ಬ್ಯಾಚಲರ್ ಹುಡುಗರಿದ್ದ ಮನೆಯಲ್ಲಿ ವಿವಾಹಿತೆಯ ಶವ!; ಕೆಲಸಕ್ಕೆಂದು ಹೋಗಿದ್ದವಳು ಅಲ್ಲೇಕೆ ಹೋದಳು?

Aruna
Published on

ಬೆಂಗಳೂರು: ಕೆಲಸಕ್ಕೆಂದು ಹೋಗಿದ್ದ ಮಹಿಳೆಯೊಬ್ಬಳು ಕಾಣೆಯಾಗಿದ್ದು, ಶವ ಪತ್ತೆಯಾಗಿದೆ. ಅದರಲ್ಲೂ ಇಬ್ಬರು ಬ್ಯಾಚಲರ್ ಹುಡುಗರಿದ್ದ ಮನೆಯಲ್ಲಿ ಆಕೆಯ ಶವ ಪತ್ತೆಯಾಗಿದ್ದು ಹಾಗೂ ಆ ಬಳಿಕ ಇಬ್ಬರು ಹುಡುಗರು ನಾಪತ್ತೆಯಾಗಿರುವುದು ಪ್ರಕರಣದ ಕುರಿತ ಕುತೂಹಲವನ್ನು ಕೆರಳಿಸಿದೆ. ಬೆಂಗಳೂರಿನ ದಾಸರಹಳ್ಳಿಯ ಅರುಣಾ ಕುಮಾರಿ (33) ಮೃತಪಟ್ಟಿರುವ ಮಹಿಳೆ. ಪ್ರಿಂಟಿಂಗ್ ಪ್ರೆಸ್​ ಒಂದರಲ್ಲಿ ಇವರು ಕೆಲಸ ಮಾಡುತ್ತಿದ್ದ ಈ ಮಹಿಳೆ, ಸೋಮವಾರ ಎಂದಿನಂತೆ ಕೆಲಸಕ್ಕೆ ಹೋಗಿದ್ದು, ವಾಪಸ್ ಬಂದಿರಲಿಲ್ಲ. ಕತ್ತಲಾದರೂ ಮಹಿಳೆ ಬರದ್ದರಿಂದ ಮಾಗಡಿ ರಸ್ತೆಯ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು.

ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೊಬೈಲ್​ ಫೋನ್​ ನೆಟ್​ವರ್ಕ್​ ಜಾಡು ಹಿಡಿದು ತನಿಖೆ ಆರಂಭಿಸಿದ್ದರು. ದಾಸರಹಳ್ಳಿಯ ಈ ಮಹಿಳೆ ಕಾಮಾಕ್ಷಿಪಾಳ್ಯದಲ್ಲಿ ಇರುವ ಕುರಿತು ಮೊಬೈಲ್ ಫೋನ್​ ಟವರ್ ಲೊಕೇಷನ್ ಸುಳಿವು ನೀಡಿತ್ತು. ಆ ಮೇರೆಗೆ ಮತ್ತಷ್ಟು ತೀವ್ರವಾಗಿ ತನಿಖೆ ಆರಂಭಿಸಿದ ಪೊಲೀಸರಿಗೆ ಆಕೆ ಕಾಮಾಕ್ಷಿಪಾಳ್ಯದ ರಂಗನಾಥಪುರದ ಮನೆಯಲ್ಲಿರುವ ಕುರಿತು ಸುಳಿವು ಸಿಕ್ಕಿತ್ತು.

ಪೊಲೀಸರು ಆ ಮನೆಗೆ ತೆರಳಿ ಪರಿಶೀಲಿಸಿದಾಗ ಮಹಿಳೆ ಅಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿರುವುದು ಬೆಳಕಿಗೆ ಬಂದಿತ್ತು. ವಿಶೇಷವೆಂದರೆ ಮಹಿಳೆ ಮೃತಪಟ್ಟ ಆ ಮನೆಯಲ್ಲಿ ಇಬ್ಬರು ಅವಿವಾಹಿತರಿದ್ದು, ಘಟನೆ ಬಳಿಕ ಅವರು ನಾಪತ್ತೆಯಾಗಿದ್ದಾರೆ. ಆ ಅವಿವಾಹಿತ ಯುವಕರು ಮಹಿಳೆಯನ್ನು ಪಾರ್ಟಿಗೆ ಆಹ್ವಾನಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಹೆಚ್ಚಿನ ತನಿಖೆಗಾಗಿ ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net