

ಜಮ್ಮು: ಕಾಶ್ಮೀರದಲ್ಲಿ ಸ್ಥಳೀಯ ಉಗ್ರ ಸಂಘಟನೆಗಳೇ ಭಯೋತ್ಪಾದನಾ ಕೃತ್ಯಗಳನ್ನು ನಡೆಸುತ್ತಿರುವುದು ಎಂದು ಬಿಂಬಿಸುವುದಕ್ಕೆ ಪಾಕಿಸ್ತಾನ ಶತಾಯಗತಾಯ ಪ್ರಯತ್ನಿಸುತ್ತಿದೆ. ಲಷ್ಕರ್ ಏ ತೊಯ್ಬಾ (ಎಲ್ಇಟಿ) ಮತ್ತು ಜೈಷ್ ಏ ಮೊಹಮ್ಮದ್(ಜೆಇಎಂ)ಗಳ ಕಿರಾತಕ ಉಗ್ರರನ್ನು ಕಾಶ್ಮೀರಕ್ಕೆ ರವಾನಿಸಿ ಅಲ್ಲಿ ಸ್ಥಳೀಯ ಹೆಸರಿನೊಂದಿಗೆ ಉಗ್ರ ಸಂಘಟನೆಯನ್ನು ರೂಪಿಸುವ ಸಂಚು ನಡೆದಿದೆ. ಈಗಾಗಲೇ ಇಂತಹ ಮೂರು ಸಂಘಟನೆಗಳನ್ನು ಪಾಕಿಸ್ತಾನ ಹುಟ್ಟುಹಾಕಿದೆ ಎಂದು ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಡಿಜಿಪಿ ದಿಲ್ಬಾಗ್ ಸಿಂಗ್ ಹೇಳಿದ್ದಾರೆ.
ಕಾಶ್ಮೀರ ಕಣಿವೆಯಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚೋದನೆ ನೀಡಿ ಬೀದಿ ರಂಪ ಸೃಷ್ಟಿಸಲು ಪಾಕಿಸ್ತಾನ ನಾನಾ ರೀತಿಯಲ್ಲಿ ಪ್ರಯತ್ನಿಸುತ್ತಿದೆ. ಇದಕ್ಕೆ ಪೂರಕವಾಗಿ ಅದು ಇತ್ತೀಚೆಗೆ ಮೂರು ಉಗ್ರ ಸಂಘಟನೆಗಳನ್ನು ಸ್ಥಳೀಯ ಹೆಸರುಗಳಲ್ಲಿ ಹುಟ್ಟುಹಾಕಿದೆ. ತೆಹ್ರೀಕ್ ರೆಸಿಸ್ಟನ್ಸ್ ಫ್ರಂಟ್(ಟಿಆರ್ಎಫ್), ತೆಹ್ರೀಕ್ ಮಿಲಿಟಿಯಾ ಇಸ್ಲಾಮಿಯಾ (ಟಿಎಂಐ), ಘಜ್ವಾ ಏ ಹಿಂದ್ (ಜಿಇಎಚ್) ಇವೇ ಮೂರು ಸಂಘಟನೆಗಳು. ಈ ಮೂರು ಸಂಘಟನೆಗಳ ಮೂಲಕ ಭಾರತದಲ್ಲೇ ಉಗ್ರ ಸಂಘಟನೆಗಳು ನೆಲೆಯೂರಿವೆ ಎಂದು ಜಗತ್ತಿಗೆ ಬಿಂಬಿಸುವುದಕ್ಕೆ ಪಾಕಿಸ್ತಾನ ಹುನ್ನಾರ ನಡೆಸಿದೆ. ಈ ಸಂಘಟನೆಗಳಲ್ಲಿ ಇರುವವರೆಲ್ಲ ಎಲ್ಇಟಿ ಮತ್ತು ಜೆಇಎಂಗೆ ಸೇರಿದ ಉಗ್ರರು ಎಂದು ಸಿಂಗ್ ಹೇಳಿದ್ದಾರೆ.
ರೆಸಿಸ್ಟನ್ಸ್ ಫ್ರಂಟ್ ಎಂಬುದು ಕೇವಲ ಹೆಸರಷ್ಟೇ. ಅದು ನಿಜವಾಗಿಯೂ ಉಗ್ರ ಪುನಶ್ಚೇತನ ಸಂಘಟನೆ. ಕಾಶ್ಮೀರದಲ್ಲಿ ಉಗ್ರ ಸಂಘಟನೆ ಮತ್ತು ಉಗ್ರರು ನೆಲಕಚ್ಚುತ್ತಿರುವುದನ್ನು ಗಮನಿಸಿಯೇ ಇದನ್ನು ಹುಟ್ಟುಹಾಕಿದ್ದಾರೆ. ಈ ಸಂಘಟನೆಗೆ ಪೂರ್ಣ ಪ್ರಮಾಣದ ನೆರವು ನೀಡುತ್ತಿರುವುದು ಎಲ್ಇಟಿ ಮತ್ತು ಜೆಇಎಂ, ಹಿಜ್ಬುಲ್ ಮುಜಾಹಿದ್ದಿನ್ಗಳು. ಜಗತ್ತಿನ ಕಣ್ಣಿಗೆ ಮಣ್ಣೆರಚಿ ಮೂರ್ಖರನ್ನಾಗಿಸುವುದು ಪಾಕಿಸ್ತಾನದ ಉದ್ದೇಶ. ಈ ಮೂರು ಸಂಘಟನೆಗಳ ಕೃತ್ಯಗಳನ್ನು ಟಿಆರ್ಎಫ್ ಈಗ ತನ್ನದು ಎಂದು ಹೇಳಿಕೊಳ್ಳುತ್ತಿದೆ. ಏಪ್ರಿಲ್ 5ರಂದು ಕುಪ್ವಾರಾ ಸೆಕ್ಟರ್ನ ಎಲ್ಒಸಿಯಲ್ಲಿ ಐವರು ಸೇನಾ ಸಿಬ್ಬಂದಿಯನ್ನು ಹತ್ಯೆಗೈದ ಪ್ರಕರಣದ ಹೊಣೆಗಾರಿಕೆಯನ್ನು ಟಿಆರ್ಎಫ್ ಹೊತ್ತುಕೊಂಡಿದೆ. ವಾಸ್ತವದಲ್ಲಿ ಅದಕ್ಕೂ ನೇರ ಸಂಬಂಧವಿಲ್ಲ. ಏಪ್ರಿಲ್ 27ರಂದು ಕುಪ್ವಾರಾ ಪ್ರಕರಣಕ್ಕೆ ಸಂಬಂಧಿಸಿದ ಮೂವರು ಉಗ್ರರನ್ನು ಸೇನೆ ಹೊಡೆದುರುಳಿಸಿದ್ದು, ಅವರ ಗುರುತು ಪತ್ತೆ ಹಚ್ಚಿದಾಗ ಎಲ್ಲರೂ ಹಿಜ್ಬುಲ್ ಮುಜಾಹಿದ್ದೀನ್ಗೆ ಸೇರಿದವರು ಎಂಬುದು ಖಾತ್ರಿಯಾಗಿತ್ತು ಎಂದು ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಈ ರೀತಿ ಬಹುತೇಕ ಉಗ್ರ ದಾಳಿಗಳ ಹೊಣೆಗಾರಿಕೆಯನ್ನು ಟಿಆರ್ಎಫ್ ಹೊತ್ತುಕೊಂಡಿದ್ದು, ಅದಕ್ಕೆ ಸಂಬಂಧಿಸಿದ ಉಗ್ರರನ್ನು ಹೊಡೆದುರುಳಿಸಿದಾಗ, ಸೆರೆ ಹಿಡಿದಾಗ ಅವರು ಎಲ್ಇಟಿ, ಜೆಇಎಂ, ಹಿಜ್ಬುಲ್ ಮುಜಾಹಿದ್ದೀನ್ಗೆ ಸೇರಿದವರು ಎಂಬುದು ವೇದ್ಯವಾಗುತ್ತದೆ. ಆದರೆ, ಟಿಆರ್ಎಫ್ ಈ ರೀತಿ ಹೊಣೆಗಾರಿಕೆ ಹೊತ್ತುಕೊಳ್ಳುವುದರಿಂದ ಅದು ಸ್ಥಳೀಯ ಉಗ್ರ ಸಂಘಟನೆಯಾಗಿ ಹೊರ ಜಗತ್ತಿಗೆ ಕಾಣಿಸುತ್ತಿದೆ. ಪಾಕಿಸ್ತಾನ ಈ ರೀತಿಯ ತಂತ್ರ ಅಳವಡಿಸಿಕೊಳ್ಳುವ ಮೂಲಕ ತನ್ನ ನೆಲದಲ್ಲಿ ಇರುವ ಜೆಇಎಂ, ಎಲ್ಇಟಿ, ಹಿಜ್ಬುಲ್ಗಳ ಹಿತವನ್ನು ಕಾಪಾಡುತ್ತಿದೆ.
ಇನ್ನುಳಿದ ಎರಡು ಸ್ಥಳೀಯ ಹೆಸರಿನ ಉಗ್ರ ಸಂಘಟನೆಗಳದ್ದೂ ಇದೇ ಕಥೆ. ಆರಂಭದಲ್ಲಿ ಪಾಕಿಸ್ತಾನ ಈ ಸಂಘಟನೆಗಳ ಸಾಮಾಜಿಕ ತಾಣಗಳನ್ನು ಬಳಸಿಕೊಂಡಿದೆ ಮತ್ತು ಈಗಲೂ ಬಳಸಿಕೊಳ್ಳುತ್ತಿದೆ. ಈಗ ನೇರವಾಗಿ ಅಖಾಡದಲ್ಲೂ ಬಳಸಿಕೊಂಡು ಭಾರತದಲ್ಲಿ ನಡೆಯುವ ಉಗ್ರ ಕೃತ್ಯಗಳಿಗೂ ತನಗೂ ಸಂಬಂಧವಿಲ್ಲ ಎಂಬುದನ್ನು ಬಿಂಬಿಸಿ ಕ್ಲೀನ್ ಇಮೇಜ್ ಗಿಟ್ಟಿಸಿಕೊಳ್ಳಲು ಹವಣಿಸುತ್ತಿದೆ ಎಂದು ಸಿಂಗ್ ಎಚ್ಚರಿಸಿದ್ದಾರೆ.
ಈ ವರ್ಷ ಐದು ತಿಂಗಳ ಅವಧಿಯಲ್ಲಿ ನಡೆದಿರುವ ಅಂದಾಜು 30 ಎನ್ಕೌಂಟರ್ಗಳಲ್ಲಿ 70 ಉಗ್ರರನ್ನು ಹತ್ಯೆಗೈಯಲಾಗಿದೆ. ಈ ಉಗ್ರರ ಪೈಕಿ ನಅಲ್ಕು ಉಗ್ರ ಸಂಘಟನೆಗಳ ಮುಖ್ಯಸ್ಥರು ಸೇರಿ 22 ಟಾಪ್ ಕಮಾಂಡರ್ಗಳಾಗಿದ್ದರು. ಏಪ್ರಿಲ್ ತಿಂಗಳೊಂದರಲ್ಲೇ ಅನ್ಸಾರ್ ಘಝ್ವಾತುಲ್ ಹಿಂದ್, ಜೆಇಎಂ, ಎಲ್ ಇಟಿ ಮತ್ತು ಹಿಜ್ಬುಲ್ ಮುಜಾಹಿದ್ದೀನ್ನ ಕಾಶ್ಮೀರದ ಮುಖ್ಯಸ್ಥರು ಸೇರಿ 30 ಉಗ್ರರು 12 ವಿವಿಧ ಎನ್ಕೌಂಟರ್ಗಳಲ್ಲಿ ಹತರಾಗಿದ್ದಾರೆ. ಹಿಜ್ಬುಲ್ ಮುಖ್ಯಸ್ಥ ರಿಯಾಜ್ ನಾಯ್ಕೂ ಹತ್ಯೆ ಪೊಲೀಸರ ಮಟ್ಟಿಗೆ ಬಹುದೊಡ್ಡ ಯಶಸ್ಸು. ಪಾಕ್ ಪ್ರಾಯೋಜಿತ ಉಗ್ರವಾದಕ್ಕೆ ಭಾರಿ ಹಿನ್ನೆಡೆಯೂ ಆಗಿತ್ತು ಎಂಬುದನ್ನು ಸಿಂಗ್ ಸ್ಮರಿಸಿದ್ದಾರೆ. (ಏಜೆನ್ಸೀಸ್)