ನೈಟ್​ ಶಿಫ್ಟ್​ ಎಂದು ಮನೆ ಬಿಡ್ತಿದ್ದ ಗಂಡನನ್ನು ಹಿಂಬಾಲಿಸಿದ ಪತ್ನಿಗೆ ಕಾದಿತ್ತು ಶಾಕ್: ನೊಂದು ಆತ್ಮಹತ್ಯೆಗೆ ಶರಣು! ​

Woman ends Life
Published on

ಬೆಂಗಳೂರು: ರಾತ್ರಿ ಪಾಳಿ ಕೆಲಸಕ್ಕೆಂದು ಮನೆ ಬಿಡುತ್ತಿದ್ದ ಗಂಡನ ಮೇಲೆ ಅನುಮಾನಗೊಂಡು ಒಂದು ದಿನ ಹಿಂಬಾಲಿಸಿದ ಪತ್ನಿಗೆ ಅಕ್ಷರಶಃ ಆಘಾತ ಕಾದಿತ್ತು. ಕಚೇರಿಗೆ ಹೋಗದೆ ಅಪರಿಚಿತ ಮನೆ ಮುಂದೆ ಬೈಕ್​ ನಿಲ್ಲಿಸಿದ ಆತನನ್ನು ಬೆನ್ನತ್ತಿದ ಪತ್ನಿಗೆ ಗಂಡನ ಇನ್ನೊಂದು ಮುಖ ದರ್ಶನವಾಗಿ, ಅದನ್ನು ಸಹಿಸದೇ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಅಭಿಲಾಷ ಮೃತ ದುರ್ದೈವಿ. ಪ್ರೀತಿಸಿ ಮದುವೆಯಾದ ಮೂರೇ ತಿಂಗಳಲ್ಲಿ ತನ್ನ ನಿರ್ಮಲ ಪ್ರೀತಿಗೆ ದ್ರೋಹವಾಗಿದ್ದನ್ನು ಸಹಿಸದೇ ಅಭಿಲಾಷ ಆತ್ಮಹತ್ಯೆ ಹಾದಿಯನ್ನು ಹಿಡಿದಿದ್ದಾಳೆ.

ಘಟನೆಯ ವಿವರಣೆಗೆ ಬರುವುದಾದರೆ, ಶಶಿಕುಮಾರ್-ಅಭಿಲಾಷ ಪ್ರೇಮ ವಿವಾಹವಾಗಿ ನಗರದ ಶ್ರೀರಾಂಪುರದಲ್ಲಿ ವಾಸವಿದ್ದರು. ಪತಿಯ ಮೇಲೆ ಅಭಿಲಾಷಗೆ ತುಂಬಾ ನಂಬಿಕೆ ಇತ್ತು. ಆದರೆ, ಕೆಲವು ದಿನಗಳ ಬಳಿಕ ರಾತ್ರಿ ಪಾಳಿಯ ಕೆಲಸವೆಂದು ಹೇಳಿ, 8 ಗಂಟೆಯಾದ್ರೆ ಸಾಕು ಬಾಸ್ ಬೈಯುತ್ತಾರೆ ಟೈ ಆಯ್ತು ಎಂದು ಹೇಳಿ ಅರ್ಜೆಂಟ್ ಆಗಿ ಮನೆ ಬಿಡುತ್ತಿದ್ದ.

ಗಂಡನ ಈ ನಡೆ ಅಭಿಲಾಷಗೆ ಅನುಮಾನ ಮೂಡುವಂತೆ ಮಾಡಿತು. ಸರಿ ಸಂಶಯವನ್ನು ಬಗೆಹರಿಸಿಕೊಂಡುಬಿಡೋಣ ಎಂಬ ನಿರ್ಧಾರಕ್ಕೆ ಬಂದ ಅಭಿಲಾಷ, ಒಂದು ದಿನ ಪತಿಯನ್ನು ಹಿಂಬಾಲಿಸಿದಳು. ಈ ವೇಳೆ ಪತಿ ಅಪರಿಚಿತರ ಮನೆ ಮುಂದೆ ಬೈಕ್ ನಿಲ್ಲಿಸುವುದನ್ನು ನೋಡಿ ಅಭಿಲಾಷ ಶಾಕ್ ಆಗಿದ್ದಾಳೆ. ಮನೆ ಯಾರದಿರಬಹುದೆಂದು ನೋಡಲು ಹೋದಾಗ ಮತ್ತೊಬ್ಬ ಮಹಿಳೆಯೊಂದಿಗೆ ಪತಿ ಇರುವುದನ್ನು ನೋಡಿ ಅಭಿಲಾಷಗೆ ಹೃದಯ ಬಿರಿದಂತಾಗಿದೆ.

ಇದಕ್ಕೂ ಮುನ್ನ ಬಾಗಿಲು ಬಡಿದಿದ್ದನ್ನು ಕೇಳಿ ಶಶಿಕುಮಾರ್​ ಮಂಚದ ಕೆಳಗೆ ಅವಿತುಕೊಂಡಿದ್ದ. ಬಳಿಕ ಎಲ್ಲವೂ ಬಹಿರಂಗವಾದ ಬೆನ್ನಲ್ಲೇ ಆತನನ್ನು ಪ್ರಶ್ನಿಸಿದ್ದಕ್ಕೆ ಸ್ಥಳದಲ್ಲಿಯೇ ಪತ್ನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಇದರಿಂದ ತುಂಬಾ ಮನನೊಂದು ಅಭಿಲಾಷ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಆತ್ಮಹತ್ಯೆಗೂ ಮುನ್ನ ತನ್ನ ತಂಗಿಗೆ ಅಭಿಲಾಷ ಕರೆ ಮಾಡಿ ಕಣ್ಣೀರಿಟ್ಟಿದ್ದಾಳೆ. ಕಳೆದ ಭಾನುವಾರ ರಾತ್ರಿ ಅಭಿಲಾಷ ಮೃತಪಟ್ಟಿದ್ದು, ಮೃತಳ ಪಾಲಕರು ಶಶಿಕುಮಾರ್ ಹಾಗೂ ಕುಟುಂಬಸ್ಥರ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ. ಈ ಸಂಬಂಧ ಶ್ರೀರಾಂಪುರ‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net