More

  ಮಳೆ ಅನಾಹುತ ತಡೆ ಜರೂರು

  ಕಿರುವಾರ ಎಸ್. ಸುದರ್ಶನ್ ಕೋಲಾರ
  ಜಿಲ್ಲೆಯಾದ್ಯಂತ ಮುಂಗಾರು ಪೂರ್ವದಲ್ಲೇ ಉತ್ತಮವಾಗಿ ಮಳೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಸುರಿಯುವ ಮಳೆಯಿಂದ ಸಂಭವಿಸುವ ಅನಾಹುತಗಳಿಂದ ಪಾರಾಗಲು ಈಗಲೇ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಬೇಕಾದ ಅಗತ್ಯವಿದೆ.

  ಮುಚ್ಚಿರುವ ರಾಜಕಾಲುವೆ, ಚರಂಡಿ ಸ್ವಚ್ಛಗೊಳಿಸಿ ಸರಾಗವಾಗಿ ನೀರು ಹರಿಯಲು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿಯಿಂದ ಮುಂದಾಗಬೇಕಿದೆ. ರಾಜಕಾಲುವೆ, ಚರಂಡಿಗಳಲ್ಲಿ ತ್ಯಾಜ್ಯ ತುಂಬಿರುವುದರಿಂದ ಹಿಂದಿನ ವರ್ಷವೂ ಮಳೆಗಾಲದಲ್ಲಿ ಸಾಕಷ್ಟು ಅನಾಹುತ ಸಂಭವಿಸಿದ್ದವು. ರೈಲ್ವೆ ಕೇಳ ಸೇತುವೆಗಳಲ್ಲಿ ನೀರು ಸಂಗ್ರಹವಾಗಿ, ಸಂಚಾರ ವ್ಯತ್ಯಯ, ಬೆಳೆಗಳ ಹಾನಿ, ರಸ್ತೆಯಲ್ಲಿ ತ್ಯಾಜ್ಯ ಸಂಗ್ರಹ, ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿ ಅನಾಹುತವೇ ಸೃಷ್ಟಿ, ಮನೆಗಳು ಧೆರೆಗುರುಳಿದ್ದು… ಹೀಗೆ ವಿವಿಧ ತೊಂದರೆ ಎದುರಾಗಿದ್ದವು. ಆದರೆ, ಈ ವರ್ಷವೂ ಚರಂಡಿ ಸೇರಿ ಸಮಸ್ಯೆ ಸೃಷ್ಟಿಯಾಗುವ ಪ್ರಮುಖ ಜಾಗಗಳಲ್ಲಿ ಯಾವುದೇ ಮುನ್ನೆಚ್ಚರಿಕೆ ಕೈಗೊಂಡಿಲ್ಲ.
  ಕೀಲುಕೋಟೆ, ಕಾರಂಜಿ ಕಟ್ಟೆ, ರಹಮತ್ ನಗರ, ಮಿಲ್ಲಥ್ ನಗರ, ಗಲ್‌ಪೇಟೆ, ಪಾಲಸಂದ್ರ ಬಡಾವಣೆಗಳಲ್ಲಿ ರಾಜಕಾಲುವೆ, ಚರಂಡಿಗಳಲ್ಲಿ ಕಸದ ರಾಶಿ ಬಿದಿದ್ದೆ. ಮಳೆ ತೀವ್ರಗೊಳ್ಳುವ ಮೊದಲೇ ಸ್ವಚ್ಛಗೊಳಿಸಿದರೆ ಮುಂದೆ ಸಂಭವಿಸುವ ಅನಾಹುತ ತಡೆಗಟ್ಟಬಹುದು.
  * ಕಾಮಗಾರಿ ಅಪೂರ್ಣ:
  ಅಂತರಗಂಗೆ ಬೆಟ್ಟದ ತಪ್ಪಲಿಂದ ಕೋಲಾರಮ್ಮ ಕೆರೆಗೆ ಹಾದು ಹೋಗಿರುವ ರಾಜಕಾಲುವೆಗೆ ಕಾಂಕ್ರೀಟ್ ಹಾಕಲಾಗಿದೆ. ಆದರೆ, ಕೀಲುಕೋಟೆ ಸಮೀಪ ಕಾಮಗಾರಿ ಅಪೂರ್ಣಗೊಂಡಿದ್ದು, ಮಳೆ ಬಂದರೆ ಬೆಟ್ಟದ ಮೇಲಿನ ನೀರು ಜಮೀನಿಗೆ ನುಗ್ಗುತ್ತದೆ.
  ಇತ್ತೀಚೆಗೆ ಸುರಿದ ಮಳೆಗೆ ಜಿಲ್ಲೆಯ ಜಂಗಮಬಸಾಪುರ, ಕೆಜಿಎಫ್, ಶ್ರೀನಿವಾಸಪುರ ತಾಲೂಕು ವ್ಯಾಪ್ತಿಯಲ್ಲಿ ತೋಟಗಾರಿಕೆ ಬೆಳೆಗಳಾದ ಪಪ್ಪಾಯ, ಕ್ಯಾಪ್ಸಿಕಂ, ಟೊಮ್ಯಾಟೊ, ಬಾಳೆ ಹಾಗೂ ಮಾವು ಬೆಳೆಗಳು ಹಾನಿಯಾಗಿದೆ.
  ಶನಿವಾರ ಕೋಲಾರ ಸಮೀಪದ ಮಲ್ಲಸಂದ್ರ ಗ್ರಾಮದ ಸುತ್ತಮುತ್ತಲು ಉತ್ತಮ ಮಳೆಯಾಗಿದ್ದು, ರಾಜಕಾಲುವೆಗಳಲ್ಲಿ ಗಿಡಗಂಟಿ ಬೆಳೆದಿರುವುದರಿಂದ ಮಳೆ ನೀರು ರೈತರ ತೋಟಗಳಿಗೆ ನುಗ್ಗಿದೆ. ದೊಮ್ಮರಹಳ್ಳಿ ಬಳಿಯ ಲೇಔಟ್ ನೀರು ಜಮೀನಿಗೆ ನುಗ್ಗಿ ಹೂವು, ಬೀನ್ಸ್ ಬೆಳೆಗಳಿಗೆ ಹಾನಿಯಾಗಿದೆ.
  ಲೇಔಟ್ ಮಾಲೀಕರು ನೀರನ್ನು ರಾಜಕಾಲುವೆಗೆ ಬಿಡದೆ ತೋಟಗಳ ಮೂಲಕ ಹಾದು ಹೋಗುವಂತೆ ಮಾಡಿರುವುದರಿಂದ ಸಮಸ್ಯೆಯಾಗಿದೆ. ಈ ಬಗ್ಗೆ ಲೇಔಟ್ ಮಾಲೀಕರನ್ನು ಕೇಳಿದರೆ ಸ್ಪಂದಿಸುತ್ತಿಲ್ಲ ಎಂದು ಮಲ್ಲಸಂದ್ರ ರೈತರು ದೂರಿದರು.

  • ರಾಜಕಾಲುವೆ ಒತ್ತುವರಿ ತೆರವು ಮಾಡಿ
   ಮುಂಗಾರು ಪೂರ್ವದಲ್ಲೇ ಜಿಲ್ಲೆಗೆ ಮಳೆ ಪ್ರವೇಶ ಮಾಡಿದ್ದು, ಮುಂದಿನ ದಿನಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. ಇದರಿಂದಾಗಿ ಸಣ್ಣ ನೀರಾವರಿ ಇಲಾಖೆ, ನಗರಸಭೆಯ ಅಽಕಾರಿಗಳು ಎಚ್ಚೆತ್ತು ಸ್ವಚ್ಛ ಕಾರ್ಯಕ್ಕೆ ಮುಂದಾಗಬೇಕು. ಒತ್ತುವರಿಯಾಗಿರುವ ರಾಜಕಾಲುವೆ ತೆರವುಗೊಳಿಸಿ ಪುನಶ್ಚೇತನಗೊಳಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.
  • ಕಸ ವಿಲೇವಾರಿ ಅಸಮರ್ಪಕ
   ನಗರದಲ್ಲಿ ಕಸ ವಿಲೇವಾರಿಯು ಅಸಮರ್ಪಕವಾಗಿದೆ. ನಿವಾಸಿಗಳು ಕಸವನ್ನು ಎಲ್ಲೆಂದರಲ್ಲಿ ಎಸೆದು ರಾಶಿ ಹಾಕುತ್ತಾರೆ. ಯುಜಿಡಿಗಳಲ್ಲಿ ತ್ಯಾಜ್ಯದಿಂದ ಮ್ಯಾನ್‌ಹೋಲ್‌ಗಳು ಕಟ್ಟಿಕೊಂಡು ಸಮಸ್ಯೆ ಸೃಷ್ಟಿಯಾಗುತ್ತಿದೆ. ಹೋಟೆಲ್, ಮಾಂಸದ ಅಂಗಡಿ ಮಾಲೀಕರು ರಾಜಕಾಲುವೆ, ಚರಂಡಿಗಳಿಗೆ ತ್ಯಾಜ್ಯ ಎಸೆಯುತ್ತಿದ್ದು, ಮಳೆ ಬಂದಾಗ ತ್ಯಾಜ್ಯ ರಸ್ತೆ ಮೇಲೆ ಹರಿಯುವುದರಿಂದ ದುರ್ವಾಸೆ ಹೆಚ್ಚಾಗುತ್ತದೆ, ಸೊಳ್ಳೆ ಉತ್ಪತ್ತಿ ಹೆಚ್ಚಾಗಿ ಸಾಂಕ್ರಾಮಿಗಳ ಭೀತಿಗೆ ಕಾರಣವಾಗಿದೆ.
  ಮಳೆ ಅನಾಹುತ ತಡೆ ಜರೂರು
  ತೊಂದರೆಯಾದ ಮೇಲೆ ಕ್ರಮ ಕೈಕೊಳ್ಳುವುದರಿಂದ ಪ್ರಯೋಜನವಾಗುವುದಿಲ್ಲ. ಕಳೆದ ಬಾರಿ ಮಳೆಯಿಂದ ಸಮಸ್ಯೆಯಾಗಿರುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಇದೆ. ಈಗಿನಿಂದಲೇ ಸುರಕ್ಷಾ ಕ್ರಮ ಕೈಗೊಳ್ಳುವುದರಿಂದ ಅನಾಹುತಗಳನ್ನು ತಪ್ಪಿಸಬಹುದು.
  – ನಳಿನಿಗೌಡ, ರೈತ ಸಂಘದ ಮಹಿಳಾ ಘಟದ ಜಿಲ್ಲಾಧ್ಯಕ್ಷೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts