

ಭೋಪಾಲ್: ಭಾರತದಲ್ಲಿ ಚೀತಾಗಳ ಸಂಖ್ಯೆ ವೃದ್ಧಿಸುವ ನಿಟ್ಟಿನಲ್ಲಿ ನಮೀಬಿಯಾದಿಂದ ಭಾರತಕ್ಕೆ 8 ಚೀತಾಗಳನ್ನು ಕರೆತರಲಾಗಿತ್ತು. ನಮೀಬಿಯಾ ಚೀತಾಗಳನ್ನು ಪ್ರಧಾನಿ ನರೇಂದ್ರ ಮೋದಿ ಜನ್ಮದಿನದಂದು (ಸೆ.17) ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡಲಾಗಿತ್ತು. ಇದೀಗ 'ಆಶಾ' ಎಂಬ ಹೆಸರಿನ ಚೀತಾ ಗರ್ಭ ಧರಿಸಿದೆ ಎಂದು ಹೇಳಲಾಗುತ್ತಿದೆ.
ಪ್ರಧಾನಿ ಮೋದಿ 'ಆಶಾ' ಎಂದು ನಾಮಕರಣ ಮಾಡಿದ್ದ ಚೀತಾದ ನಿತ್ಯದ ಚಟುವಟಿಕೆ ಗಮನಿಸುತ್ತಿರುವ ವೈದ್ಯರು, ಚೀತಾ ಗರ್ಭ ಧರಿಸಿರುವ ಸಾಧ್ಯತೆ ಇದೆ ಎಂದಿದ್ದಾರೆ. ಚೀತಾಗಳು ಗರ್ಭ ಧರಿಸುವಾಗಿನ ಬದಲಾವಣೆಗಳು, ದೈಹಿಕವಾಗಿ ಮತ್ತು ಹಾರ್ಮೋನುಗಳಲ್ಲಿ ವ್ಯತ್ಯಾಸ ಕಂಡು ಬಂದಿದೆ. ಅಕ್ಟೋಬರ್ ಕೊನೆಯ ವಾರದಲ್ಲಿ ಈ ಬಗ್ಗೆ ಖಚಿತ ಪಡಿಸಲಾಗುವುದು ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.
ಚೀತಾ ಕಾಡಿನಿಂದ ಬಂದಿರುವ ಕಾರಣ, ಗರ್ಭ ಧರಿಸಿರುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ಗರ್ಭ ಧರಿಸಿದ್ದೇ ಆದಲ್ಲಿ ಅದು ಮನುಷ್ಯರಿಂದ ದೂರ ಇರಬೇಕು. ಕಾಡಿನಲ್ಲಿ ಅದಕ್ಕೆ ಬೇಕಾದ ಖಾಸಗಿತನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಒತ್ತಡ ಕಡಿಮೆ ಮಾಡಲು ಚೀತಾಗೆ ಸ್ಥಳಾವಕಾಶ ಮತ್ತು ಶಾಂತತೆಯ ಅಗತ್ಯವಿದೆ ಎಂದು ಚೀತಾ ಸಂರಕ್ಷಣಾ ನಿಧಿಯ (CCF) ಕಾರ್ಯನಿರ್ವಾಹಕ ನಿರ್ದೇಶಕ ಲಾರಿ ಮಾರ್ಕರ್ ತಿಳಿಸಿದ್ದಾರೆ.
ನಮೀಬಿಯಾದಿಂದ ಕರೆತಂದಿರುವ ಎಲ್ಲಾ ಚೀತಾಗಳನ್ನು ರಾಷ್ಟ್ರೀಯ ಉದ್ಯಾನವನದಲ್ಲಿ ಸುರಕ್ಷಿತವಾಗಿ ನೋಡಿಕೊಳ್ಳಲಾಗುತ್ತಿದೆ. ನಮೀಬಿಯಾ ಚೀತಾಗಳಿಗೆ ಇಲ್ಲಿನ ವಾತಾವರಣ ಹೊಸತು. ಚೀತಾಗಳು ಜನಿಸುವ ವೇಳೆ 240 - 425 ಗ್ರಾಂ. ಇರುತ್ತವೆ. ಜನನದ ಕೆಲವು ತಿಂಗಳುಗಳ ನಂತರ ತಾಯಿ ಚೀತಾವು ಬೇಟೆಯಾಡಲು ನೇರವಾಗಿ ಮರಿಗಳನ್ನು ಕಾಡಿನಲ್ಲಿ ಬಿಡುತ್ತವೆ. ಹೀಗಾಗಿ ಚೀತಾಗಳ ಖಾಸಗಿತನಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.