

ಬೆಂಗಳೂರು: ಲಾಕ್ಡೌನ್ ಸಮಯದಲ್ಲಿ ಉದ್ಯೋಗ ಕೊಡಿಸುವ ಭರವಸೆ ನೀಡಿ ವಂಚಿಸಿದ್ದ ಮಹಿಳೆಯೊಬ್ಬಳನ್ನು ಇದೀಗ ಮೋಸ ಹೋದವರೇ ಹಿಡಿದು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಐಟಿ ಕಂಪನಿಗಳಿಗೆ ಕಾಫಿ-ಟೀ, ಊಟ ಸರಬರಾಜು ಮಾಡುವುದಾಗಿ ಹೇಳಿಕೊಂಡಿದ್ದ ಆಕೆ ನೂರಾರು ಜನರಿಗೆ ಸಾವಿರಾರು ರೂಪಾಯಿ ಮೋಸ ಮಾಡಿರುವುದಾಗಿ ಹೇಳಲಾಗಿದೆ.
ನಂದಿನಿ ಹೆಸರಿನ ಮಹಿಳೆಯನ್ನು ಇದೀಗ ಅಮೃತಹಳ್ಳಿ ಠಾಣೆಗೊಪ್ಪಿಸಲಾಗಿದೆ. ಈಕೆ ತಾನು ಐಟಿ ಕಂಪನಿಗಳಿಗೆ ಕಾಫಿ-ಟೀ, ಊಟ ಸರಬರಾಜು ಮಾಡುವುದಾಗಿ ಹೇಳಿಕೊಂಡಿದ್ದಳು. ಅದಕ್ಕೆಂದು ನೀವು ಕಾಫಿ ಟೀ ಮತ್ತು ಊಟ ಸಿದ್ಧಮಾಡಿಕೊಡಿ ಎಂದು ಕೆಂಪಾಪುರ ವ್ಯಾಪ್ತಿಯ ಅನೇಕ ಜನರಿಗೆ ಖಾಯಂ ಉದ್ಯೋಗದ ಭರವಸೆ ನೀಡಿದ್ದಳು. ಡೆಪಾಸಿಟ್ ಹಣವೆಂದು ಒಂದೊಂದು ಲಕ್ಷ ಹಣ ಕೊಡಿ ಎಂದು ಹೇಳಿ ವಸೂಲಿ ಮಾಡಿದ್ದಳು.
ನಂದಿನಿಯ ಆರ್ಡರ್ನಂತೆ ಜನರು ಕಾಫಿ, ಟೀ, ಊಟ ತಯಾರಿಸಿ ಕೊಡುತ್ತಿದ್ದರು. ಆರಂಭದಲ್ಲಿ ಕೆಲವರಿಗೆ ನಂದಿನಿ ಹಣ ಪಾವತಿಸಿದ್ದಳು. ಇತ್ತೀಚಿನ ದಿನಗಳಲ್ಲಿ ಹಣವನ್ನ ನೀಡದೇ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾಳೆ. ಈ ಕುರಿತಾಗಿ ಅನೇಕರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಫುಡ್ಡೂ ಹೋಯ್ತು, ದುಡ್ಡೂ ಹೋಯ್ತು ಎಂದು ದೂರು ನೀಡಿದ್ದರು. ಇದೀಗ ದೂರದಾರರೇ ಆರೋಪಿಯನ್ನು ಹುಡುಕಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.