More

    ನಕಲಿ ಕ್ಲಿನಿಕ್‌ಗೆ ಅಸಲಿ ಸೀಲ್!

    ಆಸ್ಪತ್ರೆ ಸೀಜ್ ಮಾಡಿದ ಅಧಿಕಾರಿಗಳು ಮಕ್ಕಳ ಮಾರಾಟ ಪ್ರಕರಣದಲ್ಲೂ ಲಾಡಖಾನ್ ಆರೋಪಿ

    ಚನ್ನಮ್ಮನ ಕಿತ್ತೂರು : ಪಟ್ಟಣದಲ್ಲಿ ಅಮಾಯಕರ ಪ್ರಾಣದ ಜತೆಗೆ ಚೆಲ್ಲಾಟವಾಡುತ್ತಿದ್ದ ನಕಲಿ ವೈದ್ಯ ಅಬ್ದುಲ್‌ಗಾರ್ ಲಾಡಖಾನ್‌ಗೆ ಸೇರಿದ ರಿಯಾಜ್ ಕ್ಲಿನಿಕ್‌ಗೆ ಸೋಮವಾರ ಅಧಿಕಾರಿಗಳು ಬೀಗ ಹಾಕಿದ್ದಾರೆ.

    ಬೆಳಗಾವಿಯಲ್ಲಿ ಈಚೆಗೆ ಬೆಳಕಿಗೆ ಬಂದ ಮಗು ಮಾರಾಟ ಪ್ರಕರಣದಲ್ಲಿ ಆರೋಪಿಯಾಗಿರುವ ಅಬ್ದುಲ್‌ಗಾರ್ ಲಾಡಖಾನ್ ಕುರಿತು ಮೇಲಧಿಕಾರಿಗಳು ನೀಡಿದ ಸೂಚನೆ ಮೇರೆಗೆ ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಹಾಗೂ ತಾಲೂಕುಮಟ್ಟದ ಅಧಿಕಾರಿಗಳು ಹಾಗೂ ವೈದ್ಯಾಧಿಕಾರಿಗಳು ಕಿತ್ತೂರು ಪಟ್ಟಣದ ಸೋಮವಾರ ಪೇಟೆಯಲ್ಲಿರುವ ಕ್ಲಿನಿಕ್ ಪರಿಶೀಲನೆ ನಡೆಸಿ, ಸೀಜ್ ಮಾಡಿದ್ದಾರೆ.

    ನಕಲಿ ವೈದ್ಯ ಲಾಡಖಾನ್‌ನ ಪತ್ನಿ ಬಿಎಚ್‌ಎಂಎಸ್ ಪದವೀಧರೆ. ಅದನ್ನೇ ಬಂಡವಾಳ ಮಾಡಿಕೊಂಡಿರುವ ಅಬ್ದುಲ್‌ಗಾರ್ ತಾನೇ ವೈದ್ಯನೆಂದು ಬಿಂಬಿಸಿ ಅಮಾಯಕರನ್ನು ನಂಬಿಸಿ ಚಿಕಿತ್ಸೆ ನೀಡುತ್ತಿದ್ದ. ಅಲ್ಲದೆ, ಆಸ್ಪತ್ರೆಗೆ ಆಗಮಿಸುತ್ತಿದ್ದ ಅಮಾಯಕರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾದಿಯಾಗಿ ಜಿಲ್ಲಾ ಮತ್ತು ತಾಲೂಕುಮಟ್ಟದ ಎಲ್ಲ ಅಧಿಕಾರಿಗಳು ತನಗೆ ಪರಿಚಯ ಎಂದು ನಂಬಿಸುತ್ತಿದ್ದ ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ಅನಧಿಕೃತವಾಗಿ ಕ್ಲಿನಿಕ್ ನಡೆಸುತ್ತಿದ್ದ ಕುರಿತು ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಈ ಹಿಂದೆಯೂ ತಾಲೂಕು ವೈದ್ಯಾಧಿಕಾರಿಗಳು ಪರಿಶೀಲಿಸಿದ್ದರು. ಪರಿಶೀಲನೆ ಸಂದರ್ಭದಲ್ಲಿ ಕ್ಲಿನಿಕ್ ಅನಧಿಕೃತವಾಗಿದೆ ಎಂಬುದು ತಿಳಿದುಬಂದರೂ ಯಾವುದೇ ಕ್ರಮ ಜರುಗಿಸದೆ ಕೇವಲ ನೋಟಿಸ್ ಕೈತೊಳೆದುಕೊಂಡಿದ್ದರು.

    ಈ ಕುರಿತು ಸ್ಪಷ್ಟನೆ ನೀಡಿದ ತಾಲೂಕು ವೈದ್ಯಾಧಿಕಾರಿ ಎಸ್.ಎಸ್.ಸಿದ್ದಣ್ಣವರ, ಪರಿಶೀಲನೆ ವೇಳೆ ಕ್ಲಿನಿಕ್ ಅನಧಿಕೃತವೆಂದು ತಿಳಿದು ಬಂದಿತ್ತು. ಪರವಾನಗಿ ಇಲ್ಲದೆ ಕ್ಲಿನಿಕ್ ನಡೆಸಲು ಅವಕಾಶವಿಲ್ಲ. ಹಾಗಾಗಿ, ಕ್ಲಿನಿಕ್ ಮುಚ್ಚುವಂತೆಯೂ ಲಾಡಖಾನ್‌ಗೆ ತಿಳಿಸಲಾಗಿತ್ತು ಎಂದು ಸಮಜಾಯಿಷಿ ನೀಡಿದರು.

    ಸ್ಥಳೀಯರ ಆಕ್ರೋಶ: ಅಕ್ರಮವಾಗಿ ಕ್ಲಿನಿಕ್ ನಡೆಸುತ್ತಿರುವ ಬಗ್ಗೆ ಅಧಿಕಾರಿಗಳು ಜಾಣ ಕುರುಡು ಪ್ರದರ್ಶನ ಮಾಡಿದ್ದು ತಪ್ಪು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲವು ವರ್ಷಗಳಿಂದ ಆರೋಪಿಯು ಭ್ರೂಣ ಹತ್ಯೆ ನಡೆಸುತ್ತಿರುವ ಬಗ್ಗೆ ಎಲ್ಲರಿಗೂ ಗೊತ್ತಿದ್ದರೂ ಅಧಿಕಾರಿಗಳು ಸುಮ್ಮನೆ ಕುಳಿತದ್ದು ಯಾಕೆ ಎಂದು ಪಶ್ನಿಸಿದರು. ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿರುವ ಎಲ್ಲ ಕ್ಲಿನಿಕ್ ಪರಿಶೀಲನೆ ನಡೆಸಬೇಕೆಂದು ಅಧಿಕಾರಿಗಳನ್ನು ಒತ್ತಾಯಿಸಿದರು.

    See also  ಬಾಯಿ ಕೆಟ್ಟು ರುಚಿ ಇಲ್ಲದಂತಾದಾಗ ಈ ರೆಸಿಪಿ ಮಾಡಿ ನೋಡಿ! ಒಂದು ತುತ್ತು ಹೆಚ್ಚಿಗೆ ಊಟ ಮಾಡ್ತೀರಾ

    ಚನ್ನಮ್ಮನ ಕಿತ್ತೂರಿಗೆ ಇಂದು ಅಧಿಕಾರಿಗಳ ತಂಡ ಭೇಟಿ?
    ನಕಲಿ ಕ್ಲಿನಿಕ್ ನಡೆಸುತ್ತಿದ್ದ ಲಾಡಖಾನ್ ಜೂ.9ರಂದು ಬೆಳಗಾವಿಯಲ್ಲಿ ಬೆಳಕಿಗೆ ಬಂದ ಮಗು ಮಾರಾಟಕ್ಕೆ ಯತ್ನ ಪ್ರಕರಣದಲ್ಲಿಯೂ ಆರೋಪಿಯಾಗಿದ್ದಾನೆ. ಬೈಲಹೊಂಗಲ ಹಾಗೂ ಚನ್ನಮ್ಮ ಕಿತ್ತೂರು ತಾಲೂಕಿನ ವಿವಿಧ ಗ್ರಾಮಗಳ ನಾಲ್ವರು ಮಹಿಳೆಯರು ಈ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದಾರೆ. ಹಾಗಾಗಿ, ಮಕ್ಕಳ ಮಾರಾಟದ ಜತೆಗೆ ಭ್ರೂಣಹತ್ಯೆ ಶಂಕೆಯೂ ವ್ಯಕ್ತವಾಗಿದೆ. ಮಕ್ಕಳ ಮಾರಾಟ ಜಾಲದೊಂದಿಗೆ ಭ್ರೂಣಹತ್ಯೆಯ ಲಿಂಕ್ ಕೂಡ ಇರಬಹುದು ಎಂಬ ಸಂಶಯ ವ್ಯಕ್ತವಾಗಿದ್ದು, ಈ ಕುರಿತು ಸಮಗ್ರ ಪರಿಶೀಲನೆ ನಡೆಸಿ ಮಾಹಿತಿ ಕಲೆಹಾಕಲು ಮೇಲಧಿಕಾರಿಗಳ ತಂಡ ಚನ್ನಮ್ಮನ ಕಿತ್ತೂರಿಗೆ ಜೂ.12ರಂದು ಆಗಮಿಸಲಿದೆ ಎನ್ನಲಾಗಿದೆ.

    ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ವಿಶ್ವನಾಥ ಭೋವಿ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಸುನದೋಳಿ, ಇಮಾದ್ ರಾಜಗೋಳಿ ಹಾಗೂ ಪೊಲೀಸ್ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts