ಸಾಕ್ಷರತೆ, ಆರೋಗ್ಯ ಸೂಚ್ಯಂಕ ಎರಡರಲ್ಲೂ ದಕ್ಷಿಣಕನ್ನಡ-ಉಡುಪಿ ಹಿಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಸಿಎಂ

siddu
Published on

ಮಂಗಳೂರು: ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ಇಂದು ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಜಿಲ್ಲೆಗಳು ಹಿಂದುಳಿದಿವೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಮಂಗಳೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಗತಿ ಪರಿಶೀಲನೆ ಸಭೆ ನಡೆಸಿ, ದಕ್ಷಿಣ ಕನ್ನಡ ಜಿಲ್ಲೆ ಸಾಕ್ಷರತೆಯಲ್ಲಿ ಹಿಂದಕ್ಕೆ ಹೋಗ್ತಿದೆ ಯಾಕೆ? ಎಂದು ಪ್ರಶ್ನಿಸಿದರು. 2017ರಲ್ಲಿ ಸಾಕ್ಷರತೆ ಪ್ರಮಾಣ ದಕ್ಷಿಣಕನ್ನಡ ಎರಡನೇ ಸ್ಥಾನದಲ್ಲಿತ್ತು, 2020ರಲ್ಲಿ 15ನೇ ಸ್ಥಾನ, 2023ರಲ್ಲಿ 17ನೇ ಸ್ಥಾನಕ್ಕೆ ಹೋಗಿದೆ. ಸಾಕ್ಷರತೆಯಲ್ಲಿ ಮುಂದಿದ್ದ ದಕ್ಷಿಣಕನ್ನಡ, ಉಡುಪಿ ಜಿಲ್ಲೆಯಲ್ಲಿ ಇಂಥ ಸ್ಥಿತಿಯಾಗಿದ್ದು ಯಾಕೆ? ಎಂದರು.

ಸಾಕ್ಷರತೆ, ಆರೋಗ್ಯ ಸೂಚ್ಯಂಕ ಪ್ರಮಾಣ ಕುಸಿತ ಆಗ್ತಿರೋದು ಒಳ್ಳೆಯ ಲಕ್ಷಣವೇ? ಆರೋಗ್ಯ ಸೂಚ್ಯಂಕದಲ್ಲಿ 2015ರಲ್ಲಿ 3ನೇ ಸ್ಥಾನ ಇದ್ದುದು ಈಗ 23ನೇ ಸ್ಥಾನದಲ್ಲಿದೆ ಎಂದ ಸಿದ್ದರಾಮಯ್ಯ, ಆರೋಗ್ಯ ಮತ್ತು ಶಿಕ್ಷಣ ಇಲಾಖೆ ಅಧಿಕಾರಿ ಮತ್ತು ಜಿಲ್ಲಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಈ ಹಿಂದೆ ಇದ್ದ ದಕ್ಷಿಣಕನ್ನಡ ಡಿಡಿಪಿಐ ಅಧಿಕಾರಿಯೇ ಶಿಕ್ಷಣ ಕುಸಿತಕ್ಕೆ ಕಾರಣ. ಅಧಿಕಾರಿಗಳು ಮೂರ್ಖರಾಗಿ ವರ್ತಿಸಿರುವುದು ಇಷ್ಟು ಕೆಳಮಟ್ಟಕ್ಕೆ ಇಳಿಯಲು ಕಾರಣ. ಇದೊಂದು ಗಂಭೀರ ಎಚ್ಚರಿಕೆ ಸೂಚನೆ, ನೋಡಪ್ಪ ಡೀಸಿ.. ಚೆಕ್ ಮಾಡು ಎಂದರು. ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಸಮಜಾಯಿಷಿ ಕೊಡಲು ಯತ್ನಿಸಿದ್ದಕ್ಕೂ ಸಿಎಂ ಗರಂ ಆದರು.

ರಾಜ್ಯದಲ್ಲಿ 31 ಜಿಲ್ಲೆ ಇರುವುದು, 15-20ನೇ ಸ್ಥಾನಕ್ಕೆ ಹೋಗುತ್ತಿರುವುದು ಒಳ್ಳೆಯದು ಎನ್ನುತ್ತೀರಾ? ಯಾಕೆ ಇಷ್ಟು ಕಡಿಮೆಯಾಗ್ತಿದೆ ಮಾಹಿತಿ ಇದ್ಯಾ ಭರತ್ ಶೆಟ್ಟಿ? ಎಂದು ಸಿಎಂ ಪ್ರಶ್ನೆ ಮಾಡಿದರು.

ಡಿಡಿಪಿಐ ಉತ್ತರಕ್ಕೆ ಕಿಡಿಕಾರಿದ ಸಿಎಂ, ನಾಚಿಕೆ ಆಗಲ್ವಾ ನಿಮಗೆ, ನೀವು ಶಾಲೆಗಳಿಗೆ ಹೋಗ್ತೀರಾ? ಮಂಡ್ಯ, ಚಿತ್ರದುರ್ಗ ಮೇಲೆ ಹೋಗಿ ನೀವು ಹಿಂದುಳಿದಿದ್ದೀರಿ ಅಂದ್ರೇನು? ಎಂದು ಪ್ರಗತಿ ಪರಿಶೀಲನಾ ಸಭೆಯಲ್ಲಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net