

ಹೈದರಾಬಾದ್: ಇಬ್ಬರು ಪಾನಮತ್ತ ಅಪ್ರಾಪ್ತ ಬಾಲಕರು ವಿಧವೆ ಮನೆಗೆ ನುಗ್ಗಿ ಆಕೆಯ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳನ್ನು ಅತ್ಯಾಚಾರ ಎಸಗಿರುವ ಘಟನೆ ಹೊಸ ವರ್ಷದಂದೇ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ತೆಲಂಗಾಣದ ನಗರ್ಕರ್ನೂಲ್ ಪಟ್ಟಣದ ಲಿಂಗಾಲ ಗ್ರಾಮದಲ್ಲಿ ಅಮಾನವೀಯ ಘಟನೆ ನಡೆದಿದೆ. ಅತ್ಯಾಚಾರ ಎಸಗಿದ ಬಾಲಕರು ತಮ್ಮ ಮೊಬೈಲ್ನಲ್ಲಿ ದುಷ್ಕೃತ್ಯವನ್ನು ಸೆರೆಹಿಡಿದು ಪೊಲೀಸರಿಗೆ ವಿಷಯ ತಿಳಿಸಿದರೆ ವಿಡಿಯೋವನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸುವ ಬೆದರಿಕೆ ಹಾಕಿದ್ದಾರೆ.
ಆರಂಭದಲ್ಲಿ ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರು ಹಿಂದೇಟು ಹಾಕಿದ್ದಾರೆ. ಆದರೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸತ್ಯವತಿ ರಾಥೋಡ್ ಮಧ್ಯ ಪ್ರವೇಶಿಸಿದ ನಂತರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಘಟನೆಯ ಸಂಪೂರ್ಣ ವರದಿಯನ್ನು ಸಲ್ಲಿಸಲು ಪೊಲೀಸರಿಗೆ ಸಚಿವೆ ಕೇಳಿದ್ದಾರೆ.
ಘಟನೆಯ ವಿವರಣೆಗೆ ಬರುವುದಾದರೆ ಜನವರಿ 1ರಂದು ದುಷ್ಕೃತ್ಯ ನಡೆದಿದ್ದು, ಸೋಮವಾರ ಘಟನೆ ಬೆಳಕಿಗೆ ಬಂದಿದೆ. ಹೊಸವರ್ಷ ಹಿನ್ನೆಲೆ ಕಂಠಪೂರ್ತಿ ಕುಡಿದಿದ್ದ ಬಾಲಕರು ವಿಧವೆಯ ಮನೆಗೆ ನುಗ್ಗಿ ಇಬ್ಬರು ಅಪ್ರಾಪ್ತರ ಬಾಲಕಿಯರನ್ನು ಅತ್ಯಾಚಾರ ಎಸಗಿದ್ದಾರೆ. ಇಡೀ ಘಟನೆಯನ್ನು ತಮ್ಮ ಮೊಬೈಲ್ನಲ್ಲಿ ಚಿತ್ರೀಕರಿಸಿದ್ದಾರೆ.
ಪೊಲೀಸರಿಗೆ ಹೇಳಿದ್ರೆ ವಿಡಿಯೋ ಬಹಿರಂಗಗೊಳಿಸುವುದಾಗಿ ಬೆದರಿಕೆ ಹಾಕಿದ್ದರಿಂದ ದೂರು ನೀಡಲು ಕುಟುಂಬ ಹೆದರಿತ್ತು. ಪಂಚಾಯಿತಿ ಮಟ್ಟದಲ್ಲೇ ಸಮಸ್ಯೆ ಬಗೆಹರಿಸಿಕೊಳ್ಳುವ ಮಾತುಕತೆ ನಡೆದಿತ್ತು. ಅಲ್ಲದೆ, ಗ್ರಾಮದಲ್ಲಿ ಈ ವಿಚಾರ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಕೊನೆಗೆ ಧೈರ್ಯ ಮಾಡಿದ ಕುಟುಂಬ ಠಾಣೆಗೆ ದೂರು ನೀಡಲು ತೆರಳಿದಾಗ ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರು ಹಿಂದೇಟು ಹಾಕಿದ್ದಾರೆ. ಆದರೆ, ಈ ವಿಚಾರ ಹೇಗೋ ಸಚಿವೆಯ ಗಮನಕ್ಕೆ ಬಂದ ಬಳಿಕ ಪೊಲೀಸರು ಪೊಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ.
ಮೊಬೈಲ್ನಲ್ಲಿ ರೆಕಾರ್ಡ್ ಮಾಡಿದ್ದ ವಿಡಿಯೋವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳಿಬ್ಬರನ್ನು ಬಾಲಾಪರಾಧಿ ನ್ಯಾಯ ಮಂಡಳಿ ಎದುರು ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)