

ವಾಷಿಂಗ್ಟನ್: ಎಚ್-1ಬಿ ಉದ್ಯೋಗ ವೀಸಾ ನೀಡಿಕೆಯಲ್ಲಿ ಅಮೆರಿಕದಲ್ಲಿ ಶಿಕ್ಷಣ ಪಡೆದ ವಿದೇಶಿ ನಿಪುಣ ವೃತ್ತಪರರಿಗೆಆದ್ಯತೆ ಕೊಡುವ ಸಂಬಂಧದ ಮಸೂದೆಯೊಂದನ್ನು ಅಮೆರಿಕ ಸಂಸತ್ತಿನ (ಕಾಂಗ್ರೆಸ್) ಉಭಯ ಸದನಗಳಲ್ಲಿ ಮಂಡಿಸಲಾಗಿದೆ. ಈ ಮಸೂದೆಯಿಂದ ಭಾರತೀಯರಿಗೆ ಹೆಚ್ಚಿನ ಅನುಕೂಲವಾಗಲಿದೆ ಎನ್ನಲಾಗಿದೆ.
ಅತ್ಯಂತ ನವೀನ, ಪರಿವರ್ತ ನಾತ್ಮಕ ಯೋಚನೆ ಗಳುಳ್ಳ ಜನರಿಗೆ ಈ ಮಸೂದೆಯು ಅಮೆರಿಕಕ್ಕೆ ಬರಲು ಅವಕಾಶ ಕಲ್ಪಿಸಲಿದೆ. | ರೋ ಖನ್ನಾ ಭಾರತ ಮೂಲದ ಅಮೆರಿಕದ ಸಂಸದ
ಕುಶಲ ಉದ್ಯೋಗಿಗಳ ವಲಸೆಯೇತರ ವೀಸಾ ವ್ಯವಸ್ಥೆಯಲ್ಲಿ ಪ್ರಮುಖ ಸುಧಾರಣೆ ತರುವ ಉದ್ದೇಶದ ಎಚ್-1ಬಿ ಮತ್ತು ಎಲ್-1 ವೀಸಾ ಸುಧಾರಣೆ ಕಾನೂನು ಹೆಸರಿನ ಮಸೂದೆಯನ್ನು ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ಸದಸ್ಯರನ್ನೊಳಗೊಂಡ ಸಮಿತಿಯೊಂದು ರೂಪಿಸಿದೆ. ಪ್ರತಿನಿಧಿ ಸಭೆ (ಹೌಸ್ ಆಫ್ ರೆಪ್ರಸಂಟೇಟಿವ್ಸ್) ಮತ್ತು ಸೆನೆಟ್ಗಳಲ್ಲಿ ಈ ಮಸೂದೆಯನ್ನು ಶುಕ್ರವಾರ ಮಂಡಿಸಲಾಗಿದೆ. ಸೆನೆಟ್ನಲ್ಲಿ ಚಕ್ ಗ್ರಾಸ್ಲೆ ಮತ್ತು ಡಿಕ್ ಡರ್ಬಿನ್ ಹಾಗೂ ಪ್ರತಿನಿಧಿ ಸಭೆಯಲ್ಲಿ ಬಿಲ್ ಪಾಸ್ರೆಲ್, ಪೌಲ್ ಗೊಸರ್, ರೋ ಖನ್ನಾ, ಫ್ರಾಂಕ್ ಪಲ್ಲೊನ್ ಮತ್ತು ಲ್ಯಾನ್ಸ್ ಗೂಡನ್ ಮಸೂದೆ ಮಂಡಿಸಿದರು. -ಏಜೆನ್ಸೀಸ್
ಪ್ರತಿಭಾ ಸಂಪನ್ನರಿಗೆ ಹೆಚ್ಚಿನ ಅವಕಾಶ: ಅಮೆರಿಕದಲ್ಲಿ ಶಿಕ್ಷಣ ಪಡೆದ ಉತ್ತಮ ಹಾಗೂ ಅತ್ಯಂತ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಎಚ್-1ಬಿ ವೀಸಾ ನೀಡಿಕೆಯಲ್ಲಿ ಹೊಸ ವ್ಯವಸ್ಥೆಗೆ ಈ ಮಸೂದೆ ಅವಕಾಶ ಮಾಡಿ ಕೊಡುತ್ತದೆ. ಹೆಚ್ಚು ವೇತನ ಪಡೆಯುವ ಹಾಗೂ ಅಮೂಲ್ಯ ಕೌಶಲ್ಯ ಹೊಂದಿರುವ ಪದವೀಧರರೂ ಈ ವೀಸಾ ಪಡೆಯಬಹುದಾಗಿದೆ. ಎಚ್-1ಬಿ ಅಥವಾ ಎಲ್-1 ವೀಸಾದಾರರು ಅಮೆರಿಕದ ಕಾರ್ವಿುಕರನ್ನು ಬದಲಿಸುವುದನ್ನು ಈ ಕಾನೂನು ಸ್ಪಷ್ಟವಾಗಿ ನಿಷೇಧಿಸುತ್ತದೆ. ಎಚ್-1ಬಿ ಕಾರ್ವಿುಕರ ನೇಮಕಾತಿಯಿಂದ ಅದೇ ರೀತಿಯ ಉದ್ಯೋಗದ ಸನ್ನಿವೇಶದಲ್ಲಿ ಕೆಲಸ ಮಾಡುವ ಅಮೆರಿಕ ನೌಕರರ ಮೇಲೆ ಯಾವುದೇ ಬಗೆಯ ವ್ಯತಿರಿಕ್ತ ಪರಿಣಾಮ ಆಗಬಾರದು ಎಂದು ಮಸೂದೆ ಸ್ಪಷ್ಟಪಡಿಸಿದೆ.
ಔಟ್ಸೋರ್ಸಿಂಗ್ಗೆ ಕಡಿವಾಣ: ಎಚ್-1ಬಿ ಮತ್ತು ಎಲ್-1 ವೀಸಾದ ಮೇಲೆ ಕಾರ್ವಿುಕರನ್ನು ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುವ ಗುತ್ತಿಗೆ (ಔಟ್ಸೋರ್ಸಿಂಗ್) ಕಂಪನಿಗಳ ಮೇಲೆ ಹೆಚ್ಚಿನ ನಿಯಂತ್ರಣ ಹೇರುವುದೂ ಪ್ರಸ್ತಾಪಿತ ಕಾನೂನಿನ ಉದ್ದೇಶವಾಗಿದೆ. ಈ ಕಂಪನಿಗಳು ಉದ್ಯೋಗಿಗಳನ್ನು ಕರೆತಂದು ತರಬೇತಿ ನೀಡಿ ನಂತರ ತಮ್ಮ ದೇಶಗಳಿಗೆ ವಾಪಸ್ ಕಳಿಸುತ್ತಿವೆ. ಅದನ್ನು ನಿಯಂತ್ರಿಸಲು ಉದ್ದೇಶಿಸಲಾಗಿದೆ. ಕನಿಷ್ಠ ಅರ್ಧಕ್ಕಿಂತ ಹೆಚ್ಚು ಎಚ್-1ಬಿ ಅಥವಾ ಎಲ್-1 ವೀಸಾ ಹೊಂದಿರುವ 50ಕ್ಕಿಂತ ಅಧಿಕ ನೌಕರರಿರುವ ಕಂಪನಿಗಳು ಹೆಚ್ಚುವರಿಯಾಗಿ ಎಚ್-1ಬಿ ನೌಕರರನ್ನು ನಿಷೇಧಿಸುವುದು ಮಸೂದೆಯ ಉದ್ದೇಶವಾಗಿದೆ.