ಕಾಶ್ಮೀರದ ವಿಚಾರದಲ್ಲಿ ಪಾಕ್​ ಜತೆ ನಾವಿಲ್ಲ, ಇತ್ತ ತಲೆನೇ ಹಾಕಲ್ಲ ಎಂದ ತಾಲೀಬಾನ್​: ಪಾಕಿಸ್ತಾನಕ್ಕಾಯ್ತು ಭಾರಿ ಮುಖಭಂಗ!

taliban-web
Published on

ನವದೆಹಲಿ: ಕಾಶ್ಮೀರ ಭಾರತದ ಆಂತರಿಕ ವಿಚಾರವಾಗಿದೆ. ಈ ವಿಚಾರದಲ್ಲಿ ಪಾಕಿಸ್ತಾನದ ಜತೆ ನಾವು ಇಲ್ಲವೇ ಇಲ್ಲ, ಈ ವಿಷಯದಲ್ಲಿ ನಾವು ತಲೆ ಹಾಕುವುದಿಲ್ಲ ಎನ್ನುವ ಮೂಲಕ ತಾಲಿಬಾನ್‌ ಅಚ್ಚರಿ ಮೂಡಿಸಿದೆ. ಈ ಹೇಳಿಕೆಯಿಂದ ಪಾಕಿಸ್ತಾನ ಭಾರಿ ಮುಖಭಂಗ ಅನುಭವಿಸುವಂತಾಗಿದೆ.

ಕಾಶ್ಮೀರವನ್ನು ತಾಲಿಬಾನ್‌ ಸಂಘಟನೆ ವಶಪಡಿಸಿಕೊಳ್ಳಲಿದೆ ಎಂದು ಎಲ್ಲೆಡೆ ಹರಿದಾಡುತ್ತಿರುವ ಸುದ್ದಿಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಅಫ್ಘಾನಿಸ್ತಾನದ ರಾಷ್ಟ್ರೀಯ ಆಂದೋಲನವಾದ ಇಸ್ಲಾಮಿಕ್‌ ಎಮಿರೇಟ್ಸ್‌ ಆಫ್ ಅಫ್ಘಾನಿಸ್ತಾನ, ಇದು ಸಂಪೂರ್ಣ ಸುಳ್ಳು ಸುದ್ದಿ. ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನದ ನಡೆಯನ್ನು ನಾವು ಬೆಂಬಲಿಸುವುದಿಲ್ಲ ಎಂದಿದೆ.

"ಇಸ್ಲಾಮಿಕ್‌ ಎಮಿರೇಟ್ಸ್‌ ಮತ್ತು ಭಾರತದ ನಡುವೆ ಸ್ನೇಹ ಅಸಾಧ್ಯದ ಮಾತು. ಇಸ್ಲಾಮಿಕ್‌ ಎಮಿರೇಟ್‌ ಕಾಶ್ಮೀರವನ್ನು ವಶಪಡಿಸಿಕೊಳ್ಳಲಿದೆ' ಎಂದು ತಾಲಿಬಾನ್‌ ಸಂಘಟನೆಯ ವಕ್ತಾರ ಸುಹೈಲ್‌ ಶಹೀನ್‌ ಹೆಸರಲ್ಲಿ ನಕಲಿ ಟ್ವೀಟ್‌ ಮಾಡಲಾಗಿತ್ತು. ಇದಕ್ಕೆ ಅವರು ಪ್ರತಿಕ್ರಿಯೆ ನೀಡಿ ತಮ್ಮ ಸಂಘಟನೆ ನಿಲುವನ್ನು ಈ ಮೂಲಕ ಸ್ಪಷ್ಟಪಡಿಸಿದ್ದಾರೆ. ಇಂತಹ ಸುಳ್ಳು ಪ್ರಚಾರ ಸರಿಯಲ್ಲ. ತನ್ನ ನೆರೆ ದೇಶದ ಆಂತರಿಕ ವಿಚಾರಗಳಲ್ಲಿ ತಲೆ ಹಾಕುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

ಅಫ್ಘಾನಿಸ್ತಾನದ ಶಾಂತಿ ಮತ್ತು ಸುಧಾರಣೆಗೆ ಭಾರತ ಹಲವು ಕಾರ್ಯಗಳ ಮಾಡಿದೆ. ಈ ಬಗ್ಗೆ ನಮಗೆ ಭಾri ಮೆಚ್ಚುಗೆ ಇದೆ ಎಂದು ಸುಹೈಲ್‌ ಶಹೀನ್‌ ತಿಳಿಸಿದ್ದಾರೆ.

ಕಾಶ್ಮೀರ ವಿಚಾರದಲ್ಲಿ ನಾವು ತಲೆ ಹಾಕುವ ಮಾತೇ ಇಲ್ಲ ಎಂದಿದ್ದಾರೆ. ಕಾಶ್ಮೀರ ಭಾರತದ ಅವಿಭಾಜ್ಯ ಅಂಗ, ಈ ವಿಷಯದಲ್ಲಿ ಪಾಕಿಸ್ತಾನವನ್ನು ಬೆಂಬಲಿಸಲು ಸಾಧ್ಯವಿಲ್ಲ. ನೆರೆ ರಾಷ್ಟ್ರಗಳ ಆಂತರಿಕ ವಿಷಯವಾಗಿ ಹಸ್ತಕ್ಷೇಪ ಮಾಡಬಾರದೆಂಬುದು ಇಸ್ಲಾಮಿಕ್ ಎಮಿರೈಟ್ ನ ಸ್ಪಷ್ಟ ನೀತಿಯಾಗಿದೆ ಎಂದು ಸುಹೈಲ್ ಶಾಹೀನ್ ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.

ಒಂದು ಕಡೆ ಈ ರೀತಿಯ ನಕಲಿ ಸುದ್ದಿ ಹಬ್ಬಿಸುತ್ತಿರೋದು ಪಾಕಿಸ್ತಾನದ ಸೇನೆ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಿದೆ. ಕಾಶ್ಮೀರ ವಿಚಾರವಾಗಿ ಬೇರೆ ಬೇರೆ ಸಂಘಟನೆಗಳನ್ನು ಭಾರತದ ವಿರುದ್ಧ ಎತ್ತಿ ಕಟ್ಟುವುದನ್ನೇ ಕೆಲಸ ಮಾಡಿಕೊಂಡಿರುವ ಪಾಕಿಸ್ತಾನದ ಮುಖವೀಗ ಕಪ್ಪುಗಟ್ಟಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net