PHOTOS| ಹೆಣ್ಣಿನ ಜನನಾಂಗ ಮಾದರಿ ಶಿಲ್ಪಕಲೆ ವಿರುದ್ಧ ತೀವ್ರ ಆಕ್ರೋಶ: ಕಲಾವಿದೆ ಕೊಟ್ಟ​ ಉತ್ತರ ಹೀಗಿದೆ!

Sculpture
Published on

ಬ್ರಾಸಿಲಿಯಾ: ಬೆಟ್ಟದ ಪಕ್ಕ ನಿರ್ಮಿಸಲಾಗಿರುವ 108 ಅಡಿ ಉದ್ದದ ಮಹಿಳೆಯ ಜನನಾಂಗದ ಮಾದರಿಯ ಕಾಂಕ್ರಿಟ್​ ಶಿಲ್ಪಕಲೆಗೆ ಬ್ರೆಜಿಲ್​ನಲ್ಲಿ ತೀವ್ರ ಜನಾಕ್ರೋಶ ವ್ಯಕ್ತವಾಗಿದೆ.

ಬ್ರೆಜಿಲ್​ನ ಪೆರ್ನಾಂಬುಕೋ ರಾಜ್ಯದ ಹಳೆಯ ಸುಗರ್​ ಮಿಲ್​ ಬಳಿ ಜನನಾಂಗ ಮಾದರಿಯ ಶಿಲ್ಪಕಲೆ ನಿರ್ಮಿಸಲಾಗಿದ್ದು, ಶನಿವಾರ ಉದ್ಘಾಟನೆ ಸಹ ನೆರವೇರಿಸಲಾಗಿದೆ.

ಶಿಲ್ಪಕಲೆಗೆ "ದಿವಾ" ಎಂದು ಹೆಸರಿಡಲಾಗಿದ್ದು, 33 ಮೀಟರ್​ ವಿಸ್ತಾರವಾಗಿದೆ. ಅಗೆಯುವವರ ನೆರವಿನಿಂದ ಬೆಟ್ಟದ ಪಕ್ಕದಲ್ಲಿ ನಿರ್ಮಿಸಲಾಗಿದೆ. ಇದರ ಹಿಂದೆ ದೃಶ್ಯ ಕಲಾವಿದೆ ಜೂಲಿಯಾನ ನೋಟರಿ ಎಂಬುವರು ಕೈಚಳಕವಿದೆ.

ಶಿಲ್ಪಕಲೆಯೇನೋ ಉದ್ಘಾಟನೆಯಾಗಿದೆ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ಹಿಂದೆಂದು ನೋಡಿರದ ಅತ್ಯಂತ ಮೂರ್ಖ ವಿಷಯಗಳಲ್ಲಿ ಇದು ಒಂದು ಎಂದು ಫೇಸ್​ಬುಕ್​ ಬಳಕೆದಾರನೊಬ್ಬ ಅಸಮಾಧಾನ ಹೊರಹಾಕಿದ್ದಾನೆ.

ಮಕ್ಕಳಿಗೆ ಇದು ಎಷ್ಟು ಸೂಕ್ತ ಎಂಬುದನ್ನು ಯಾರಾದರೂ ಅರ್ಥ ಮಾಡಿಕೊಂಡಿದ್ದೀರಾ? ನನ್ನ ಮಗಳೊಂದಿಗೆ ಆ ಸ್ಥಳಕ್ಕೆ ಹೋದಾಗ ಅಪ್ಪ ಏನದು? ಎಂದು ಕೇಳಿದಾಗ ನಾನೆಂದು ಉತ್ತರಿಸಲಿ? ಎಂದು ಮತ್ತೋರ್ವ ನೆಟ್ಟಿಗ ಬೇಸರ ವ್ಯಕ್ತಪಡಿಸಿದ್ದಾರೆ. ನಿಮಗಿದು ಸರಿ ಎನಿಸಬಹುದು. ಆದರೆ, ಸಾರ್ವಜನಿಕ ಪ್ರದೇಶದಲ್ಲಿ ಇದನ್ನು ನಿರ್ಮಿಸಲು ಬಿಟ್ಟ ಸರ್ಕಾರದ ನಿರ್ಧಾರ ಅತ್ಯಂತ ಕೆಟ್ಟದ್ದು ಎಂದು ಜರಿದಿದ್ದಾರೆ.

ಇನ್ನು ಕೆಲವರು ಶಿಲ್ಪಕಗೆ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಇದೊಂದು ವಿಶೇಷ ಶಿಲ್ಪಕಲೆಯಾಗಿದೆ. ಈ ಕಲೆಯೊಂದಿಗೆ ಯೋಚಿಸಬೇಕಾದ ಅನೇಕ ವಿಷಯಗಳಿವೆ ಎಂದು ನೆಟ್ಟಿಗರೊಬ್ಬರು ತಿಳಿಸಿದ್ದಾರೆ. ನಿಜಕ್ಕೂ ಅದ್ಭುತ ಮತ್ತು ಸುಂದರ ಎಂದು ಇನ್ನೋರ್ವ ಹೇಳಿದರೆ, ಇದು ನನಗೆ ಇಷ್ಟವಾಯಿತು. ನಮ್ಮ ಗೌಪ್ಯ ಭಾಗವನ್ನು ಸುಂದರವಾಗಿ ಚಿತ್ರಿಸಿದ್ದೀರಿ, ಸ್ತ್ರೀವಾದ ಮತ್ತು ಅದರ ಸೂಕ್ಷ್ಮ ವ್ಯತ್ಯಾಸಗಳನ್ನು ತಿಳಿಸುವಂತಹ ಮತ್ತಷ್ಟು ಕೆಲಗಳನ್ನು ಎದುರು ನೋಡುತ್ತೇವೆ ಎಂದಿದ್ದಾರೆ.

ಇನ್ನು ತಮ್ಮ ಕಲೆಯ ಬಗ್ಗೆ ಮಾತನಾಡಿದ ಜೂಲಿಯಾನ ನೋಟರಿ, ದಿವಾ ಕಲೆಯ ಹಿಂದೆ ನಮ್ಮ ಪುರುಷ ಪ್ರಧಾನ ಮತ್ತು ಮಾನವಕೇಂದ್ರಿತ ಪಾಶ್ಚಿಮಾತ್ಯ ಸಮಾಜದಲ್ಲಿ ಪ್ರಕೃತಿ ಮತ್ತು ಸಂಸ್ಕೃತಿಯ ನಡುವಿನ ಸಂಬಂಧವನ್ನು ಪ್ರಶ್ನಿಸುವ ಮತ್ತು ಲಿಂಗದ ಸಮಸ್ಯೆಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕುವ ಉದ್ದೇಶವಿದೆ ಎಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net