

ನವದೆಹಲಿ: ಇಲ್ಲೊಬ್ಬ ಕಳ್ಳ ಲಕ್ಷಗಟ್ಟಲೆ ಹಣವನ್ನು ಲಪಟಾಯಿಸಿ ಏನೂ ಆಗದವನಂತೆ ಇದ್ದೂ ಕೊನೆಗೆ ಬರೀ ಸ್ಲಿಪ್ಪರ್ ಕಾರಣದಿಂದಾಗಿ ಸಿಕ್ಕಿಬಿದ್ದಿದ್ದಾನೆ. ಈ ಮೂಲಕ 22.13 ಲಕ್ಷ ರೂ. ಕಳ್ಳತನ ಪ್ರಕರಣವೊಂದರ ರಹಸ್ಯ ಬಯಲಾಗಿದೆ.
ಲಖನೌದ ಕೃಷ್ಣನಗರ ಎಂಬಲ್ಲಿನ ಶಾಪಿಂಗ್ ಮಾರ್ಟ್ವೊಂದರ ಕ್ಯಾಶ್ ರೂಮ್ನ ಲಾಕರ್ನಿಂದ 22.13 ಲಕ್ಷ ರೂ. ಕಳವಾಗಿತ್ತು. ಈ ಕುರಿತು ಹಿರಿಯ ಮ್ಯಾನೇಜರ್ಗಳು ಪೊಲೀಸರಿಗೆ ದೂರು ನೀಡಿದ್ದರು. ತನಿಖೆಗಿಳಿದ ಪೊಲೀಸರಿಗೆ ಆರಂಭದಲ್ಲಿ ಈ ಪ್ರಕರಣ ಕಗ್ಗಂಟಾಗಿದ್ದರೂ ಕೊನೆಯಲ್ಲಿ ಅಚ್ಚರಿ ಎಂಬ ರೀತಿಯಲ್ಲಿ ಬಗೆಹರಿದಿದೆ.
ತನಿಖೆ ಆರಂಭಿಸಿದ ಪೊಲೀಸರು ಕ್ಯಾಶ್ ರೂಮ್ಗೆ ಪ್ರವೇಶ ಇರುವ 36 ಉದ್ಯೋಗಿಗಳ ಪೈಕಿ ಒಬ್ಬನನ್ನು ಹೊರತುಪಡಿಸಿ ಉಳಿದೆಲ್ಲರನ್ನೂ ಎದುರಿಗೆ ಕರೆಸಿ ವಿಚಾರಣೆ ನಡೆಸಿದ್ದರು. ಆದರೆ ಘಟನೆ ನಡೆದ ದಿನ ಅಂದರೆ ಜುಲೈ 10ರಂದು ಇನ್ನೊಬ್ಬ ಉದ್ಯೋಗಿ ವೀರ್ ಶಂಕರ್ ರಜೆಯಲ್ಲಿದ್ದ ಕಾರಣ ಆತನನನ್ನು ವಿಚಾರಣೆಯಿಂದ ಹೊರಗಿಡಲಾಗಿತ್ತು.
ಹೀಗೆ ಆ ದಿನ ಕೆಲಸದ ಮೇಲಿದ್ದ ಎಲ್ಲ ಉದ್ಯೋಗಿಗಳನ್ನು ವಿಚಾರಣೆಗೆ ಒಳಪಡಿಸಿದ್ದರೂ ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಮತ್ತೊಂದೆಡೆ ಲಾಕರ್ ಕೀಗಳ ಪೈಕಿ ಒಂದು ಡೂಪ್ಲಿಕೇಟ್ ಕೀ ಜೂ. 29ರಿಂದ ಕಾಣೆಯಾಗಿರುವುದು ಗೊತ್ತಾಗಿತ್ತು. ಇದಾದ ಮೇಲೆ ಪ್ರಕರಣ ಇನ್ನಷ್ಟು ಸಂಕೀರ್ಣ ಎನಿಸಿತ್ತು. ಮುಂದೇನು ಎಂದು ಗೊತ್ತಾಗದ ಪೊಲೀಸರು ನಿಮಗೆ ಯಾರ ಮೇಲಾದರೂ ಅನುಮಾನ ಇದೆಯೇ ಎಂದು ನಂತರದ ವಿಚಾರಣೆಯಲ್ಲಿ ಉದ್ಯೋಗಿಗಳನ್ನು ಕೇಳಿದ್ದರು.
ಆಗ ಫ್ಲೋರ್ ಮ್ಯಾನೇಜರ್ ದಿಲೀಪ್ ಎಂಬಾತನತ್ತ ಕೆಲವರು ಬೊಟ್ಟು ಮಾಡಿ ತೋರಿದ್ದರು. ಆದರೆ ಆತನ ಮೇಲೆ ಅನುಮಾನ ಪಡುವಂಥ ಯಾವುದೇ ಅಂಶಗಳು ಕಂಡುಬಂದಿಲ್ಲ. ನಂತರ ದಿಲೀಪ್ ಮೇಲೆ ಅನುಮಾನ ಪಡಲು ಕಾರಣ ಏನು ಎಂಬುದನ್ನು ಕೇಳಿದಾಗ ಅಂಥದ್ದೊಂದು ಅನುಮಾನ ಮೂಡುವಂಥ ಹೇಳಿಕೆಗಳನ್ನು ವೀರ್ ಶಂಕರ್ ಹಬ್ಬಿಸಿದ್ದ ಎಂಬುದು ತಿಳಿದುಬಂದಿತ್ತು. ಅದಾಗ್ಯೂ ವೀರ್ ಶಂಕರ್ ಮೇಲೆ ಅಂಥ ಅನುಮಾನ ಮೂಡಿರಲಿಲ್ಲ.
ಈ ಮಧ್ಯೆ ಪೊಲೀಸರ ಇನ್ನೊಂದು ತಂಡ ಸಿಸಿಟಿವಿ ಕ್ಲಿಪ್ಪಿಂಗ್ಗಳನ್ನು ಪರಿಶೀಲಿಸುತ್ತಿದ್ದಾಗ ಒಬ್ಬಳು ಮಹಿಳೆ ಶಾಪಿಂಗ್ ಮಾರ್ಟ್ಗೆ ಬಂದು ಅನುಮಾನಾಸ್ಪದವಾಗಿ ಅಡ್ಡಾಡುತ್ತಿದ್ದುದು ಕಂಡುಬಂದಿತ್ತು. ಉದ್ದ ಕೂದಲಿನ ಆಕೆ ಜೀನ್ಸ್ ಧರಿಸಿದ್ದು, ದುಪ್ಪಟ್ಟು ತೊಟ್ಟು, ಕೂಲಿಂಗ್ ಗ್ಲಾಸ್ ಹಾಕಿಕೊಂಡಿದ್ದಳು. ಆಕೆಯನ್ನು ಸಿಸಿಟಿವಿ ಕ್ಲಿಪ್ಪಿಂಗ್ನಲ್ಲಿ ಇನ್ನಷ್ಟು ಸೂಕ್ಷ್ಮವಾಗಿ ಪರಿಶೀಲಿಸಿದ ಪೊಲೀಸರಿಗೆ ಆಕೆ ಪುರುಷರು ಧರಿಸುವಂಥ ಸ್ಲಿಪ್ಪರ್ ಹಾಕಿಕೊಂಡಿರುವುದು ಕಂಡುಬಂದಿತ್ತು. ಆಗ ಪೊಲೀಸರು ಮತ್ತೆ ಎಲ್ಲ ಉದ್ಯೋಗಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ವೀರ್ ಶಂಕರ್ ಆ ಥರದ ಸ್ಲಿಪ್ಪರ್ ಧರಿಸುತ್ತಿದ್ದ ಎಂಬುದು ತಿಳಿದುಬಂದಿತ್ತು.
ಇದನ್ನೂ ಓದಿ: ಸ್ಲೀಪ್ ಡೈವೋರ್ಸ್: ಇದು ಗಂಡ-ಹೆಂಡಿರ ಹೊಸ ಟ್ರೆಂಡ್!
ಬಳಿಕ ಪೊಲೀಸರು ವೀರ್ ಶಂಕರ್ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದರು. ಆಗ ಆತ ಜೂನ್ 29ರಂದು ಲಾಕರ್ನ ಡೂಪ್ಲಿಕೇಟ್ ಕೀ ಕದ್ದಿದ್ದನ್ನು ಹೇಳಿಕೊಂಡ. ನಂತರ ಜುಲೈ 9ರಂದು ಅನಾರೋಗ್ಯ ಎಂದು ಹೇಳಿ ಹೋಗಿದ್ದನ್ನೂ ತಿಳಿಸಿದ. ಅದಾದ ಮೇಲೆ ಜುಲೈ 10ರಂದು ವಿಗ್ ಹಾಕಿಕೊಂಡು ಮಹಿಳೆಯಂತೆ ಕಾಣಿಸುವ ಉಡುಪು ಧರಿಸಿ ಮಾರ್ಟ್ಗೆ ಬಂದಿದ್ದನ್ನು ಕೂಡ ಹೇಳಿದ. ನಂತರ ಯಾರೂ ಇಲ್ಲದ ಸಮಯ ನೋಡಿ ಕ್ಯಾಶ್ ರೂಮ್ಗೆ ತೆರಳಿ, 22 ಲಕ್ಷ ನಗದು ಲಪಟಾಯಿಸಿದ್ದನ್ನು, ಐದು ವರ್ಷಗಳಿಂದ ಕೆಲಸ ಮಾಡುತ್ತಿದ್ದರಿಂದ ಅಲ್ಲಿನ ಭದ್ರತೆ ಹಾಗೂ ವ್ಯವಸ್ಥೆ ಕುರಿತು ತಿಳಿದು ಕಳವು ಮಾಡಿದ್ದನ್ನು ಒಪ್ಪಿಕೊಂಡು, ಕೊನೆಗೂ ಸಿಕ್ಕಿಬಿದ್ದಿದ್ದಾನೆ. -ಏಜೆನ್ಸೀಸ್