More

    ಮೂರು ಮಕ್ಕಳ ತಂದೆಯ ಪ್ರೀತಿಗೆ ಬಿದ್ದು ಮದುವೆಯಾಗಲಾರದೇ ತೊಳಲಾಡುತ್ತಿದ್ದೇನೆ- ಪ್ಲೀಸ್​ ಪರಿಹಾರ ಹೇಳಿ

    ಮೂರು ಮಕ್ಕಳ ತಂದೆಯ ಪ್ರೀತಿಗೆ ಬಿದ್ದು ಮದುವೆಯಾಗಲಾರದೇ ತೊಳಲಾಡುತ್ತಿದ್ದೇನೆ- ಪ್ಲೀಸ್​ ಪರಿಹಾರ ಹೇಳಿನಾನು ಎಂ.ಎ ಓದುತ್ತಿರುವ ವಿದ್ಯಾರ್ಥಿನಿ. ನಮ್ಮ ತಂದೆ ತಾಯಿಗಳಿಗೆ ನಾನೊಬ್ಬಳೇ ಮಗಳು. ಅವರನ್ನು ಮುಂದೆ ನೋಡಿಕೊಳ್ಳಬೇಕಾದ ಗುರುತರ ಜವಾಬ್ದಾರಿಯೂ ನನ್ನ ಮೇಲಿದೆ. ಆದರೆ ನಾನೊಬ್ಬರನ್ನು ಪ್ರೀತಿಸುತ್ತಿದ್ದೇನೆ. ಆತನಿಗೆ ಮದುವೆಯಾಗಿ ಮೂರು ಮಕ್ಕಳಿದ್ದಾರೆ. ಅಲ್ಲದೇ ಅವರ ಜಾತಿಯು ಬೇರೆ.

    ಮೇಡಂ ನಾನವರನ್ನು ಬಿಟ್ಟು ಬದುಕಿರಲು ಸಾಧ್ಯವೇ ಇಲ್ಲ. ಆದರೆ ಮದುವೆಯಾಗಲೂ ಸಾಧ್ಯವಿಲ್ಲ. ಒಂದೊಂದು ಬಾರಿ ನಾವಿಬ್ಬರೂ ಸಾಯೋಣವೆಂದುಕೊಳ್ಳುತ್ತೇವೆ. ತಕ್ಷಣ ನನ್ನ ಹೆತ್ತವರ ಮುಖ ನೆನಪಿಗೆ ಬರುತ್ತದೆ. ಅವರಿಗೆ ತನ್ನ ಮಕ್ಕಳ ಮುಖ ನೆನಪಿಗೆ ಬಂದು, ಹೀಗೆ ಸಾಯಲೂ ಆಗದೇ, ಬದುಕಲೂ ಆಗದೇ ಅವರು ತೊಳಲಾಡುತ್ತಿದ್ದರೆ, ನಾನು ಅವರನ್ನು ಬಿಟ್ಟಿರಲಾಗದೇ ತೊಳಲಾಡುತ್ತಿದ್ದೇನೆ. ದಯವಿಟ್ಟು ಒಂದು ದಾರಿ ತೋರಿಸಿ ಮೇಡಂ.

    ಉತ್ತರ: ಇಂಥಾ ಸಮಸ್ಯೆ ಇರುವ ನೂರಾರು ಪತ್ರಗಳಿಗೆ ಇದುವರೆವಿಗೂ ವಿಧವಿಧವಾಗಿ ಉತ್ತರಿಸಿದ್ದೇನೆ. ನೀವು ಅದನ್ನು ಓದಿಯೂ ಇಂಥ ಪ್ರಶ್ನೆ ಕೇಳಿದರೆ, ಬೇರೆಯವರ ಸಮಸ್ಯೆಗಿಂತ ನನ್ನದೇ ಸಮಸ್ಯೆ ಬಹಳ ದೊಡ್ಡದು ಎಂದು ನೀವು ಭಾವಿಸಿದ್ದೀರಿ ಎನಿಸುತ್ತದೆ. ನೀವು ಒಂದು ಕ್ಷಣ ನಿಮ್ಮ ಸಮಸ್ಯೆಯನ್ನು ಮರೆತು `ಮದುವೆಯೆನ್ನುವ ಪವಿತ್ರ ಬಂಧನ’ದ ಬಗ್ಗೆ ಯೋಚಿಸಿ.

    . ಮದುವೆಯೆನ್ನುವುದು ಬರೀ ಎರಡು ಮನುಷ್ಯರ ನಡುವಿನ ವ್ಯವಹಾರವಲ್ಲ, ಎರಡು ಕುಟುಂಬಗಳ ಜೋಡಣೆ. ಮದುವೆಯ ಜತೆಯಲ್ಲಿ ಅದರ ವಿಸ್ತರಣೆಯ, (ಮನೆ, ಮಕ್ಕಳು, ಆರ್ಥಿಕ ಸುಸ್ಥಿತಿ ಇತ್ಯಾದಿ) ಜವಾಬ್ದಾರಿಯೂ ಆ ದಂಪತಿಯದ್ದೇ ಆಗಿರುತ್ತದೆ. ದಾಂಪತ್ಯದ ಹೊಣೆಗಾರಿಕೆ ಬರೀ ಮಕ್ಕಳ ಹುಟ್ಟು ಮಾತ್ರವಲ್ಲ, ಅವರನ್ನು ಸತ್ಪ್ರಜೆಗಳಾಗಿ ರೂಪಿಸುವುದೂ ಆ ಗಂಡಹೆಂಡಿರ ಕರ್ತವ್ಯವೇ ಆಗಿರುತ್ತದೆ. ಗಂಡಾಗಲೀ ಹೆಣ್ಣಾಗಲೀ ಈ ಕರ್ತವ್ಯಗಳಿಂದ ವಿಮುಖರಾದರೆ ಅವರಿಗೆ ಸಮಾಜದಲ್ಲಿ ಗೌರವವಿರುವುದಿಲ್ಲ. ಗಂಡ ಹೆಂಡತಿಯಲ್ಲಿ ಯಾವುದೇ ಸಮಸ್ಯೆಯುಂಟಾದರೂ ಗಂಡನ ಹೆತ್ತವರು ಅಥವಾ ಹೆಂಡತಿಯ ಹೆತ್ತವರು ಸಹಾಯಕ್ಕಾಗಿ ಧಾವಿಸುತ್ತಾರೆ. ಇದು ನಮ್ಮ ಸಮಾಜದಲ್ಲಿ ಬಹಳ ಗಾಢವಾಗಿರುವುದರಿಂದ ಪ್ರಪಂಚದಲ್ಲಿಯೇ `ಭಾರತದ ಕುಟುಂಬ’ ಗಳು ಮಾದರಿಯೆನಿಸಿವೆ.

    ಈ ಎಲ್ಲ ವಿಷಯಗಳನ್ನೂ ಹಿನ್ನೆಲೆಯಲ್ಲಿಟ್ಟುಕೊಂಡು ನಿಮ್ಮ ಸಮಸ್ಯೆಯನ್ನು ವಿಶ್ಲೇಷಣೆ ಮಾಡಿ. ಆ ನಿಮ್ಮ ಗೆಳೆಯ ದಾಂಪತ್ಯದ ಜವಾಬ್ದಾರಿಯಿಂದ ಪಲಾಯನ ಮಾಡುತ್ತಿರುವುದು ಸರಿಯೇ? ಮೂರು ಮಕ್ಕಳನ್ನು ಹೆತ್ತು ಲಾಲಿಸಿ ಪಾಲಿಸುತ್ತಿರುವ ತನ್ನ ಹೆಂಡತಿಗೆ ಆತ ಮೋಸ ಮಾಡುತ್ತಿಲ್ಲವೇ? ಒಂದು ವೇಳೆ ನಿಮಗೂ ಮದುವೆಯಾಗಿ ಮಕ್ಕಳೂ ಇದ್ದು ನೀವು ಮತ್ತೊಬ್ಬನೊಡನೆ ಅನುರಕ್ತೆಯಾಗುತ್ತಿದ್ದಿರಾ?
    . ಆತನ ಹೆಂಡತಿಯೂ `ನಾನು ಇನ್ನೊಬ್ಬನನ್ನು ಇಷ್ಟ ಪಡುತ್ತೇನೆ , ಮದುವೆಯಾಗುತ್ತೇನೆ’ ಎಂದರೆ ಈತ ಒಪ್ಪುತ್ತಾರೆಯೇ?

    ಪ್ರೌಢ ವಯಸ್ಕರಾಗಿದ್ದೀರಿ. ಮೂರು ಮಕ್ಕಳ ಅಪ್ಪ ಮದುವೆಗೆ ಯೋಗ್ಯನಲ್ಲ ಎನ್ನುವ ಸಾಮಾನ್ಯ ತಿಳಿವಳಿಕೆಯೂ ನಿಮಗೆ ಬೇಡವೇ? ಆ ಮಕ್ಕಳ ಅಪ್ಪನನ್ನು ಯಾಕೆ ಕಿತ್ತುಕೊಳ್ಳುತ್ತಿದ್ದೀರಿ? ಆ ಮಕ್ಕಳೇನು ನಿಮಗೆ ದ್ರೋಹ ಮಾಡಿವೆ? ಆ ಮಕ್ಕಳ ನಿಟ್ಟುಸಿರು ನಿಮ್ಮ ಬದುಕನ್ನು ಸುಡುವುದಿಲ್ಲವೇ? ಆತನ ಹೆಂಡತಿ ನಿಮಗೇನು ದ್ರೋಹ ಮಾಡಿದ್ದಾಳೆ? ಆಕೆಯ ಕಣ್ಣೀರು ನಿಮ್ಮ ಸುಖವನ್ನು ಕೊಚ್ಚಿಹಾಕುವುದಿಲ್ಲವೇ?

    ಜಗತ್ತು ಎಷ್ಟು ವಿಶಾಲವಾಗಿದೆ. ನಿಮಗೆ ಯೋಗ್ಯವರನೇ ಸಿಗುವುದಿಲ್ಲವೇ? ನಿಮ್ಮದು ನಿಜಕ್ಕೂ ಪ್ರೀತಿಯಲ್ಲ. ಆತನ ಲಂಪಟತನಕ್ಕೆ ನಿಮ್ಮ ಮುಗ್ಧ ಹೃದಯ ಪೆದ್ದುಪೆದ್ದಾಗಿ ಬಲಿಯಾಗುತ್ತಿದೆ ಅಷ್ಟೆ. ಈಗಲಾದರೂ ಎಚ್ಚೆತ್ತುಕೊಳ್ಳಿ. ಬರೀ ಭಾವಕೋಶವನ್ನು ಮಕ್ಕಳಂತೆ ಬಳಸಿ ಚಿಂತಿಸಬೇಡಿ. ನಿಮ್ಮಲ್ಲಿಯೇ ಬುದ್ಧಿಕೋಶವೂ ಇದೆ. ಅದನ್ನು ಬಳಸಿ ಇಂಥ ಉಪದ್ವಾಪಗಳಿಂದ ಮೊದಲು ಹೊರಬನ್ನಿ. ನಿಮ್ಮ ಹೆತ್ತವರು ತೋರಿಸಿದ ದಾರಿಯಲ್ಲಿ ತಲೆಯೆತ್ತಿ ಹೆಮ್ಮೆಯಿಂದ ನಡೆಯಿರಿ.

    ಡಾ.ಶಾಂತಾ ನಾಗರಾಜ್​ ಅವರ ಆಪ್ತ ಸಲಹೆಗಾಗಿ ಕ್ಲಿಕ್ಕಿಸಿ:

    https://www.vijayavani.net/category/%e0%b2%a8%e0%b2%82%e0%b2%a6%e0%b3%8a%e0%b2%82%e0%b2%a6%e0%b3%81-%e0%b2%95%e0%b2%a5%e0%b3%86/

    ವಯಸ್ಸಿದ್ದಾಗ ಬೇಡದ್ದೆಲ್ಲಾ ಮಾಡಿದೆ, ಈಗ ಪತ್ನಿ ಹತ್ತಿರ ಸೇರಿಸುತ್ತಿಲ್ಲ: ಸಾಯುವ ಮನಸ್ಸಾಗುತ್ತಿದೆ, ಏನು ಮಾಡಲಿ?

    ಬೇರೆ ಹೆಣ್ಣಿನತ್ತ ಕಣ್ಣೆತ್ತಿಯೂ ನೋಡಲ್ಲ, ಆದರೂ ಪತ್ನಿ ಒದೀತಾಳೆ, ಹೊಡೀತಾಳೆ… ಏನು ಮಾಡಲಿ?

    ಅಮ್ಮ ವಿವಾಹಿತನ ಜತೆ ಅನೈತಿಕ ಸಂಬಂಧ ಇರಿಸಿಕೊಂಡಿದ್ದಾಳೆ- ಭಾವಿ ಪತಿಗೆ ಹೇಗೆ ತಿಳಿಸಲಿ?

    ಯಾರನ್ನೇ ಮದ್ವೆಯಾದ್ರೂ ನನ್ನ ಜತೆ ಕೂಡಲೇಬೇಕು ಎಂದಿದ್ದೇನೆ- ಇದರಲ್ಲಿ ತಪ್ಪೇನಿದೆ ಮೇಡಂ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts