

ಬೆಂಗಳೂರು: ಅರ್ಜುನ್ ಜನ್ಯ ನಿರ್ದೇಶಕನಾಗಿ ಭಡ್ತಿ ಪಡೆದುಕೊಂಡಿದ್ದಾರೆ. ಸಂಗೀತ ನಿರ್ದೇಶನ ಮಾಡುತ್ತಿದ್ದ ಅರ್ಜುನ್ ಜನ್ಯ ಇದೀಗ ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. '45' ಎಂಬ ಹೆಸರಿನ ಸಿನಿಮಾ ಮೂಲಕ ನಟ ಶಿವರಾಜ್ ಕುಮಾರ್ ಅವರಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇದೀಗ ಅರ್ಜುನ್ ಜನ್ಯ ಹೊಸ ಸುದ್ದಿಯೊಂದನ್ನು ನೀಡಿದ್ದಾರೆ. ಸುದ್ದಿ ಕೇಳುತ್ತಿದ್ದಂತೆ ಅಭಿಮಾನಿಗಳು ಖುಷಿಯಾಗಿದ್ದಾರೆ.
ಅರ್ಜುನ್ ಜನ್ಯ ನಿರ್ದೇಶನದ ಮೂಲಕ ಶಿವರಾಜ್ ಕುಮಾರ್ ಮತ್ತು ಉಪೇಂದ್ರ ಮತ್ತೆ ಒಟ್ಟಾಗಿ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. '45' ಸಿನಿಮಾದಲ್ಲಿ ಉಪೇಂದ್ರ ಶಿವಣ್ಣ ಜತೆಗೆ ಸ್ಕ್ರೀನ್ ಹಂಚಿಕೊಳ್ಳುತ್ತಿರುವ ಬಗ್ಗೆ ನಿರ್ದೇಶಕ ಅರ್ಜುನ್ ಜನ್ಯ ಸ್ಪಷ್ಟಪಡಿಸಿದ್ದಾರೆ.
ಶಿವರಾಜ್ ಕುಮಾರ್ ಮತ್ತು ಉಪೇಂದ್ರ ಜತೆಯಾಗಿ ಕೆಲಸ ಮಾಡುತ್ತಿರುವುದು ಇದು 4ನೇ ಬಾರಿ. ಈ ಹಿಂದೆ ‘ಓಂ’ ಚಿತ್ರದಲ್ಲಿ ಶಿವಣ್ಣ ಅವರನ್ನು ಉಪೇಂದ್ರ ನಿರ್ದೇಶಿಸಿದ್ದರು. ಆ ನಂತರ ಇಬ್ಬರೂ ‘ಪ್ರೀತ್ಸೇ‘ ಮತ್ತು ‘ಲವ-ಕುಶ’ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು. ಈಗ ದೊಡ್ಡ ಗ್ಯಾಪ್ನ ನಂತರ ಆಪ್ತಮಿತ್ರರಿಬ್ಬರು ‘45’ ಚಿತ್ರದಲ್ಲಿ ಮತ್ತೆ ಒಟ್ಟಾಗಿ ನಟಿಸುತ್ತಿದ್ದಾರೆ.
'45' ಪ್ಯಾನ್ ಇಂಡಿಯಾ ಸಿನಿಮಾ. ಈ ಸಿನಿಮಾವನ್ನು ಸೂರಜ್ ಪ್ರೊಡಕ್ಷನ್ ಮೂಲಕ ರಮೇಶ್ ರೆಡ್ಡಿ ನಿರ್ಮಾಣ ಮಾಡುತ್ತಿದ್ದಾರೆ. ಶಿವರಾಜಕುಮಾರ್ ಅವರ ಹುಟ್ಟುಹಬ್ಬದಂದು ಅಧಿಕೃತವಾಗಿ ಘೋಷಣೆಯಾದ ಈ ಸಿನಿಮಾ, ಈಗ ಪ್ರೀ-ಪ್ರೊಡಕ್ಷನ್ ಹಂತದಲ್ಲಿದೆ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಚಿತ್ರೀಕರಣ ಡಿಸೆಂಬರ್ನಿಂದ ಪ್ರಾರಂಭವಾಗಲಿದೆ.
ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ, ಅರ್ಜುನ್ ಜನ್ಯ ಅವರೇ ಕಥೆ-ಚಿತ್ರಕಥೆ ಬರೆದಿದ್ದು, ನಿರ್ದೇಶನದ ಜೊತೆಗೆ ಸಂಗೀತ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.