More

    ಪೊಲೀಸರ ವಶದ ಮಾದಕ ವಸ್ತು ನಾಶ

    ಮೂಲ್ಕಿ: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ಮತ್ತು ದ.ಕ.ಜಿಲ್ಲಾ ಪೋಲಿಸ್ ವ್ಯಾಪ್ತಿಯಲ್ಲಿ ಒಂದು ವರ್ಷದ ಅವಧಿಯಲ್ಲಿ ವಶಪಡಿಸಿಕೊಂಡ ಮಾದಕ ವಸ್ತುಗಳನ್ನು ನ್ಯಾಯಾಲಯದ ಆದೇಶದಂತೆ ಶುಕ್ರವಾರ ಮೂಲ್ಕಿಯ ಕೊಲ್ನಾಡು ಕೈಗಾರಿಕಾ ಪ್ರಾಂಗಣದಲ್ಲಿರುವ ರಿ ಸಸ್ಟೆನಬಿಲಿಟಿ ಹೆಲ್ತ್‌ಕೇರ್ ಸೊಲ್ಯೂಷನ್ಸ್ ಲಿ. ಘಟಕದಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳ ಸಮಕ್ಷಮ ಸುಟ್ಟು ನಾಶಪಡಿಸಲಾಯಿತು.

    ಕಮಿಷನರೇಟ್ ವ್ಯಾಪ್ತಿಯ 9 ಪೊಲೀಸ್ ಠಾಣೆಗಳಲ್ಲಿ ದಾಖಲಾದ ಒಂಬತ್ತು ಪ್ರಕರಣಗಳಲ್ಲಿ ಸ್ವಾಧೀನಪಡಿಸಿಕೊಳ್ಳಲಾಗಿದ್ದ ಒಟ್ಟು ರೂ. 65,33,280 ಮೌಲ್ಯದ 220.825 ಕೆ.ಜಿ. ಗಾಂಜಾ, 193.151 ಗ್ರಾಂ ಎಂಡಿಎಂಎ ಮತ್ತು 30 ಗ್ರಾಂ ಮೆಥ್‌ಆಂಫೆಟಮೈನ್ ಮಾದಕ ವಸ್ತುಗಳನ್ನು ಕಮಿಷನರ್ ಅನುಪಮ್ ಅಗರ್‌ವಾಲ್ ಉಸ್ತುವಾರಿಯಲ್ಲಿ ನಾಶಪಡಿಸಲಾಯಿತು. ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯ ಐದು ಪೊಲೀಸ್ ಠಾಣೆಗಳಲ್ಲಿ ದಾಖಲಾದ ಒಟ್ಟು ಎಂಟು ಪ್ರಕರಣಗಳಲ್ಲಿ ಸ್ವಾಧೀನಪಡಿಸಿಕೊಳ್ಳಲಾದ 4.17 ಲಕ್ಷ ರೂ.ಮೌಲ್ಯದ 11.365 ಕೆ.ಜಿ. ಗಾಂಜಾ ಮತ್ತು 42.57 ಗ್ರಾಂ ಎಂಡಿಎಂಎ ಮಾದಕ ವಸ್ತಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಬಿ.ರಿಷ್ಯಂತ್ ಕುಮಾರ್ ಉಸ್ತುವಾರಿಯಲ್ಲಿ ನಾಶಪಡಿಸಲಾಯಿತು.

    ಈ ಸಂದರ್ಭ ಮಾಧ್ಯಮ ಜತೆ ಮಾತನಾಡಿದ ಕಮೀಷನರ್ ಅನುಪಮ್ ಅಗರ್‌ವಾಲ್, ವರ್ಷವೊಂದರಲ್ಲಿ ಪೊಲೀಸ್ ಇಲಾಖೆ ವಶಪಡಿಸಿಕೊಂಡ ಮಾದಕ ವಸ್ತುಗಳನ್ನು ನ್ಯಾಯಾಲಯದ ಆದೇಶದಂತೆ ನಾಶಪಡಿಸಲಾಗಿದೆ. ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಲ್ಲಿ ಈ ದಿನ ಮಾದಕ ವಸ್ತುಗಳ್ನು ನಾಶಪಡಿಸಲಾಗುತ್ತದೆ. ಯಾವುದೇ ಸಂದರ್ಭಗಳಲ್ಲಿ ಮಾದಕ ವಸ್ತುಗಳು ಮಾರಾಟ ಅಥವಾ ಉಪಯೋಗಿಸುವುದು ಕಂಡು ಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡಿ ಸಾರ್ವಜನಿಕರು ಸಹಕರಿಸಬೇಕು ಎಂದರು.

    ಡಿಸಿಪಿ ಕ್ರೈಂ ದಿನೇಶ್ ಕುಮಾರ್, ಎಸಿಪಿಗಳಾದ ರವೀಶ್ ನಾಯಕ್ ಮತ್ತು ಮನೋಜ್ ಕುಮಾರ್, ದ.ಕ.ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಬಿ.ರಿಷ್ಯಂತ್ ಕುಮಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಜೇಂದ್ರ ಡಿ.ಎಸ್., ವಿವಿಧ ಠಾಣೆಗಳ ಮತ್ತು ಸೆನ್ ನಿರೀಕ್ಷಕರು, ಉಪನಿರೀಕ್ಷಕರು, ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts