

ವಿಜಯವಾಡ: ಚಳಿಗಾಲದಲ್ಲಿ ಬಿಸಿ ಬಿಸಿ ಈರುಳ್ಳಿ ಪಕೋಡಾ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ. ಕೊಟ್ಟರೆ ಸಾಕು ಬಾಯಿ ಚಪ್ಪರಿಸಿ ತಿನ್ನುತ್ತಾರೆ. ಇದೇ ರೀತಿ ಆಂಧ್ರ ಪ್ರದೇಶದ ಚಿತ್ತೂರಿನ ವ್ಯಕ್ತಿಯೊಬ್ಬ ತನ್ನ ಮನೆಗೆ ಪಕೋಡಾ ತೆಗೆದುಕೊಂಡು ಹೋಗಿ ಕುಟುಂಬದೊಂದಿಗೆ ಚಪ್ಪರಿಸುವಾಗ ಆಘಾತವೊಂದು ಕಾದಿತ್ತು. ಅದು ಏನೆಂದು ತಿಳಿಯಲು ಮುಂದೆ ಓದಿ...
ಅಂದಹಾಗೆ ಈ ಘಟನೆ ನಡೆದಿದ್ದು, ಜ. 4 ಸೋಮವಾರದಂದು. ಅಂದು ಸಂಜೆ ನಾಲ್ಕು ಗಂಟೆಗೆ ರಾಜೀವ್ ಎಂಬಾತ ತಮ್ಮ ಕಾಲನಿಯಲ್ಲಿ ಪಕೋಡಾ ಮತ್ತು ಬಜ್ಜಿ ಮಾರಾಟ ಮಾಡುವ ಅಂಗಡಿಗೆ ತೆರಳಿದ್ದಾನೆ. ಬಳಿಕ ಪಕೋಡಾ ಪಾರ್ಸೆಲ್ ಮಾಡಸಿಕೊಂಡು ಮನೆಗೆ ತಂದಿದ್ದಾನೆ.
ಬಳಿಕ ಪಾರ್ಸೆಲ್ ಬಿಚ್ಚಿ ಕುಟುಂಬದವರ ಜತೆ ಸೇರಿಕೊಂಡು ಒಂದೊಂದೆ ಪಕೋಡಾವನ್ನು ಬಾಯಿಗೆ ಇಡುವಾಗ ವಿಶೇಷವಾಗಿ ಒಂದು ಪಕೋಡಾ ಮಾತ್ರ ತುಂಬಾ ಮೃದು ಎನಿಸಿದೆ. ಅನುಮಾನ ಬಂದು ನೋಡಿದಾಗ ಅದು ಪಕೋಡಾವಲ್ಲ, ಬದಲಾಗಿ ಕಪ್ಪೆ ಎಂಬುದು ತಿಳಿದಿದೆ. ತಕ್ಷಣ ಗಾಬರಿಯಾಗಿದೆ. ಬಳಿಕ ಕೋಪದಿಂದಲೇ ಅಂಗಡಿಯತ್ತ ರಾಜೀವ್ ಹೆಜ್ಜೆ ಹಾಕಿದ್ದಾನೆ.
ನೇರವಾಗಿ ಅಂಗಡಿಗೆ ಹೋದ ರಾಜೀವ್ ಜಗಳಕ್ಕೆ ಇಳಿದಿದ್ದಾನೆ. ಇದೇ ರೀತಿಯ ಪಕೋಡಾನಾ ನೀನು ಎಲ್ಲರಿಗೂ ಕೊಡುವುದು? ಇಲ್ಲಿ ನೋಡು ಏನಾಗಿದೆ.. ಹೀಗೆ ಮಾಡಿದರೆ ನಿನ್ನ ಅಂಗಡಿಗೆ ಯಾರು ಬರುತ್ತಾರೆ? ಅಂತ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾನೆ. ಇತ್ತ ರಾಜೀವ್ನನ್ನು ಪೆಚ್ಚು ಮೊರೆಯಿಂದ ನೋಡುತ್ತಿದ್ದ ಅಂಗಡಿಯವನು ಏನೋ ಗೊತ್ತಿಲ್ಲದೆ ಆಗಿದೆ. ಇನ್ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇನೆಂದು ಭರವಸೆ ನೀಡಿ ಕಳುಹಿಸಿದ್ದಾನೆ.
ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ರಾಜೀವ್, ನಾನು ತಿನ್ನಲೆಂದು ಪಕೋಡಾ ತೆಗೆದುಕೊಂಡೆ. ಬಳಿಕ ಮನೆಗೆ ತೆರಳಿ ತಿನ್ನುವಾಗ ಪಕೋಡಾದಲ್ಲಿ ಕಪ್ಪೆ ಕಾಣಿಸಿಕೊಂಡಿತು. ಆದರೆ, ನಮ್ಮ ಕುಟುಂಬ ಮತ್ತು ನಾನು ಕೆಲವು ಪಕೋಡಾಗಳನ್ನು ಖಾಲಿ ಮಾಡಿದ್ದೆವು. ಯಾರಿಗೂ ಹಾನಿಯಾಗಿಲ್ಲ. ಆದರೆ ಯಾವುದೇ ಆರೋಗ್ಯ ಸಮಸ್ಯೆಗಳಿದ್ದರೆ ಪರಿಸ್ಥಿತಿ ಹದಗೆಡುತ್ತದೆ ಎಂದಿದ್ದಾರೆ. (ಏಜೆನ್ಸೀಸ್)