

ಬೆಂಗಳೂರು: ರಾಜಧಾನಿಯಲ್ಲಿ ಕೋಟ್ಯಂತರ ರೂ.ಮೌಲ್ಯದ ಸರ್ಕಾರಿ ಜಾಗ ಒತ್ತುವರಿ ತೆರವು ಕಾರ್ಯಾಚರಣೆಗೆ ಮೀನಾಮೇಷ ಎಣಿಸುತ್ತಿರುವ ಬಿಬಿಎಂಪಿ, ಹಿಂದು ದೇವಸ್ಥಾನದ ಮೇಲೆ ವಕ್ರದೃಷ್ಟಿ ಬೀರಿದ್ದು, ಎಸ್.ಪಿ. ರಸ್ತೆಯಲ್ಲಿರುವ ಇತಿಹಾಸ ಪ್ರಸಿದ್ಧ ಜಲಕಂಠೇಶ್ವರ ದೇವಸ್ಥಾನವನ್ನು ಮಂಗಳವಾರ ಕೆಡವಿದೆ. ಇದರ ಬಗ್ಗೆ ದೇವಸ್ಥಾನದ ಭಕ್ತಾಧಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜಕಾಲುವೆ, ಕೆರೆ, ಉದ್ಯಾನ,ಅರಣ್ಯ, ಸರ್ಕಾರಿ ಭೂಮಿ ಸೇರಿ ಬಿಬಿಎಂಪಿ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ವಿರುದ್ಧ ಗರ್ಜನೆ ಮಾಡಬೇಕಿದ್ದ ಪಾಲಿಕೆ, 600 ವರ್ಷಗಳ ಇತಿಹಾಸ ಹೊಂದಿರುವ ದೇವಸ್ಥಾನವನ್ನು ಬುಲ್ಡೋಜರ್ ಮೂಲಕ ಕೆಡವಿದೆ. ‘ಬ್ರ್ಯಾಂಡ್ ಬೆಂಗಳೂರು’ ಹೆಸರಿನಲ್ಲಿ ನಡೆಯುತ್ತಿರುವ ಪಾದಚಾರಿ ಮಾರ್ಗ ತೆರವು ಕಾರ್ಯಚರಣೆ ವೇಳೆ ಪಾಲಿಕೆ, ಯಾವುದೇ ಕಾರಣ ನೀಡದೆ ಏಕಾಏಕಿ ಧರ್ಮರಾಯ ದೇವಸ್ಥಾನ ಪಕ್ಕದಲ್ಲೇ ಇದ್ದ ಜಲಕಂಠೇಶ್ವರ ದೇವಸ್ಥಾನವನ್ನು ನೆಲಸಮಗೊಳಿಸಿದೆ. ಯಾವುದೇ ನೋಟಿಸ್ ನೀಡದೆ ಪಾದಚಾರಿ ಮಾರ್ಗ ತೆರವು ಹೆಸರಿನಲ್ಲಿ ಗರ್ಭಗುಡಿಯಲ್ಲಿ ಅರ್ಚಕರು ಪೂಜೆ ಮಾಡುತ್ತಿದ್ದ ಸಂದರ್ಭದಲ್ಲಿಯೇ ದೇವಸ್ಥಾನವನ್ನು ನೆಲಕ್ಕರುಲಿಸಲಾಗಿದೆ. ಇದರಿಂದಾಗಿ ಮೂಲ ವಿಗ್ರಹಕ್ಕೆ ಹಾನಿಯಾಗಿದೆ. ಅರ್ಚಕರು ಅಡ್ಡ ಬಂದರೂ ಕಿವಿಗೊಡದ ಪಾಲಿಕೆ ಅಧಿಕಾರಿಗಳು, ದೇವಸ್ಥಾನವನ್ನು ನೆಲಸಮಗೊಳಿಸಿದ್ದಾರೆ. ದೇವಸ್ಥಾನದ ಗೋಡೆ ಬೀಳುತ್ತಿದ್ದಂತೆ ಬಿಬಿಎಂಪಿ ಸಿಬ್ಬಂದಿ,ಸ್ಥಳದಿಂದ ಪರಾರಿಯಾಗಿದ್ದಾರೆ.
ಇದನ್ನು ಓದಿ: ಎರಡನೇ ತಿಂಗಳ ರಿಪೋರ್ಟ್ ಪ್ರಕಟಿಸಿದ ಪ್ರಿಯಾಂಕ್, ಜಮೀರ್
ಸ್ಥಳೀಯರ ಅಸಮಾಧಾನ:
ದೇವಸ್ಥಾನವನ್ನು ಕೆಡವುತ್ತಿದ್ದ ಸಂದರ್ಭದಲ್ಲಿ ಸುತ್ತಮುತ್ತ ಸ್ಥಳೀಯ ನಿವಾಸಿಗಳು ಸ್ಥಳಕ್ಕೆ ಜಮಾಯಿಸಿದ್ದರು. ಅರ್ಚಕರ ನೆರವಿಗೆ ಧಾವಿಸಿ ಪ್ರತಿರೋಧ ತೋರಿದ್ದರು. ಆದರೂ, ಬಿಬಿಎಂಪಿ ಅಧಿಕಾರಿಗಳು ಪಟ್ಟುಬಿಡದೆ ದೇವಸ್ಥಾನವನ್ನು ಕೆಡವಿದರು. ಇದರಿಂದಾಗಿ ಕೆಲ ಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿತ್ತು. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮೂಲ ಸ್ಥಳದಲ್ಲಿ ದೇವಸ್ಥಾನವನ್ನು ಮರು ನಿರ್ಮಿಸಬೇಕೆಂದು ಒತ್ತಾಯಿಸಿದ್ದರು. ಒತ್ತುವರಿದಾರರ ವಿರುದ್ಧ ಶೂರತ್ವ ತೋರಬೇಕಿದ್ದ ಪಾಲಿಕೆ ಹಿಂದು ದೇವಸ್ಥಾನದ ಮೇಲೆ ಕಣ್ಣಿಟ್ಟು ಏಕಾಏಕಿ ಇತಿಹಾಸ ಪ್ರಸಿದ್ಧ ದೇವಸ್ಥಾನವನ್ನು ನೆಲಸಮ ಮಾಡಿದ್ದಾರೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು. ಮುಂಜಾಗ್ರತಾವಾಗಿ ಪೊಲೀಸರನ್ನು ಪರಿಸ್ಥಿತಿಯನ್ನು ತಿಳಿಗೊಳಿಸುವ ಕೆಲಸ ಮಾಡುತ್ತಿದ್ದರು.
ಬಿಬಿಎಂಪಿ ಅಧಿಕಾರಿಗಳು ಯಾವುದೇ ನೋಟಿಸ್ ನೀಡದೆ ಏಕಾಏಕಿ ದೇವಸ್ಥಾನವನ್ನು ನೆಲಸಮ ಮಾಡಿದ್ದಾರೆ. ಪಾದಚಾರಿ ಮಾರ್ಗ ತೆರವಿಗೆ ಬಂದು ದೇವಾಲಯವನ್ನು ಕೆಡವಲಾಗಿದೆ. ಈ ದೇವಸ್ಥಾನಕ್ಕೆ 600 ವರ್ಷಗಳ ಇತಿಹಾಸವಿದೆ. ಮೂಲ ವಿಗ್ರಹಕ್ಕೆ ಧಕ್ಕೆಯಾಗಿದೆ. ಪಾಲಿಕೆಯವರು ಕೂಡಲೆ ಮೂಲ ಸ್ಥಳದಲ್ಲಿಯೇ ದೇವಸ್ಥಾನವನ್ನು ಮರುನಿರ್ಮಿಸಬೇಕು ಎಂದು ದೇವಸ್ಥಾನದ ಆರ್ಚಕ ಆಗ್ರಹಿಸಿದ್ದಾರೆ.