

ನವದೆಹಲಿ: ಕರೊನಾ ಎರಡನೇ ಅಲೆ ಇನ್ನೂ ತನ್ನ ಮೇಲಾಟ ತೋರುತ್ತಿರುವ ನಡುವೆಯೇ ಕರೊನಾ ಮೂರನೇ ಅಲೆ ಕುರಿತ ಭೀತಿ ಮೂಡಿದ್ದು, ಇದೀಗ ಆ ಬಗ್ಗೆ ಒಂದು ಆತಂಕಕಾರಿ ಅಂಶವೊಂದು ಬಹಿರಂಗಗೊಂಡಿದೆ. ಎಸ್ಬಿಐ ಸಂಶೋಧನೆ ಅಂಥದ್ದೊಂದು ವಿಷಯವನ್ನು ತನ್ನ ವರದಿಯಲ್ಲಿ ಪ್ರಕಟಿಸಿದೆ.
ಭಾರತದಲ್ಲಿ ಕರೊನಾ ಮೂರನೇ ಅಲೆ ಯಾವಾಗ ಬರಲಿದೆ ಎಂಬ ಕುರಿತು ಚರ್ಚೆಗಳು ನಡೆಯುತ್ತಿರುವಾಗಲೇ ಆ ಕುರಿತು ಮತ್ತಷ್ಟು ಅಧ್ಯಯನ ನಡೆದಿದ್ದು, ಅದೀಗ ಇನ್ನೂ ಹೆಚ್ಚಿನ ಜಾಗರೂಕತೆ ವಹಿಸುವ ಅಗತ್ಯವನ್ನು ಸೃಷ್ಟಿಸಿದೆ.
'ಕೋವಿಡ್-19: ದ ರೇಸ್ ಟು ಫಿನಿಷಿಂಗ್ ಲೈನ್' ಎಂಬ ಹೆಸರಿನಲ್ಲಿ ನಡೆದಿರುವ ಎಸ್ಬಿಐ ರಿಸರ್ಚ್ ಈ ವಿಷಯವನ್ನು ಬಹಿರಂಗಪಡಿಸಿದೆ. ಈ ಅಧ್ಯಯನದ ಪ್ರಕಾರ ಭಾರತಕ್ಕೆ ಕರೊನಾ ಮೂರನೇ ಅಲೆ ಆಗಸ್ಟ್ನಲ್ಲಿ ಪ್ರವೇಶಿಸಲಿದೆ. ಮಾತ್ರವಲ್ಲ, ಸೆಪ್ಟೆಂಬರ್ನಲ್ಲಿ ಮೂರನೇ ಅಲೆಯ ಪ್ರಕರಣಗಳು ಗರಿಷ್ಠ ಹಂತವನ್ನು ತಲುಪಲಿವೆ ಎಂಬ ಎಚ್ಚರಿಕೆಯನ್ನು ಈ ಅಧ್ಯಯನದ ಅಂಶಗಳು ನೀಡಿವೆ.
ಇತ್ತೀಚಿನ ಬುಲೆಟಿನ್ ಪ್ರಕಾರ ಭಾರತದಲ್ಲಿ ಈಗ 3.05 ಕೋಟಿ ಕೋವಿಡ್-19 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಕರೊನಾದಿಂದಾಗಿ ಮೃತಪಟ್ಟವರ ಸಂಖ್ಯೆ 4 ಲಕ್ಷವನ್ನು ದಾಟಿದೆ. ಇನ್ನು ಭಾರತದಲ್ಲಿ ಸದ್ಯ 4.82 ಲಕ್ಷ ಸಕ್ರಿಯ ಪ್ರಕರಣಗಳಿವೆ. (ಏಜೆನ್ಸೀಸ್)