ಬಾಕ್ಸ್​ ಆಫೀಸ್​ನಲ್ಲಿ ದಿಢೀರ್ ​​ಕುಸಿತ ಕಂಡ ರಣದೀಪ್ ಸಿನಿಮಾ! 2 ದಿನಗಳಲ್ಲಿ ಬದಲಾಯ್ತು ಲೆಕ್ಕಾಚಾರ? ಹೀಗಿದೆ ವರದಿ

WhatsApp Image 2024-03-28 at 1.59.29 PM
Published on

ನವದೆಹಲಿ: ಬಾಲಿವುಡ್​ ನಟ ರಣದೀಪ್ ಹೂಡ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೆಂಡಿಂಗ್​ನಲ್ಲಿರುವ ಸ್ಟಾರ್​ ಹೀರೋ. ಸಿನಿಮಾಗಾಗಿ ದೇಹದ ತೂಕದಲ್ಲಿ ಭಾರೀ ಬದಲಾವಣೆ ತಂದುಕೊಂಡ ರಣದೀಪ್, ಚಿತ್ರ ವೀಕ್ಷಿಸುವ ಪ್ರೇಕ್ಷಕರಿಗೆ ಒಳ್ಳೆಯ ದೃಶ್ಯವನ್ನು ಕಟ್ಟಿಕೊಡಬೇಕು ಎಂಬ ನಿಟ್ಟಿನಲ್ಲಿ ಹೆಚ್ಚು ಶ್ರಮಿಸಿ, ತಾವೇ ನಿರ್ದೇಶನ ಮಾಡಿ ಇದೀಗ ಸಿನಿಪ್ರೇಕ್ಷಕರಿಂದ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವೀರ್ ಸಾವರ್ಕರ್ ಅವರ ಜೀವನಗಾಥೆಯನ್ನು 'ಸ್ವತಂತ್ರ್ಯ ವೀರ ಸಾವರ್ಕರ್' ಎಂಬ ಶೀರ್ಷಿಕೆಯಡಿ ಸಿನಿಮಾ ಮಾಡಿದ ರಣದೀಪ್ ಹೂಡಾ, ಇದೀಗ ಚಿತ್ರ ಗಳಿಸುತ್ತಿರುವ ಯಶಸ್ಸಿಗೆ ಸಂತಸಪಟ್ಟಿದ್ದಾರೆ. ಚಿತ್ರ ರಿಲೀಸ್ ಆದ ಮೊದಲ ದಿನದಿಂದಲೂ ಬಾಕ್ಸ್​ ಆಫೀಸ್​ನಲ್ಲಿ ಉತ್ತಮ ಕಲೆಕ್ಷನ್​ನೊಂದಿಗೆ ಓಟವನ್ನು ಆರಂಭಿಸಿದ್ದೇ ಆದರೂ ಕಳೆದ ಎರಡು ದಿನಗಳಲ್ಲಿ ಭಾರೀ ಕುಸಿತ ಕಂಡಿದೆ. ಇದು ಚಿತ್ರತಂಡಕ್ಕೆ ಹಾಗೂ ಪ್ರೇಕ್ಷಕರ ವರ್ಗಕ್ಕೂ ಅಚ್ಚರಿ ಮೂಡಿಸಿದೆ.

ವಾರಾಂತ್ಯದಲ್ಲಿ ಚಿತ್ರವು ಬಾಕ್ಸ್ ಆಫೀಸ್​ನಲ್ಲಿ ಸ್ಥಿರವಾದ ಓಟ ಕಂಡಿತು. ಆದರೆ, ಈಗ ಸತತ ಎರಡು ದಿನಗಳಿಂದ ಕುಸಿತಕ್ಕೆ ಸಾಕ್ಷಿಯಾಗಿದೆ. ಮಾ. 25ರ ಸೋಮವಾರದಂದು ಹೋಳಿ ಹಬ್ಬವಾದ ಹಿನ್ನೆಲೆ ಚಿತ್ರ ಮಿಂಚಿನ ಓಟದಿಂದ ಹಿಂದೆ ಸರಿದಿದೆ. ಕೇವಲ 1.05 ಕೋಟಿ ರೂ.ಗಳನ್ನು ಮಾತ್ರ ಗಳಿಸಿದೆ. ಶನಿವಾರದಂದು (ಮಾ.23) 100%ಕ್ಕಿಂತ ಹೆಚ್ಚು, 2.25 ಕೋಟಿ ಸಂಗ್ರಹಿಸಿದೆ ಮತ್ತು ಭಾನುವಾರದಂದು (ಮಾ.24) 2.70 ಕೋಟಿ ರೂ. ಗಳಿಸಿದೆ. ಆದರೆ, ಸೋಮವಾರ ರಜೆಯ ಹಿನ್ನೆಲೆ ಚಿತ್ರವು 2. 15 ಕೋಟಿ ರೂ. ಕಲೆಕ್ಷನ್ ಮಾಡುವಲ್ಲಿ ಶಕ್ತವಾಗಿದೆ.

ಇನ್ನು ಮಂಗಳವಾರದ ಬಳಿಕ ಚಿತ್ರವು ಕೇವಲ 1.05 ಕೋಟಿ ರೂ. ಸಂಗ್ರಹಿಸಿದ್ದು, ಗಳಿಕೆಯಲ್ಲಿ 51%ರಷ್ಟು ಕುಸಿದಿದೆ. ಬುಧವಾರ, ಮೊದಲ ಬಾರಿಗೆ ಚಿತ್ರದ ಕಲೆಕ್ಷನ್ ಒಂದು ಕೋಟಿ ರೂ.ಗಿಂತ ಕಡಿಮೆಯಾಗಿದೆ. ವರದಿ ಪ್ರಕಾರ, ಇದು ಮುಂದುವರಿದರೆ, ಚಿತ್ರಕ್ಕೆ ಕೊಂಚ ಹೊಡೆತ ಬೀಳಲಿದೆ. ಇದರ ಹಿಂದೆಯೇ ಕರೀನಾ ಕಪೂರ್, ಕೃತಿ ಸನನ್, ಟಬು ಅಭಿನಯದ 'ಕ್ರ್ಯೂ' ಸಿನಿಮಾ ಬಹುತೇಕ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ. ಇದು ಬಾಕ್ಸ್​ ಆಫೀಸ್​ನಲ್ಲಿ ಭಾರೀ ನಿರೀಕ್ಷೆ ಮೂಡಿಸಿದ್ದು, ರಣದೀಪ್ ಚಿತ್ರಕ್ಕೆ ಭಾರೀ ಪೈಪೋಟಿ ಕೊಡುವ ಸಾಧ್ಯತೆಗಳಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net