ದಕ್ಷಿಣ ಭಾರತೀಯರು ಆಫ್ರಿಕಾದವರಂತೆ ಕಾಣ್ತಾರೆ! ರಾಹುಲ್​ ಗಾಂಧಿ ಆಪ್ತ ಸ್ಯಾಮ್​ ಪಿತ್ರೋಡಾ ಹೇಳಿಕೆಗೆ ಭಾರಿ ಆಕ್ರೋಶ

Sam Pithroda
Published on

ನವದೆಹಲಿ: ಕೆಲ ದಿನಗಳ ಹಿಂದೆ ಪಿತ್ರಾರ್ಜಿತ ತೆರಿಗೆಯ ಬಗ್ಗೆ ಮಾತನಾಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದ ರಾಹುಲ್ ಗಾಂಧಿಯ ನಿಕಟವರ್ತಿ ಮತ್ತು ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಇದೀಗ ಮತ್ತೊಂದು ವಿವಾದ ಸುಳಿಯಲ್ಲಿ ಸಿಲುಕಿದ್ದಾರೆ. ಈ ಬಾರಿ ಜನಾಂಗೀಯ ನಿಂದನೆ ವಿಚಾರದಲ್ಲಿ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಜಗತ್ತಿನಲ್ಲಿ ಅತಿದೊಡ್ಡ ಪ್ರಜಾಪ್ರಭುತ್ವದ ಉದಾಹರಣೆಯಾಗಿ ಭಾರತವು ತನ್ನನ್ನು ಹೇಗೆ ಅಭಿವೃದ್ಧಿಪಡಿಸಿಕೊಂಡಿದೆ ಎಂಬುದನ್ನು ಒತ್ತಿ ಹೇಳಿದ ಸ್ಯಾಮ್​ ಪಿತ್ರೋಡಾ, "ಒಟ್ಟಿಗೆ ವಾಸಿಸುವ ಅತ್ಯಂತ ಸಂತೋಷದ ವಾತಾವರಣದಲ್ಲಿ ದೇಶದ ಜನರು 75 ವರ್ಷಗಳ ಕಾಲ ಬದುಕಿದ್ದಾರೆ" ಎಂದರು.

ನಾವು ಭಾರತದಂತಹ ವೈವಿಧ್ಯಮಯ ದೇಶವನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳಬಹುದು. ಇಲ್ಲಿನ ಪೂರ್ವ ಭಾಗದ ಜನರು ಚೀನಿಯರಂತೆ ಕಾಣುತ್ತಾರೆ, ಪಶ್ಚಿಮ ಭಾಗದವರು ಅರಬ್​ರಂತೆ, ಉತ್ತರ ಭಾಗದವರು ಬಿಳಿಯರಂತೆ ಹಾಗೂ ದಕ್ಷಿಣ ಭಾರತದ ಜನರು ಆಫ್ರಿಕಾದವರಂತೆ ಕಾಣುತ್ತಾರೆ. ಆದರೆ, ಇದ್ಯಾವುದೂ ನಮಗೆ ವಿಷಯವೇ ಅಲ್ಲ. ನಾವೆಲ್ಲರು ಸಹೋದರರು ಮತ್ತು ಸಹೋದರರಿಯರಂತೆ ಬಾಳುತ್ತೇವೆ ಎಂದು ದಿ ಸ್ಟೇಟ್ಸ್​ಮ್ಯಾನ್​ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಸ್ಯಾಮ್​ ಪಿತ್ರೋಡಾ ಹೇಳಿದ್ದಾರೆ.

ಇದೇ ಹೇಳಿಕೆ ಇದೀಗ ವಿವಾದದ ಸ್ವರೂಪ ಪಡೆದುಕೊಂಡಿದೆ. ಎಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲೂ ಕೂಡ ಕಾಮೆಂಟ್​ಗಳ ಮೂಲಕ ಟೀಕಾ ಪ್ರಹಾರ ನಡೆಸುತ್ತಿದ್ದಾರೆ. ಪಿತ್ರೋಡಾ ಹೇಳಿಕೆಯನ್ನು ಕಲ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ಈಶಾನ್ಯ ಅಸ್ಸಾಂ ಮತ್ತು ಮಣಿಪುರದ ಬಿಜೆಪಿ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳು ಪಿತ್ರೋಡಾ ಮೇಲೆ ವಾಗ್ದಾಳಿ ಮಾಡಿದ್ದಾರೆ ಮತ್ತು ಕ್ಷಮೆಯಾಚಿಸಲು ಕಾಂಗ್ರೆಸ್ ಪಕ್ಷವನ್ನು ಒತ್ತಾಯಿಸಿದ್ದಾರೆ.

ಮಣಿಪುರ ಸಿಎಂ ಎನ್. ಬಿರೇನ್ ಸಿಂಗ್ ಮಾತನಾಡಿ, ಭಾರತವನ್ನು ಧಾರ್ಮಿಕ ಆಧಾರದ ಮೇಲೆ ವಿಭಜಿಸುವ ಹಿಡನ್ ಅಜೆಂಡಾವನ್ನು ಕಾಂಗ್ರೆಸ್ ಹೊಂದಿದೆ ಮತ್ತು ಕಳೆದ ವರ್ಷ ಮೇ ತಿಂಗಳಿನಿಂದ ನಡೆದ ಹಿಂಸಾಚಾರದಲ್ಲಿ 100ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ಸಾವಿರಾರು ಜನರು ನಿರಾಶ್ರಿತರಾಗಿರುವ ರಾಜ್ಯದ ಪರಿಸ್ಥಿತಿಗೆ ವಿರೋಧ ಪಕ್ಷವನ್ನು ದೂಷಿಸಿದರು.

ಪಿತ್ರಾರ್ಜಿತ ಆಸ್ತಿ ವಿವಾದ

ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ, ಪಕ್ಷವೂ ದೇಶಾದ್ಯಂತ ಸಮೀಕ್ಷೆ ಮಾಡಿ, ಯಾರು ಆಸ್ತಿಯನ್ನು ಹೊಂದಿದ್ದಾರೆ ಎಂದು ತಿಳಿದು ಅದನ್ನು ಮರು ಹಂಚಿಕೆ ಮಾಡುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಹೇಳಿದೆ. ಪ್ರಧಾನಿ ಮೋದಿಯವರು ಇತ್ತೀಚೆಗೆ ಸಮಾವೇಶವೊಂದರಲ್ಲಿ ಈ ಅಂಶವನ್ನು ಉಲ್ಲೇಖಿಸಿದ್ದಾರೆ ಎಂದು ಎಎನ್​ಐ ಸುದ್ದಿ ಸಂಸ್ಥೆಯ ಪತ್ರಕರ್ತರೊಬ್ಬರು ಹೇಳಿದ ಮಾತಿಗೆ ಪ್ರತಿಕ್ರಿಯೆ ನೀಡುವಾಗ ಸ್ಯಾಮ್ ಪ್ರಿತೋಡಾ ಅವರು ಪಿತ್ರಾರ್ಜಿತ ತೆರಿಗೆ ವ್ಯವಸ್ಥೆಯನ್ನು ಉದಾಹರಣೆ ನೀಡುವ ಮೂಲಕ ಕಾಂಗ್ರೆಸ್​ ಪಕ್ಷದ ನಿಲುವನ್ನು ಸಮರ್ಥನೆ ಮಾಡಿಕೊಂಡು ವಿವಾದ ಹುಟ್ಟುಹಾಕಿದ್ದರು. ಅಮೆರಿಕದಲ್ಲಿ ಜಾರಿಯಲ್ಲಿರುವ ಕಾನೂನಿನ ಬಗ್ಗೆ ವಿವರಣೆ ನೀಡಿದ ಸ್ಯಾಮ್​ ಪಿತ್ರೋಡಾ, ಒಬ್ಬ ವ್ಯಕ್ತಿಯು 100 ಮಿಲಿಯನ್ ಡಾಲರ್​ ಮೌಲ್ಯದ ಸಂಪತ್ತನ್ನು ಹೊಂದಿದ್ದರೆ, ಆತ ಸತ್ತಾಗ ಆಸ್ತಿಯಲ್ಲಿ ಕೇವಲ 45 ಪ್ರತಿಶತವನ್ನು ಮಕ್ಕಳಿಗೆ ವರ್ಗಾಯಿಸಿ, ಉಳಿದ 55 ಪ್ರತಿಶತವನ್ನು ಸರ್ಕಾರವು ಪಡೆದುಕೊಳ್ಳುತ್ತದೆ. ನಿಮ್ಮ ಪೀಳಿಗೆಯಲ್ಲಿ, ನೀವು ಸಂಪತ್ತನ್ನು ಗಳಿಸಿದ್ದೀರಿ ಈಗ ನೀವು ಹೊರಡುತ್ತಿದ್ದೀರಿ, ನಿಮ್ಮ ಸಂಪತ್ತನ್ನು ಸಾರ್ವಜನಿಕರಿಗಾಗಿ ಬಿಡಬೇಕು ಎಂಬುದನ್ನು ಅಮೆರಿಕ ಕಾನೂನು ಹೇಳುತ್ತದೆ. ಇದು ನನಗೆ ನ್ಯಾಯೋಚಿತ ಎಂದೆನಿಸುತ್ತದೆ. ಭಾರತದಲ್ಲಿ ಈ ರೀತಿಯ ಕಾನೂನು ಇಲ್ಲ. ಇಲ್ಲಿ ಒಬ್ಬ ವ್ಯಕ್ತಿಯು 10 ಶತಕೋಟಿ ಮೌಲ್ಯದ ಆಸ್ತಿ ಹೊಂದಿದ್ದರೆ, ಆತನ ಸಾವಿನ ಬಳಿಕ ಎಲ್ಲವು ಮಕ್ಕಳಿಗೆ ಹೋಗುತ್ತದೆ. ಸಾರ್ವಜನಿಕರಿಗಾಗಿ ಏನನ್ನೂ ಬಿಡುವುದಿಲ್ಲ. ಜನರು ಇಂತಹ ವಿಚಾರಗಳ ಮೇಲೆ ಚರ್ಚೆಗಳನ್ನು ಮಾಡಬೇಕಿದೆ ಎಂದು ಸ್ಯಾಮ್​ ಪಿತ್ರೋಡಾ ಹೇಳಿದ್ದರು.

ಬಿಜೆಪಿ ಕಿಡಿ

ಪಿತ್ರೋಡಾ ಹೇಳಿಕೆಯನ್ನು ಮುಂದಿಟ್ಟುಕೊಂಡು ಬಿಜೆಪಿ, ಕಾಂಗ್ರೆಸ್​ ವಿರುದ್ಧ ಮುಗಿಬಿದ್ದಿತ್ತು. ನುಸುಳುಕೋರರಿಗೆ ಉಡುಗೊರೆಯಾಗಿ ನೀಡಲು ನಿಮ್ಮ ಆಸ್ತಿ ಮತ್ತು ಸಂಪತ್ತನ್ನು ಕಸಿದುಕೊಳ್ಳುವುದರ ಜತೆಗೆ ಆಸ್ತಿಗಳ ಸಂಪೂರ್ಣ ಉತ್ತರಾಧಿಕಾರವನ್ನು ನಿಲ್ಲಿಸಲು ಕಾನೂನನ್ನು ತರಲು ಕಾಂಗ್ರೆಸ್​ ಬಯಸಿದೆ. ಈ ಕಾನೂನಿನ ಮೂಲಕ, ನಿಮ್ಮ ಅರ್ಧದಷ್ಟು ಸಂಪತ್ತನ್ನು ಕಿತ್ತುಕೊಂಡು ತಮ್ಮ ವೋಟ್ ಬ್ಯಾಂಕ್​ಗೆ ನೀಡಲು ರಾಹುಲ್ ಗಾಂಧಿ ಮುಂದಾಗಿದ್ದಾರೆ. ಈ ದೇಶದ ಪ್ರಾಮಾಣಿಕ, ಶ್ರಮಜೀವಿ, ಸಂಪತ್ತು ಸೃಷ್ಟಿಕರ್ತರಿಗೆ ಕಾಂಗ್ರೆಸ್ ಅಪಾಯವಾಗಿದೆ. ನಿಮ್ಮ ಎಲ್ಲಾ ಸಂಪತ್ತನ್ನು ರಾಹುಲ್ ಗಾಂಧಿ ಮತ್ತು ಅವರ ಸಂಬಂಧಿಕರು ತೆಗೆದುಕೊಳ್ಳುತ್ತಾರೆ ಮತ್ತು ಕೆಲವರಿಗೆ ಉಡುಗೊರೆಯಾಗಿ ನೀಡಲು ಎಲ್ಲವನ್ನೂ ಲೂಟಿ ಮಾಡುತ್ತಾರೆ ಎಂದು ಬಿಜೆಪಿ ಕಿಡಿಕಾರಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net