

ಮುಂಬೈ: 2015ರಲ್ಲಿ ರಿಲೀಸ್ ಆದ ಸಲ್ಮಾನ್ ಖಾನ್ ನಟನೆಯ 'ಭಜರಂಗಿ ಭಾಯಿಜಾನ್' ಚಿತ್ರದಲ್ಲಿ ಬಾಲ ನಟಿಯಾಗಿ, ಮುನ್ನಿ ಪಾತ್ರದಲ್ಲಿ ಅಭಿನಯಿಸಿದ್ದ ಈ ಹುಡುಗಿ ನೆನಪಿದ್ದಾಳಾ? ಚಿತ್ರದುದ್ದಕ್ಕೂ ಎಲ್ಲರ ಮುಖದಲ್ಲಿ ಮೊದಲಾರ್ಧದಲ್ಲಿ ನಗು ಮೂಡಿಸಿ, ದ್ವಿತೀಯಾರ್ಧದಲ್ಲಿ ಕಣ್ಣೀರು ತಂದ ಮುದ್ದಾದ ಪುಟ್ಟ ಕಂದಮ್ಮ ಈಗ ದೊಡ್ಡ ಹುಡುಗಿ. ಮುನ್ನಿ ಅಲಿಯಾಸ್ ಹರ್ಷಾಲಿ ಮಲ್ಹೋತ್ರಾ ಇತ್ತೀಚೆಗಷ್ಟೇ 10ನೇ ತರಗತಿಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಈ ಸಂತಸದ ವಿಷಯದ ಜತೆಗೆ ಮತ್ತೊಂದು ವಿಚಾರದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
"ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 83 ರಷ್ಟು ಫಲಿತಾಂಶ ತೆಗೆದುಕೊಂಡ ನಾನು, ನನ್ನು ಪೋಷಕರು, ಸ್ನೇಹಿತರು ಮತ್ತು ಕುಟುಂಬದವರನ್ನು ಸಂತೋಷಪಡಿಸಿದ್ದೇನೆ. ಈ ಸಾಧನೆ ನನ್ನ ಪ್ರೀತಿ-ಪಾತ್ರರಿಗೆ ಖುಷಿ ತಂದಿದೆ. ಆದರೆ, ಇದು ಕೆಲವರಿಗೆ ನನ್ನ ತಿರುಗೇಟು ಆಗಿದೆ" ಎಂದು ಖಡಕ್ ಆಗಿ ಹೇಳಿದರು. "ಈ ಹಿಂದೆ ಡ್ಯಾನ್ಸ್ ಮಾಡಿದ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ನನಗೆ, ಟ್ರೋಲಿಗರು ಮೊದಲು ಸರಿಯಾಗಿ ಓದು" ಎಂದು ಟೀಕಿಸಿದ್ದರು. ಈಗ ಅದಕ್ಕೆ ಉತ್ತರ ಸಿಕ್ಕಿದೆ ಎಂದೇ ಭಾವಿಸುತ್ತೇನೆ ಎಂದರು.
"ಈ ಫಲಿತಾಂಶ ನನ್ನ ಕಠಿಣ ಪರಿಶ್ರಮಕ್ಕೆ ಸಾಕ್ಷಿಯಾಗಿದೆ. ಸುಂದರ ಹಾಡುಗಳಿಗೆ ಡ್ಯಾನ್ಸ್ ಮಾಡಿ, ಅದರ ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಕ್ಕಾಗಿ ನನ್ನನ್ನು ತುಂಬ ಟೀಕಿಸಿದ್ದರು. ಇದನ್ನು ನಾನು ಖಂಡಿಸುತ್ತೇನೆ. ನಾನೇನು ಮೂರು ಹೊತ್ತು ಡ್ಯಾನ್ಸ್ ಮಾಡಿಕೊಂಡೇ ಇರಲಿಲ್ಲ" ಎಂದಿದ್ದಾರೆ.
"ಸೋಮವಾರದಿಂದ ಶುಕ್ರವಾರದವರೆಗೂ ಓದಿನ ಕಡೆ ಗಮನಹರಿಸುತ್ತಿದ್ದೆ. ಅದೇ ನನ್ನ ಗುರಿಯಾಗಿರುತ್ತಿತ್ತು. ಕೇವಲ ಶನಿವಾರ ಮತ್ತು ಭಾನುವಾರ ಮಾತ್ರ ಖತಕ್ ಡ್ಯಾನ್ಸ್ ಮಾಡಿ, ರೀಲ್ಸ್ ಹಾಕುತ್ತಿದ್ದೆ ಅಷ್ಟೇ" ಎಂದು ಹೇಳುವ ಮೂಲಕ ತನ್ನನ್ನು ಟೀಕಿಸಿದವರಿಗೆ ಖಡಕ್ ತಿರುಗೇಟು ನೀಡಿದ್ದಾರೆ,(ಏಜೆನ್ಸೀಸ್).