

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಭರ್ಜರಿ ಸಿದ್ಧತೆ ಮಾಡಿಕೊಂಡಿರುವ ಕಾಂಗ್ರೆಸ್, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಡಿ.ಕೆ.ಸುರೇಶ್ರನ್ನು ಅಖಾಡಕ್ಕೆ ಇಳಿಸಿದ್ದು, ಇಂದು ಅವರ ನಾಮಪತ್ರ ಸಲ್ಲಿಕೆ ಮುನ್ನ ಆಯೋಜಿಸಿದ್ದ ಬೃಹತ್ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಡಿಕೆಸು ಗೆಲುವು ಖಚಿತ ಎಂದು ಹೇಳಿದರು.
"ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಡಿ.ಕೆ. ಸುರೇಶ್ ಅವರು ನೂರಕ್ಕೆ ನೂರು ಈ ಬಾರಿಯೂ ಗೆಲ್ತಾರೆ. ಪ್ರತಿನಿತ್ಯ ನನಗೆ ಮಾಹಿತಿ ಬರುತ್ತಿದೆ. ಈ ಆಧಾರದಲ್ಲಿ ಹೇಳುವುದಾದರೆ ಸುರೇಶ್ ಅವರ ಗೆಲುವು ಶತಸಿದ್ಧ. ಡಿ.ಕೆ.ಸು ಕ್ಷೇತ್ರದ ಅಭಿವೃದ್ಧಿಗೆ ಮತ್ತು ಜಿಲ್ಲೆಯ ಪ್ರಗತಿಗೆ ನಿರಂತರವಾಗಿ ದುಡಿಯುತ್ತಾರೆ. ಈ ಕಾರಣಕ್ಕೆ ಕಾಂಗ್ರೆಸ್ ಮತ್ತೆ ಇವರನ್ನು ಅಭ್ಯರ್ಥಿಯನ್ನಾಗಿಸಿದೆ. ಇವರನ್ನು ನಿಮ್ಮ ಪ್ರತಿನಿಧಿಯಾಗಿ ಗೆಲ್ಲಿಸಿ ದೆಹಲಿಗೆ ಕಳುಹಿಸಿದರೆ, ನಿಮ್ಮ ದ್ವನಿಯಾಗಿ ಇವರು ಕೆಲಸ ಮಾಡುತ್ತಾರೆ" ಎಂದು ಸಿಎಂ ಭರವಸೆ ನೀಡಿದರು.
"ಸರ್ಕಾರ ಬಂದ ದಿನದಿಂದಲೇ ನಾವು ಕೊಟ್ಟ ಮಾತನ್ನು ಈಡೇರಿಸುವ ಕೆಲಸ ಶುರು ಮಾಡಿದೆವು. 8 ತಿಂಗಳಲ್ಲಿ ಐದು ಗ್ಯಾರಂಟಿ ಜಾರಿ ಮಾಡಿದ್ದೇವೆ. ಬಿಜೆಪಿ ಇವತ್ತಿನವರೆಗೂ ಕೊಟ್ಟ ಮಾತಿನಲ್ಲಿ ಒಂದನ್ನೂ ಈಡೇರಿಸಿಲ್ಲ. ಹೀಗಾಗಿ ಬಿಜೆಪಿಗೆ ಮತ ಹಾಕಿದರೆ ಏನು ಪ್ರಯೋಜನ ಎಂದು ಪ್ರಶ್ನಿಸಿಕೊಳ್ಳಿ. ಬಿಜೆಪಿ ಸರ್ಕಾರ ಇದ್ದಾಗಲೂ ನೀವು ತೆರಿಗೆ ಕಟ್ಟಿದ್ದೀರಿ. ಆದರೆ ಬಿಜೆಪಿ ನಿಮ್ಮ ತೆರಿಗೆ ಹಣವನ್ನು ನಿಮಗಾಗಿ ಖರ್ಚು ಮಾಡಲಿಲ್ಲ" ಎಂದರು.
"ಡೀಸೆಲ್, ಪೆಟ್ರೋಲ್, ಗ್ಯಾಸ್, ರಸಗೊಬ್ಬರ ಬೆಲೆಯನ್ನು ವಿಪರೀತ ಹೆಚ್ಚಿಸಿದರು. ಆದರೆ ನಾವು ಪ್ರತೀ ತಿಂಗಳು 4ರಿಂದ 5 ಸಾವಿರ ರೂಪಾಯಿಯನ್ನು ಪ್ರತಿ ಅರ್ಹ ಕುಟುಂಬಗಳಿಗೆ ನೀಡುತ್ತಿದ್ದೇವೆ. ಕಾಂಗ್ರೆಸ್ ಅಂದರೆ ಬಡವರ, ಮಧ್ಯಮ ವರ್ಗದವರ ಪರವಾಗಿ ಕೆಲಸ ಮಾಡುವ ಪಕ್ಷ. ಈ ಎಲ್ಲಾ ಕಾರಣಗಳಿಂದ ಜನರ ನಡುವೆ ನಿಂತು ಜನರ ದಿನನಿತ್ಯದ ಕಷ್ಟ ಸುಖಗಳಿಗೆ ಸ್ಪಂದಿಸುವ ಡಿ.ಕೆ.ಸುರೇಶ್ ಬೇಕೋ? ಅಥವಾ ವೈಟ್ ಕಾಲರ್ ಡಾ. ಮಂಜುನಾಥ್ ಬೇಕೋ? ಎನ್ನುವುದನ್ನು ಕ್ಷೇತ್ರದ ಮತದಾರರು ನಿರ್ಧರಿಸಿಯಾಗಿದೆ. ಡಿ.ಕೆ.ಸು ಅವರನ್ನು ಜನ ಗೆಲ್ಲಿಸಲು ತೀರ್ಮಾನಿಸಿದ್ದಾರೆ" ಎಂದು ಭರವಸೆಯ ಮಾತುಗಳನ್ನು ಆಡಿದರು.