

ಅಡೂರ್: ಕರೋನಾ ಸೋಂಕು ಕಾರಣಕ್ಕೆ ಕ್ವಾರಂಟೈನ್ನಲ್ಲಿ ಇದ್ದ ಗೆಳೆಯನಿಗೆ ಹಲ್ವಾ ತಗೊಂಡು ಹೋಗಿದ್ದವನನ್ನು ಹುಡುಕುತ್ತಿದ್ದಾರೆ ಪೊಲೀಸರು! ಹಲ್ವಾ ತಗೊಂಡು ಹೋಗಿ ಗೆಳೆಯನಿಗೆ ಕೊಡೋದು ಅಪರಾಧವಾ? ಎಂಬ ಸಂದೇಹ ಮೂಡುವುದು ಸಹಜ. ಅಸಲಿ ಕಥೆ ಬೇರೆಯೇ ಇದೆ.
ಅಡೂರಿನ ಗವರ್ನಮೆಂಟ್ ಬಾಯ್ಸ್ ಹೈ ಸ್ಕೂಲ್ ಸಮೀಪದ ಸರ್ಕಾರಿ ಸಂಸ್ಥೆಯಲ್ಲಿ ಅನಯಾಡಿ ನಿವಾಸಿಯೊಬ್ಬರು ಕ್ವಾರಂಟೈನ್ನಲ್ಲಿದ್ದಾರೆ. ಈತ ಹೈದರಾಬಾದ್ನಿಂದ ಮೂರು ದಿನಗಳ ಹಿಂದಷ್ಟೇ ಊರಿಗೆ ಬಂದಿದ್ದ. ಈ ವಿಷಯ ಗೊತ್ತಾಗುತ್ತಿದ್ದಂತೆ ಅಧಿಕಾರಿಗಳು ಈತನನ್ನು ಕ್ವಾರಂಟೈನ್ ಗೆ ಒಳಪಡಿಸಿದ್ದರು. ಈತನ ಸ್ನೇಹಿತ ಅನಯಾಡಿಯ ವಯ್ಯಂಕರ ನಿವಾಸಿ ವಿನೋದ್.
ಕ್ವಾರಂಟೈನ್ನಲ್ಲಿ ಇರುವ ಗೆಳೆಯನಿಗಾಗಿ ವಿನೋದ್ ಹಲ್ವಾ ಮತ್ತು ಇತರೆ ಆಹಾರ ಸಾಮಗ್ರಿಯನ್ನು ತಂದಿದ್ದ. ಅದನ್ನು ಕ್ವಾರಂಟೈನ್ ಕೇಂದ್ರದಲ್ಲಿರುವ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದ. ಅದನ್ನು ಪರಿಶೀಲಿಸಿದಾಗ ಹಲ್ವಾ ಮಾತ್ರ ಬೇರೆಯದೇ ಪರಿಮಳ ಸೂಸುತ್ತಿತ್ತು. ಅದನ್ನು ಮತ್ತು ಪರಿಶೀಲನೆಗೆ ಒಳಪಡಿಸಿದಾಗ ಆ ಹಲ್ವಾ ಒಳಗೆ ಗಾಂಜಾ ಪತ್ತೆಯಾಗಿದೆ!! ಆದರೆ, ಅದನ್ನು ತಂದು ಕೊಟ್ಟ ವಿನೋದ್ ಸ್ಥಳದಿಂದ ನಾಪತ್ತೆ!
ಪೊಲೀಸರು ಪ್ರಕರಣ ದಾಖಲಿಸಿದ್ದು, ವಿನೋದ್ಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ. ಆತನ ಮನೆಗೆ ಹೋಗಿ ವಿಚಾರಿಸಿದಾಗಲೂ ಅಲ್ಲಿ ಆತ ಇರಲಿಲ್ಲ. ಹೀಗಾಗಿ ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. (ಏಜೆನ್ಸೀಸ್)