗಳು ಸಮನ್ವಯ ಸಾಧಿಸಿದರೆ ಸಮಸ್ಯೆಯಾಗದು. ವಸತಿ ಶಾಲೆಗಳು ಕರಾರುವಕ್ಕಾಗಿ ಶುರುವಾಗುತ್ತವೆ, ಹಾಸ್ಟೆಲ್​ಗಳೇಕಿಲ್ಲ ?. ಇಲಾಖೆ ಅಧಿಕಾರಿಗಳ ತಾತ್ಸಾರದಿಂದ ಮಕ್ಕಳ ಶೈಕ್ಷಣಿಕ ಭವಿಷ್ಯವೇ ಮಸುಕಾಗಲಿದೆ.

  | ವಿ.ಪಿ. ನಿರಂಜನಾರಾಧ್ಯ, ಶಿಕ್ಷಣ ತಜ್ಞ

   

  ಬಿಜೆಪಿ ಆಡಳಿತಾವಧಿಯಲ್ಲಿ ಉಂಟಾಗಿದ್ದ ಗೊಂದಲ ಬಗೆಹರಿಸಿದ್ದೇವೆ. ತಲಾ ಶೇ.50 ಮೆರಿಟ್ ಮತ್ತು ಸ್ಥಳೀಯ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸುವ ಆದೇಶ ಶೀಘ್ರವೇ ಜಾರಿಗೆ ಬರಲಿದ್ದು, ತಕ್ಷಣವೇ ಪ್ರವೇಶ ಪೂರ್ವ ಪ್ರಕ್ರಿಯೆ ಪ್ರಾರಂಭವಾಗಲಿದೆ.

  | ಶಿವರಾಜ ತಂಗಡಗಿ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ


  ಸರ್ಕಾರ, ಸಚಿವರು, ಅಧಿಕಾರಿ ನಿರ್ಲಕ್ಷ್ಯದಿಂದ ಹಾಸ್ಟೆಲ್​ಗಳ ಪ್ರವೇಶ ಪ್ರಕ್ರಿಯೆ ಶುರುವಾಗಿಲ್ಲ. ಎಸ್​ಸಿ, ಎಸ್​ಟಿ, ಬಿಸಿಎಂ ಸಮುದಾಯದ ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆ ಮಾರಕ. ಸರ್ಕಾರ ಕ್ರಮವಹಿಸಿ 15 ದಿನಗಳಲ್ಲಿ ಪ್ರಕ್ರಿಯೆ ಮುಗಿಸಲು ಆದೇಶಿಸಬೇಕು.

  | ಅಮರೇಶ ಕಡಗದ್, ರಾಜ್ಯಾಧ್ಯಕ್ಷ, ಎಸ್​ಎಫ್​ಐ

   

  ರಾಷ್ಟ್ರ ರಾಜಧಾನಿಯಲ್ಲೇ ಮರ್ಯಾದೆಗೇಡು ಹತ್ಯೆ; ಸ್ವಂತ ಮಗಳನ್ನೇ ನಿರ್ದಯವಾಗಿ ಕೊಂದ ತಂದೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts