

ಬೆಂಗಳೂರು: 17ನೇ ಆವೃತ್ತಿಯ 68ನೇ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ಕಿಂಗ್ಸ್ ಮುಖಾಮುಖಿಯಾಗಲಿದ್ದು, ಉಭಯ ತಂಡಗಳಿಗೂ ಈ ಪಂದ್ಯ ಮಹತ್ವದಾಗಿದ್ದು, ಪ್ಲೇಆಫ್ ರೇಸ್ನಲ್ಲಿ ಖಾಲಿ ಉಳಿದಿರುವ ಏಕೈಕ ಸ್ಥಾನಕ್ಕಾಗಿ ಉಭಯ ತಂಡಗಳು ಕಾದಾಡಲಿದೆ. ಪ್ಲೇಆಫ್ ಪ್ರವೇಶಿಸುವ ನಾಲ್ಕನೇ ತಂಡ ಯಾವುದೆಂಬುದು ಇಂದು (ಮೇ 18) ನಡೆಯುವ ಪಂದ್ಯದಿಂದ ನಿರ್ಧಾರವಾಗಲಿದೆ.
ಸತತ ಸೋಲುಗಳಿಂದ ಕಂಗೆಟ್ಟು ಭರ್ಜರಿ ಕಮ್ಬ್ಯಾಕ್ ಮಾಡಿರುವ ಆರ್ಸಿಬಿ ತಂಡಕ್ಕೆ ಈ ಪಂದ್ಯ ಮಹತ್ವದಾಗಿದ್ದು, ಚೆನ್ನೈ ವಿರುದ್ಧದ ನಾಕೌಟ್ ಪಂದ್ಯದಲ್ಲಿ ಗೆದ್ದು ಪ್ಲೇಆಫ್ ಪ್ರವೇಶಿಸಬೇಕೆಂಬ ಹಂಬಲದಲ್ಲಿ ಆರ್ಸಿಬಿ ತಯಾರಿ ನಡೆಸುತ್ತಿದೆ.ಇದಲ್ಲದೆ ತವರು ಮೈದಾನದಲ್ಲಿ ಪಂದ್ಯ ನಡೆಯುತ್ತಿರುವುದರಿಂದ ಆರ್ಸಿಬಿಗೆ ಮಾತ್ರವಲ್ಲದೇ ಈ ಪಂದ್ಯ ಅಭಿಮಾನಿಗಳ ಪಾಲಿಗೆ ಅತಿಮುಖ್ಯವಾಗಿದೆ.
ಆರ್ಸಿಬಿ ಹಾಗೂ ಸಿಎಸ್ಕೆ ನಡುವಿನ ಹೈವೋಲ್ಟೇಜ್ ಪಂದ್ಯವೂ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿದ್ದು, ಟಿಕೆಟ್ಗೆ ಎಲ್ಲಿಲ್ಲದ ಬೇಡಿಕೆ ನಿರ್ಮಾಣವಾಗಿದೆ. ಏಕೆಂದರೆ ಉಭಯ ತಂಡಗಳು ಮುಖಾಮುಖಿಯಾದಾಗಲೆಲ್ಲ ಅಭಿಮಾನಿಗಳಿಗೆ ಮನರಂಜನೆಯ ರಸದೌತಣವೇ ಸಿಗುತ್ತದೆ. ಅದಕ್ಕಾಗಿಯೇ ಈ ಬಾರಿಯ ಆವೃತ್ತಿಯನ್ನು ಈ ಎರಡೂ ತಂಡಗಳ ನಡುವಿನ ಪಂದ್ಯದೊಂದಿಗೆ ಆರಂಭಿಸಲಾಗಿತ್ತು. ಆದರೆ ಆ ಪಂದ್ಯದಲ್ಲಿ ಆರ್ಸಿಬಿ ಸೋಲನುಭವಿಸಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲಿ ಸಿಎಸ್ಕೆ ತಂಡವನ್ನು ಮಣಿಸಿ ಹಳೆಯ ಸೋಲಿಗೆ ಸೇಡು ತೀರಿಸಿಕೊಳ್ಳುವ ಇರಾದೆಯಲ್ಲಿ ಆರ್ಸಿಬಿ ಇದೆ.
ಇದಲ್ಲದೆ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದ್ದು, ಅಭಿಮಾನಿಗಳು ಪಂದ್ಯ ಮುಗಿಯುವವರೆಗೂ ಯಾವುದೇ ಕಾರಣಕ್ಕೂ ಮಳೆ ಬಾರದಿದಲಿ ಎಂದು ದೇವರ ಮೊರೆ ಹೋಗಿದ್ದಾರೆ. ಇದಲ್ಲದೆ ಸಿಎಸ್ಕೆ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಭರ್ಕರಿ ಜಯ ಸಾಧಿಸಿ ಪ್ಲೇಆಫ್ ಪ್ರವೇಶಿಸಲಿ ಎಂದು ಅಭಿಮಾನಿಗಳು ದೇವರಿಗೆ ವಿಶೇಷ ಪೂಜೆ ಹಾಗೂ ಪಂದ್ಯ ನಡೆಯುವ ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಬೈಕ್ ರ್‍ಯಾಲಿ ನಡೆಸಿದ್ದಾರೆ. ಇದರ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದಲ್ಲದೆ ಉಭಯ ತಂಡಗಳ ನಡುವೆ ಮೇ 18 ರಂದು ಪಂದ್ಯ ನಡೆಯುತ್ತಿರುವುದು ಈ ಪಂದ್ಯದ ಮೇಲೆ ಕುತೂಹಲ ಹೆಚ್ಚಲು ಕಾರಣವಾಗಿದೆ. ವಾಸ್ತವವಾಗಿ ಈ ಎರಡೂ ತಂಡಗಳು 2013 ಮತ್ತು 2014 ರ ಐಪಿಎಲ್ ಆವೃತ್ತಿಯಂದು ಇದೇ ದಿನಾಂಕದಲ್ಲಿ ಅಂದರೆ ಮೇ 18 ರಂದು ಮುಖಾಮುಖಿಯಾಗಿದ್ದವು. ಈ ಎರಡೂ ಮುಖಾಮುಖಿಯಲ್ಲೂ ಆರ್ಸಿಬಿ, ಚೆನ್ನೈ ತಂಡವನ್ನು ಮಣಿಸುವಲ್ಲಿ ಯಶಸ್ವಿಯಾಗಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲೂ ಆರ್ಸಿಬಿ ಅದೇ ಗೆಲುವಿನ ಸರಣಿಯನ್ನು ಮುಂದುವರೆಸಲಿ ಎಂಬುದು ಅಭಿಮಾನಿಗಳ ಆಶಿಸುತ್ತಿದ್ದಾರೆ.