ಶ್ರಮಿಕರಿಗೆ ಬಿಎಸ್​ವೈ ಟಾನಿಕ್

CM BSY
Published on

ಬೆಂಗಳೂರು: ಕರೊನಾ ಲಾಕ್​ಡೌನ್​ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ವಿವಿಧ ಶ್ರಮಿಕ ವರ್ಗಕ್ಕೆ 1610 ಕೋಟಿ ರೂ. ಮೊತ್ತದ ವಿಶೇಷ ಪ್ಯಾಕೇಜ್ ಘೋಷಿಸಿರುವ ಸರ್ಕಾರ ವಾರದೊಳಗೆ ಆರ್ಥಿಕ ನೆರವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೇ ಜಮಾ ಮಾಡುವ ಮಹತ್ವದ ತೀರ್ಮಾನ ಕೈಗೊಂಡಿದೆ. ಜತೆಗೆ ಪ್ರತಿ ಕುಟುಂಬಕ್ಕೂ ಅನ್ವಯವಾಗುವಂತೆ ವಿದ್ಯುತ್ ಬಿಲ್ ಪಾವತಿಯಲ್ಲೂ ವಿನಾಯಿತಿ ಪ್ರಕಟಿಸಿದೆ. ಚಾಲಕರು, ರೈತರು, ಮಡಿವಾಳ ಮತ್ತು ಸವಿತಾ ಸಮಾಜ, ಕಟ್ಟಡ ಕಾರ್ವಿುಕ, ನೇಕಾರರಿಗೆ ಆಪತ್ಕಾಲದಲ್ಲಿ ನೆರವಾಗಲು ಈ ತೀರ್ಮಾನ ಕೈಗೊಂಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೈಗಾರಿಕೆಗಳಿಗೂ ಸ್ವಲ್ಪ ರಿಯಾಯಿತಿ ನೀಡಿದ್ದಾರೆ.

ಸಂಪುಟ ಸಹೋದ್ಯೋಗಿಗಳೊಂದಿಗೆ ಬುಧವಾರ ಅನೌಪಚಾರಿಕ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿದ ಬಿಎಸ್​ವೈ, ಸರ್ಕಾರದ ನಿರ್ಧಾರ ಪ್ರಕಟಿಸಿದರು. ‘ಕಳೆದ ಒಂದೂವರೆ ತಿಂಗಳಿನಿಂದ ಲಾಕ್​ಡೌನ್​ನಿಂದಾಗಿ ವಿವಿಧ ನಿರ್ಬಂಧ ಹೇರಲಾಗಿದೆ. ಇದರಿಂದ ಎಲ್ಲ ವರ್ಗದ ಜನರು ಆರ್ಥಿಕವಾಗಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಅವರಿಗೆ ನೆರವಾಗುವುದು ನಮ್ಮ ಸರ್ಕಾರದ ಜವಾಬ್ದಾರಿ’ ಎಂದರು.

ಮಾಹಿತಿ ಇಲ್ಲ, ಮುಂದೇನು?: ಕಾರ್ವಿುಕ ಇಲಾಖೆಯಲ್ಲಿ ಈಗಾಗಲೇ ಚಾಲಕರಿಗೆ ಸಂಬಂಧಿಸಿದಂತೆ ನೋಂದಾಯಿಸಿಕೊಂಡಿರುವವರ ಅಂಕಿಅಂಶಗಳಿವೆ. ಆದರೆ ಸವಿತಾ ಸಮಾಜ ಮತ್ತು ಮಡಿವಾಳ ಸಮಾಜಕ್ಕೆ ಸಂಬಂಧಿಸಿದಂತೆ ನಿಖರವಾದ ಅಂಕಿಅಂಶಗಳೇ ಇಲ್ಲ, ಇನ್ನಷ್ಟೇ ಮಾಹಿತಿಯನ್ನು ಸಂಗ್ರಹಿಸಬೇಕಾಗಿದೆ. ಸರ್ಕಾರ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಮೂಲಕ ಯೋಜನೆ ಜಾರಿಗೆ ತರಲು ಉದ್ದೇಶಿಸಿದೆ. ಗುರುವಾರ ಮಾರ್ಗಸೂಚಿ ಪ್ರಕಟವಾಗಲಿವೆ.

ಆಯ್ಕೆ ಹೇಗೆ?: ಜಿಲ್ಲಾ ಹಿಂದುಳಿದ ವರ್ಗಗಳ ಅಧಿಕಾರಿಗೆ ಜವಾಬ್ದಾರಿ ನೀಡಲಾಗುತ್ತದೆ. ಅವರು ತಾಲೂಕು ಹಿಂದುಳಿದ ವರ್ಗಗಳ ಅಧಿಕಾರಿ, ತಹಸೀಲ್ದಾರ್ ಮೂಲಕ ಫಲಾನುಭವಿಗಳ ಬ್ಯಾಂಕ್ ಖಾತೆಯ ವಿವರ ಸಂಗ್ರಹಿಸ ಬೇಕಾಗುತ್ತದೆ. ಗ್ರಾಮೀಣ ಮಟ್ಟದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ, ನಗರ ಮಟ್ಟದಲ್ಲಿ ಸ್ಥಳೀಯ ಸಂಸ್ಥೆಗಳ ಆರೋಗ್ಯಾಧಿಕಾರಿಗೆ ಈ ಜವಾಬ್ದಾರಿ ನೀಡಲಾಗುತ್ತದೆ. ನಿಜಕ್ಕೂ ಕುಲಕಸುಬು ಮಾಡಿಕೊಂಡು ಬಂದವರನ್ನು ಆಯ್ಕೆ ಮಾಡಲಾಗುತ್ತದೆ ಎಂದು ಸರ್ಕಾರದ ಮೂಲಗಳು ಹೇಳಿವೆ.

ಇದನ್ನೂ ಓದಿ: VIDEO: ಲಾಕ್​ಡೌನ್ ನಂತರ ಮುಂದೇನು?: ಆರೆಸ್ಸೆಸ್​ ನೀತಿ ನಿಲುವು ಹೀಗಿದೆ ನೋಡಿ... ಪಟ್ಟಿ ನೀಡಿದ್ದ ಸಿದ್ದು: ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಿವಿಧ ವೃತ್ತಿ ಆಧಾರಿತ ಸಮುದಾಯಗಳ ಸಭೆ ನಡೆಸಿ, ಯಾವ ವರ್ಗಕ್ಕೆ ಏನೇನು ಸೌಲಭ್ಯ ನೀಡಬೇಕೆಂಬ ಬಗ್ಗೆ ವಿವರವಾದ ವರದಿಯನ್ನು ಸಿಎಂಗೆ ಸಲ್ಲಿಸಿದ್ದರು.

ಸಿಎಂ ಘೋಷಿಸಿರುವ ನೆರವು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ. ಕೇರಳದಲ್ಲಿ 20 ಸಾವಿರ ಕೋಟಿ ರೂ. ಪ್ಯಾಕೇಜ್ ಘೋಷಿಸಲಾಗಿದೆ. ಅಸಂಘಟಿತ ಕ್ಷೇತ್ರಗಳಾದ ಬಡಗಿ, ಅಕ್ಕಸಾಲಿಗ, ಚಮ್ಮಾರ, ಕಮ್ಮಾರ, ಅರ್ಚಕ, ಶಿಲ್ಪಿಗಳನ್ನು ಕಡೆಗಣಿಸಿದೆ. ಎಲ್ಲರಿಗೂ ಮಾಸಿಕ 10 ಸಾವಿರ ರೂ. ನೀಡುವಂತೆ ಕೋರಿದ್ದೆವು. ಆದರೆ ಸವಿತಾ ಸಮಾಜ, ಮಡಿವಾಳರಿಗೆ 5 ಸಾವಿರ ರೂ. ಮಾತ್ರ ನೀಡಿದ್ದಾರೆ. ನೇಕಾರರ ಉಳಿದ ಬೇಡಿಕೆಗಳನ್ನು ತಿರಸ್ಕರಿಸಲಾಗಿದೆ. ಉದ್ಯಮಿಗಳಿಗೆ ಕಚ್ಚಾ ವಸ್ತು ಖರೀದಿಗೆ ನೆರವು ನೀಡಿಲ್ಲ. ಹೊಸ ಸಾಲ ಕೊಡಿಸುತ್ತಿಲ್ಲ. | ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ

ಹೂವು ಬೆಳೆಗಾರರಿಗೆ 25 ಸಾವಿರ ರೂ: ಲಾಕ್​ಡೌನ್​ನಿಂದಾಗಿ ಎಲ್ಲ ದೇವಾಲಯಗಳು ಮುಚ್ಚಿವೆ. ಹಬ್ಬ, ಮದುವೆ, ಸಭೆ, ಸಮಾರಂಭ ನಡೆಯದಿರುವುದರಿಂದ ಬೇಡಿಕೆ ಇಲ್ಲದೆ ಬೆಳೆದಿರುವ ಹೂವುಗಳನ್ನು ರೈತರು ಹೊಲದಲ್ಲೇ ನಾಶ ಪಡಿಸಬೇಕಾದ ಪರಿಸ್ಥಿತಿ ಉದ್ಭವಿಸಿದೆ. ಒಟ್ಟಾರೆ 11,687 ಹೆಕ್ಟೇರ್ ವಿಸ್ತೀರ್ಣದಲ್ಲಿ ಬೆಳೆದಿರುವ ಹೂವುಗಳು ಮಾರಾಟವಾಗದೆ ರೈತರಿಗೆ ನಷ್ಟವಾಗಿದೆ. ಇದರಿಂದ ಎಲ್ಲ ರೀತಿಯ ಹೂವು ಬೆಳೆದಿರುವ ರೈತರಿಗೆ ನೆರವಾಗಲು ಹೆಕ್ಟೇರ್​ಗೆ ಗರಿಷ್ಠ 25 ಸಾವಿರ ರೂ.ನಂತೆ ಪರಿಹಾರ ನೀಡಲಾಗುತ್ತದೆ.

ನೇಕಾರರ ಸಮ್ಮಾನ್ ಯೋಜನೆ: ಈಗಾಗಲೇ ಸಂಕಷ್ಟ ಎದುರಿಸುತ್ತಿರುವ ನೇಕಾರರಿಗೆ ಈ ಲಾಕ್​ಡೌನ್ ಮತ್ತಷ್ಟು ನಷ್ಟ ತಂದಿದೆ. ಸರ್ಕಾರ ಈಗಾಗಲೇ ನೇಕಾರರಿಗೆ ನೆರವಾಗಲು 109 ಕೋಟಿ ರೂ. ಸಾಲಮನ್ನಾ ಯೋಜನೆ ಘೊಷಿಸಿದೆ. ಮುಂದೆ ಹೊಸ ಸಾಲ ದೊರಕಿಸಿಕೊಡಲಾಗುತ್ತದೆ. ಜತೆಗೆ 2019ರ ಜ.1ರಿಂದ ಮಾ. 31ರ ಅವಧಿಯೊಳಗೆ 1 ಲಕ್ಷ ರೂ. ಒಳಗಿನ ಸಾಲ ಮರುಪಾವತಿಸಿರುವ ನೇಕಾರರಿಗೆ ಅವರು ಪಾವತಿಸಿರುವ ಮೊತ್ತವನ್ನು ಮರುಪಾವತಿಸಲಾಗುತ್ತದೆ. ಇದಲ್ಲದೆ ಹೊಸದಾಗಿ ನೇಕಾರರ ಸಮ್ಮಾನ್ ಯೋಜನೆ ಘೋಷಿಸಿದ್ದು, ಇದರ ಪ್ರಕಾರ ಅಂದಾಜು 54,000 ಕೈಮಗ್ಗ ನೇಕಾರರಿಗೆ 2000 ರೂ.ನಂತೆ ಬ್ಯಾಂಕ್ ಖಾತೆಗೆ ನೇರ ಜಮೆ ಮಾಡಲಾಗುತ್ತದೆ.

ಕಟ್ಟಡ ಕಾರ್ವಿುಕರಿಗೆ 3,000 ರೂ: ರಾಜ್ಯದಲ್ಲಿರುವ 15.80 ಲಕ್ಷ ನೋಂದಾಯಿತ ಕಟ್ಟಡ ಕಾರ್ವಿುಕರ ಪೈಕಿ ಈಗಾಗಲೇ 11.80 ಲಕ್ಷ ಕಟ್ಟಡ ಕಾರ್ವಿುಕರಿಗೆ ಸರ್ಕಾರದಿಂದ ತಲಾ 2000 ರೂ.ಗಳನ್ನು ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿದೆ. ಇನ್ನುಳಿದ 4 ಲಕ್ಷ ಕಟ್ಟಡ ಕಾರ್ವಿುಕರಿಗೆ ಅವರವರ ಬ್ಯಾಂಕ್ ಖಾತೆ ವಿವರಗಳು ದೊರೆತ ನಂತರ 2,000 ರೂ.ವರ್ಗಾಯಿಸಲಾಗುತ್ತದೆ. ಈಗಾಗಲೇ ನೀಡಿರುವ 2,000 ರೂ.ಜತೆಗೆ ಹೆಚ್ಚುವರಿಯಾಗಿ 3 ಸಾವಿರ ರೂ. ನೀಡಲು ನಿರ್ಧರಿಸಲಾಗಿದೆ.

ಇದನ್ನೂ ಓದಿ:  ಲಾಕ್​ಡೌನ್​ನಲ್ಲಿ ಸಲ್ಮಾನ್​ ಖಾನ್​ ಬಾಡಿ ಶೇಪೇ ಬದಲಾಗೋಯ್ತು! ಹಣ್ಣು, ತರಕಾರಿ ಬೆಳೆದವರಿಗೂ ಪ್ಯಾಕೇಜ್: ಈ ವರ್ಷ ರಾಜ್ಯದಲ್ಲಿ ತರಕಾರಿ, ಹಣ್ಣುಗಳ ಇಳುವರಿ ಉತ್ತಮ ವಾಗಿದೆ. ಆದರೆ ಲಾಕ್​ಡೌನ್​ನಿಂದಾಗಿ ರೈತರು ತಮ್ಮ ಬೆಳೆಗಳಿಗೆ ಸೂಕ್ತ ದರ ಪಡೆಯಲು ಸಾಧ್ಯವಾಗಿಲ್ಲ. ನಷ್ಟಕ್ಕೆ ಒಳಗಾಗಿರುವ ತರಕಾರಿ ಹಾಗೂ ಹಣ್ಣು ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡುವ ಬಗ್ಗೆ ಪ್ಯಾಕೇಜ್ ಘೊಷಣೆ ಮಾಡಲಾಗುವುದು. ಈ ಬಗ್ಗೆ ಅಧ್ಯಯನ ನಡೆಸಿ ಸರ್ಕಾರ ಶೀಘ್ರವೇ ನಿರ್ಧಾರ ಪ್ರಕಟಿಸಲಿದೆ.

ಸವಿತಾ ಸಮಾಜವನ್ನು ಇದೇ ಮೊದಲ ಬಾರಿಗೆ ಸರ್ಕಾರ ಗುರುತಿಸಿದೆ. ಈ ಸೌಲಭ್ಯ ಸಿಗುವಂತೆ ಮಾಡಲು ಎಲ್ಲ ಸಹಕಾರ ನೀಡುತ್ತೇವೆ. ವಾದ್ಯ ನುಡಿಸುವವರನ್ನೂ ಕಡೆಗಣಿಸಲ್ಲ. | ಸಂಪತ್​ಕುಮಾರ್ ಅಧ್ಯಕ್ಷ, ಕರ್ನಾಟಕ ಸವಿತಾ ಸಮಾಜ

ಮಡಿವಾಳ, ಕ್ಷೌರಿಕರಿಗೆ 5 ಸಾವಿರ ರೂಪಾಯಿ: ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮಡಿವಾಳ ಹಾಗೂ ಕ್ಷೌರಿಕ ವೃತ್ತಿಯಲ್ಲಿ ತೊಡಗಿರುವವರು ಒಂದೂವರೆ ತಿಂಗಳಿಂದ ಕಸುಬನ್ನು ನಡೆಸಲಾಗದೇ ದೈನಂದಿನ ಆದಾಯ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಅಂದಾಜು 60,000 ಜನ ಮಡಿವಾಳರ ವೃತ್ತಿಯಲ್ಲಿ ಮತ್ತು 2,30,000 ಜನ ಕ್ಷೌರಿಕ ವೃತ್ತಿಯಲ್ಲಿದ್ದಾರೆ. ಇವರಿಗೆೆ ನೆರವಾಗಲು ಒಂದೇ ಬಾರಿಗೆ ತಲಾ 5 ಸಾವಿರ ರೂಪಾಯಿ ನೀಡಲಾಗುತ್ತದೆ.

ಮುಖ್ಯಮಂತ್ರಿಗಳಿಗೆ ಅಭಿನಂದನೆಗಳು. ಗ್ರಾಮೀಣ ಮಟ್ಟದಲ್ಲಿ ಹಾಗೂ ನಗರಗಳಲ್ಲಿ ಮಡಿವಾಳರಾಗಿ ಕೆಲಸ ಮಾಡುತ್ತಿರುವವರನ್ನು ಮಾತ್ರ ಆಯ್ಕೆ ಮಾಡಲು ಸಹಕಾರ ನೀಡಲಾಗುತ್ತದೆ. | ಸಿ. ನಂಜಪ್ಪ ಅಧ್ಯಕ್ಷ, ರಾಜ್ಯ ಮಡಿವಾಳ ಸಂಘ

ಕೈಗಾರಿಕೆಗಳಿಗೆ ಸಣ್ಣ ಅನುಕೂಲ: ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳು ನಷ್ಟ ಅನುಭವಿಸಿವೆ. ವಹಿವಾಟು ಚೇತರಿಕೆಯಾಗುವುದಕ್ಕೆ ಕೆಲವು ಸಮಯ ಬೇಕಾಗಿರುವುದರಿಂದ ನೆರವು ನೀಡುವುದು ಅನಿವಾರ್ಯ. ಹೀಗಾಗಿ ಅತಿಸಣ್ಣ, ಸಣ್ಣ ಹಾಗೂ ಉದ್ಯಮ ಉದ್ದಿಮೆಗಳ ವಿದ್ಯುತ್ ಬಿಲ್ಲಿನ ಫಿಕ್ಸೆಡ್ ಶುಲ್ಕವನ್ನು ಎರಡು ತಿಂಗಳ ಅವಧಿಗೆ ಪೂರ್ತಿ ಮನ್ನಾ ಮಾಡಲಾಗುತ್ತದೆ. ಬೃಹತ್ ಕೈಗಾರಿಕೆಗ ನಿಶ್ಚಿತ ಶುಲ್ಕ ಪಾವತಿಯನ್ನು 2 ತಿಂಗಳ ಅವಧಿಗೆ ಯಾವುದೇ ಬಡ್ಡಿ, ದಂಡ ಇಲ್ಲದೆ ಮುಂದೂಡಲಾಗುತ್ತದೆ.

ಆರ್ಥಿಕ ಪ್ಯಾಕೇಜ್​ನಿಂದ ರೈತರು, ಸಣ್ಣ, ಅತಿಸಣ್ಣ ಕೈಗಾರಿಕೆಗಳ ಪುನಶ್ಚೇತನಕ್ಕೆ ಅನುಕೂಲವಾಗುತ್ತದೆ. ಮಡಿವಾಳ ಹಾಗೂ ಸವಿತಾ ಸಮಾಜದವರ ನೆರವಿಗೂ ಸರ್ಕಾರ ಧಾವಿಸಿರುವುದು ಒಳ್ಳೆಯದು.  | ಎನ್. ನಿತ್ಯಾನಂದ ಲೆಕ್ಕ ಪರಿಶೋಧಕ

7.75 ಲಕ್ಷ ಚಾಲಕರಿಗೆ ನೆರವು: ಆಟೋರಿಕ್ಷಾ ಹಾಗೂ ಟ್ಯಾಕ್ಸಿ ಚಾಲಕರು ಲಾಕ್​ಡೌನ್​ನಿಂದಾಗಿ ದೈನಂದಿನ ಉದ್ಯೋಗ ನಡೆಸಲಾಗದೆ ಆದಾಯ ಕಳೆದುಕೊಂಡಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಅಂದಾಜು 7.75 ಲಕ್ಷ ಚಾಲಕರಿಗೆ ಒಂದೇ ಬಾರಿ ಪರಿಹಾರವಾಗಿ ತಲಾ 5000 ರೂ. ನೀಡಲಾಗುತ್ತದೆ. ಸರ್ಕಾರದಲ್ಲಿ ನೋಂದಾಯಿಸಿಕೊಂಡವರಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ.

ಸರ್ಕಾರ ಸಣ್ಣ, ಅತಿಸಣ್ಣ ಹಾಗೂ ದೊಡ್ಡ ಕೈಗಾರಿಕೆಗಳ ನೆರವಿಗೆ ಬಂದಿರುವುದು ಸ್ವಾಗತಾರ್ಹ. ನಾವು ಸಹ ವಿದ್ಯುತ್ ಬಿಲ್ ಮನ್ನಾ ಮಾಡುವಂತೆ ಒತ್ತಾಯ ಮಾಡಿದ್ದೆವು. | ಜನಾರ್ದನ ಅಧ್ಯಕ್ಷ, ಎಫ್​ಕೆಸಿಸಿಐ

ಮನೆ ವಿದ್ಯುತ್ ಬಿಲ್​ಗೂ ಆಫರ್: ಎಲ್ಲ ಪ್ರವರ್ಗದ ಗ್ರಾಹಕರಿಗೆ ವಿದ್ಯುಚ್ಛಕ್ತಿ ಮೊತ್ತ ಪಾವತಿಸುವಾಗ ಪರಿಹಾರ ಮಾರ್ಗವೊಂದನ್ನು ಸರ್ಕಾರ ನೀಡಿದೆ. ನಿಗದಿತ ಸಮಯದೊಳಗೆ ವಿದ್ಯುತ್ ಬಿಲ್ಲಿನ ಮೊತ್ತ ಪಾವತಿಸುವ ಗ್ರಾಹಕರಿಗೆ ಶೇ.1 ರಿಯಾಯಿತಿ, ಮುಂಗಡ ಪಾವತಿಗೆ ಶೇ.6 ಪೋ›ತ್ಸಾಹ ನೀಡಲಾಗುತ್ತದೆ. ಹಾಗೆಯೇ ವಿಳಂಬ ಪಾವತಿಗಾಗಿ ವಿಧಿಸುವ ಬಡ್ಡಿ ಕಡಿತಗೊಳಿಸಲಾಗುವುದು. ಕಂದಾಯ ಬಾಕಿ ಮೊತ್ತವನ್ನು ಪಾವತಿಸದಿರುವ ಗ್ರಾಹಕರಿಗೆ 2020ರ ಜೂನ್ 30 ರವರೆಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net