

ಭೋಪಾಲ್: ಒಂದೂವರೆ ಕೋಟಿ ರೂಪಾಯಿ ವಿನಿಮಯದೊಂದಿಗೆ ಪ್ರೇಯಸಿಯೊಂದಿಗೆ ಮದುವೆ ಮಾಡಿಕೊಳ್ಳಲು ಮಹಿಳೆಯೊಬ್ಬಳು ತನ್ನ ಗಂಡನಿಗೆ ಅನುಮತಿ ನೀಡಿರುವ ವಿಚಿತ್ರ ಪ್ರಕರಣ ಮಧ್ಯಪ್ರದೇಶದ ಭೋಪಾಲ್ನಲ್ಲಿ ಬೆಳಕಿಗೆ ಬಂದಿದೆ.
ಸ್ಥಳೀಯ ಮಾಧ್ಯಮ ವರದಿ ಪ್ರಕಾರ ದಂಪತಿಯ ಮಗಳು ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ ಬಳಿಕ ಘಟನೆ ಬೆಳಕಿಗೆ ಬಂದಿದೆ. ನನ್ನ ತಂದೆ ಸಹೋದ್ಯೋಗಿಯೊಂದಿಗೆ ವಿವಾಹೇತರ ಸಂಬಂಧವನ್ನು ಹೊಂದಿದ್ದಾರೆ. ಇದರಿಂದಾಗಿ ಮನೆಯಲ್ಲಿ ಪ್ರತಿನಿತ್ಯವೂ ತಂದೆ ಮತ್ತು ತಾಯಿಗೆ ಜಗಳವಾಗುತ್ತಿದೆ. ಇದರ ಪರಿಣಾಮ ನನ್ನ ಮತ್ತು ಸಹೋದರಿಯ ಶಿಕ್ಷಣದ ಮೇಲೆ ಬೀಳುತ್ತಿದೆ ಎಂದು ದಂಪತಿಯ ಮಗಳು ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಕಚೇರಿಯಲ್ಲಿ ಪರಿಚಯವಾದ ಮಹಿಳೆಯೊಂದಿಗೆ ಸಂಬಂಧ ಬೆಳೆಸಿರುವ ಹೆಣ್ಣು ಮಗಳ ತಂದೆಗೆ ಆಕೆಯೊಂದಿಗೆ ವಾಸಿಸುವ ಆಸೆ ಇರುವುದರಿಂದ ಪತ್ನಿಯನ್ನು ಬಿಡಬೇಕೆಂದು ಬಯಸಿದ್ದಾನೆ. ಇದು ಕೌಟುಂಬಿಕ ಕಲಹಕ್ಕೆ ಕಾರಣವಾಗಿರುವುದರಿಂದ ಸಮಸ್ಯೆ ಬಗೆಹರಿಸಿಕೊಳ್ಳಲು ಇಬ್ಬರಿಗೂ ನ್ಯಾಯಾಲಯ ಸೂಚನೆಯಂತೆ ಆಪ್ತ ಸಮಾಲೋಚನೆಯನ್ನು ಕೊಡಿಸಲಾಯಿತು.
ಅನೇಕ ಸುತ್ತಿನ ಸಮಾಲೋಚನೆಯ ಬಳಿಕ ವಿಚಿತ್ರ ಕರಾರೊಂದನ್ನು ಮುಂದಿಟ್ಟಿರುವ ಮಹಿಳೆ ಪತಿಯನ್ನು ಬಿಡಲು ಒಪ್ಪಿದ್ದಾಳೆ. ತನ್ನ ಪತಿ ಜತೆ ಸಂಬಂಧ ಹೊಂದಿದ್ದ ಮಹಿಳೆ ತನ್ನ ಅಪಾರ್ಟ್‌ಮೆಂಟ್ ಜತೆಗೆ 27 ಲಕ್ಷ ರೂ. ನಗದು ನೀಡಬೇಕಾಗುತ್ತದೆ ಎಂದು ಪತ್ನಿ ಷರತ್ತು ಹಾಕಿದ್ದಾಳೆ.
ನನ್ನೊಂದಿಗೆ ಒಳ್ಳೆಯ ಸಂಬಂಧ ಹಂಚಿಕೊಳ್ಳದ ವ್ಯಕ್ತಿಯೊಂದಿಗೆ ನಾನು ಬಾಳಲು ಇಚ್ಛಿಸುವುದಿಲ್ಲ. ಹೀಗಾಗಿ ಬೇರೆಯಾಗಲು ಒಪ್ಪಿದ್ದು, ನನ್ನ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಒಂದಿಷ್ಟು ಹಣವನ್ನು ತೆಗೆದುಕೊಳ್ಳಲು ನಿರ್ಧರಿಸಿದ್ದೇನೆಂದು ಗಂಡನಿಂದ ಬೇರೆಯಾಗಲು ಒಪ್ಪಿರುವ ಮಹಿಳೆ ತಿಳಿಸಿದ್ದಾಳೆ. (ಏಜೆನ್ಸೀಸ್)